ಹುಣಸೂರು: ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಸೋತಿದ್ದಾರೆ. ಆದರೆ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಅವರೇ ಅತಿ ಹೆಚ್ಚು 52,998 ಮತಗಳಿಸಿ ದೊಡ್ಡ ಸಾಧನೆ ಮಾಡಿದ್ದಾರೆ. ಮುಂದಿನ ಸ್ಥಳಿಯ ಸಂಸ್ಥೆಗಳ ಚುನಾವಣೆ ಗೆಲುವಿಗೆ ದಿಕ್ಸೂಚಿಯಾಗಲಿದೆ ಎಂದು ಸತ್ಯ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಜೆಪಿ.ಮುಖಂಡ ಸತ್ಯಪ್ಪ ತಿಳಿಸಿದರು.
ಹಿಂದಿನ ಎಲ್ಲ ವಿಧಾನಸಭೆ ಚುನಾವಣೆಗಳಾದ 2018ರಲ್ಲಿ 6,406 ಮತ, 2013ರಲ್ಲಿ 4,500 ಮತಗಳಿಸಿತ್ತು. ಈಗ ವಿಶ್ವನಾಥ್ ಅದರ ಹತ್ತುಪಟ್ಟು ಮತಗಳಿಸಿದ್ದಾರೆ. ಈ ಬಾರಿ 12 ಕ್ಷೇತ್ರಗಳಲ್ಲಿ ಗೆದ್ದಿದ್ದು, ಯಡಿಯೂರಪ್ಪ ಸರ್ಕಾರ ಇನ್ನು ಮೂರೂವರೆ ವರ್ಷಗಳ ಕಾಲ ಸುಭದ್ರವಾಗಿರುತ್ತದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳಿರುವುದರಿಮದ ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗಿದೆ.
ಇಲ್ಲಿ ವಿಶ್ವನಾಥ್ ಗೆದ್ದಿದ್ದರೆ ತಾಲೂಕಿನಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗಿರುತ್ತಿತ್ತು. ಆದರೂ ಸರ್ಕಾರವಿರುವುದರಿಂದ ಚುನಾವಣೆಗೂ ಮುನ್ನ ವಿಶ್ವನಾಥ್ ನೀಡಿದ್ದ ವಾಗ್ಧಾನ ಈಡೇರಿಸಲು ಬದ್ಧವಾಗಿದ್ದಾರೆ. ನೂತನ ಶಾಸಕರ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡುತ್ತೇವೆ. ಆದರೆ ಸಣ್ಣಪುಟ್ಟ ಸಮಾಜದ ಮೇಲೆ ಪ್ರಕರಣ ದಾಖಲಿಸುವ ತಂತ್ರ ಮುಂದುವರಿಸಿದರೆ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಸೋಲಿಗೆ ಮುಖಂಡರೂ ಕಾರಣ: ಚುನಾವಣೆಯಲ್ಲಿ ಸಣ್ಣಪುಟ್ಟ ಸಮಾಜಗಳು ಸಂಘಟಿತರಾಗಿ ಬಿಜೆಪಿ ಬೆಂಬಲಿಸಿದ್ದರಿಂದ 52,998 ಮತ ಬಂದಿದೆ. ಸೋಲಿಗೆ ನಾವೆಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಇನ್ನಾದರೂ ಪದಾಧಿಕಾರಿಗಳು ಸಂಘಟಿತರಾಗಿ ಕೆಲಸ ಮಾಡುವ ಮೂಲಕ ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆಯನ್ನಾಗಿಸಲು ಎಲ್ಲಾ ವರ್ಗದ ಜನರ ವಿಶ್ವಾಸ ಪಡೆದು ಪಕ್ಷ ಸಂಘಟಿಸಬೇಕೆಂದು ಮುಖಂಡರಲ್ಲಿ ಮನವಿ ಮಾಡಿದರು.
ತಮ್ಮ ಸತ್ಯ ಫೌಂಡೇಶನ್ ಕನಸಿನ ಎಂಜಿನಿಯರಿಂಗ್, ಬಿ.ಇಡಿ, ಡಿಪ್ಲೋಮಾ ಕಾಲೇಜುಗಳ ಹಾಗೂ ಗಾರ್ಮೆಂಟ್ ಸ್ಥಾಪನೆ ಮತ್ತು ಲಕ್ಷ್ಮಣತೀರ್ಥ ನದಿ ಶುದ್ಧೀಕರಣ, ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಪಕ್ಷದ ಮೂಲಕ ಮುಖ್ಯಮಂತ್ರಿಗಳ ಮೇಲೆ ಪ್ರಾಮಾಣಿಕವಾಗಿ ಒತ್ತಡ ಕಾಹಿ ಕೆಲಸ ಮಾಡಿಸುತ್ತೇನೆಂದು ಹೇಳಿದರು.
ಎಂಎಲ್‌ಸಿ ಮಾಡಲು ಮನವಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಗದ್ದುಗೆ ಗೇರಲು ಕಾರಣರಾಗಿರುವ ಎಚ್.ವಿಶ್ವನಾಥ್ ಮತ್ತು ಸಿ.ಪಿ. ಯೋಗೇಶ್ವರ್‌ರನ್ನು ಎಂಎಲ್‌ಸಿ ಮಾಡಿ ಮಂತ್ರಿ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಗೊಂದುಳಿ ಸಮುದಾಯದ ತಾಲೂಕು ಅಧ್ಯಕ್ಷ ಆನಂದ್, ಬಿಜೆಪಿ ಮುಖಂಡರಾದ ರಾಕೇಶ್‌ರಾವ್, ನಾಗರಾಜು, ವಿಶ್ವ, ಪ್ರಕಾಶ್, ಮೂರ್ತಿ ಇದ್ದರು.