ಬೆಂಗಳೂರು: ಸಹೋದ್ಯೋಗಿ ವೈದ್ಯೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಘನತೆಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದಲ್ಲಿ ಉಡುಪಿ ಜಿಲ್ಲೆ ಕುಂದಾಪುರ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ರಾಬರ್ಟ್ ರೆಬೆಲ್ಲೊ ವಿರುದ್ಧ ದಾಖಲಿಸಲಾದ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಾಂತರ ತಡೆ ನೀಡಿದೆ.
ತಮ್ಮ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಎಫ್ಐಆರ್ ರದ್ದುಪಡಿಸಬೇಕು ಎಂದು ಕೋರಿ ಡಾ| ರೆಬೆಲ್ಲೊ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣಕ್ಕೆ ಮಧ್ಯಾಂತರ ತಡೆ ನೀಡಿ ಆದೇಶಿಸಿದೆ.
ಅಲ್ಲದೇ ಕುಂದಾಪುರ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿತು. 2ನೇ ಪ್ರತಿವಾದಿ ದೂರುದಾರೆ ಡಾ| ಎಚ್.ಪಿ. ಪಲ್ಲವಿ ಅವರಿಗೆ ತುರ್ತು ನೋಟಿಸ್ ಜಾರಿಗೆ ಆದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ದೂರುದಾರೆಗೆ ಅರ್ಜಿದಾರ ವೈದ್ಯರು 2024ರ ಮೇ 23ರಂದು ನೀಡಿದ್ದ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಕ್ಕೆ ಪ್ರತೀಕಾರವೆಂಬಂತೆ ದೂರು ದಾಖಲಿಸಿರುವಂತೆ ಮೇಲ್ನೋಟಕ್ಕೆ ತಿಳಿದುಬರುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ ಪ್ರಕರಣಕ್ಕೆ ಮುಂದಿನ ವಿಚಾರಣೆ ವರೆಗೆ ತಡೆ ನೀಡಿ ಆದೇಶಿಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ ಚೌಟ ವಾದ ಮಂಡಿಸಿದರು.