ಹುಣಸೂರು: ನಗರದ ಗ್ರಂಥಾಲಯ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಕ್ಷಣವೇ ಗ್ರಂಥಾಲಯವನ್ನು ನಗರಸಭೆ ಹಳೇ ಕಟ್ಟಡಕ್ಕೆ ಸ್ಥಳಾಂತರಿಸಿ ಎಂದು ಶಾಸಕ ಎಚ್. ವಿಶ್ವನಾಥ್ ಅವರು ಪೌರಾಯುಕ್ತೆ ವಾಣಿ ಎನ್. ಆಳ್ವರಿಗೆ ಸೂಚಿಸಿದರು.
ಗ್ರಂಥಾಲಯ ಕಟ್ಟಡದ ಮೊದಲ ಅಂತಸ್ತಿನ ವಿಸ್ತರಣಾ ಕಾಮಗಾರಿ ವೀಕ್ಷಿಸಿದ ಅವರು, ಗುಣಮಟ್ಟದ ಕಾಮಗಾರಿ ನಡೆಸಬೇಕು. ಕಟ್ಟಡಕ್ಕೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಬೇಕು,
ಈ ಹಿಂದೆ ಮೇಲ್ಛಾವಣಿ ಚುರುಕಿ ತೆಗೆದ ಸಂದರ್ಭದಲ್ಲಿ ಮಳೆ ನೀರು ಸೋರಿಕೆಯಾಗಿ ಹಲವಾರು ಪುಸ್ತಕಗಳು ಹಾಗೂ ಪೀಠೊಪಕರಣಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ಪಡೆದು, ತಕ್ಷಣವೇ ಗ್ರಂಥಾಲಯ ಸ್ಥಳಾಂತರ ಮಾಡಬೇಕು, ಪುಸ್ತಕಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕೆಂದು ಆದೇಶಿಸಿದರು.
ಈ ವೇಳೆ ನಗರಸಭೆ ಎಂಜಿನಿಯರ್ ಮಂಜುನಾಥ್, ಹಾಲಿ ಕೆಳ ಅಂತಸ್ತಿನ ಕಟ್ಟಡ ನಿರ್ಮಿಸುವಾಗಲೇ ಮೊದಲ ಅಂತಸ್ತಿಗೆ ತಕ್ಕಂತೆ ಕಟ್ಟಡ ನಿರ್ಮಿಸಿದ್ದು, ಪಿಲ್ಲರ್ ಅವಶ್ಯವಿಲ್ಲವೆಂದು ನಗರೋತ್ಥಾನ ಯೋಜನೆ ಕಾಮಗಾರಿ ಉಸ್ತುವಾರಿ ವಹಿಸಿರುವ ಬಾಬು ಕೌಶಿಕ್ ತಿಳಿಸಿದ್ದು, ಕಟ್ಟಡ ಸೋರಿಕೆಯಾಗಿರುವುದನ್ನು ನಿಲ್ಲಿಸಲಾಗಿದೆ.
ಇಡೀ ಕಟ್ಟಡದ ಗಾರೆ ತೆಗೆದು ಮರು ಪ್ಲಾಸ್ಟರಿಂಗ್ ನಡೆಸಿ, ಸುಣ್ಣ-ಬಣ್ಣ ಹೊಡೆದ ನಂತರ ಸರಿಯಾಗಲಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ನಗರಸಭೆ ಎಂಜಿನಿಯರ್‌ಗಳು, ಮಾಜಿ ಅಧ್ಯಕ್ಷರಾದ ಎಚ್.ವೈ.ಮಹದೇವ್, ಎಂ.ಶಿವಕುಮಾರ್, ಸದಸ್ಯರಾದ ಸತೀಶ್, ಯೋಗಾನಂದ ಹಾಜರಿದ್ದರು.