ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನ ಮತ್ತು ಕರ್ಣ ಮುಖಾಮುಖೀಯಾದಾಗ ವಾಗ್ಯುದ್ಧದಲ್ಲಿ ಕರ್ಣ ಅರ್ಜುನನಿಗೆ ನಿನಗಿಂತ ನಾನೇ ಶ್ರೇಷ್ಠ. ಜಗತ್ತಿನಲ್ಲಿ ನನ್ನಂತಹ ಶ್ರೇಷ್ಠ ಮಹಾಯೋಧ ಯಾರು ಇಲ್ಲವೆಂದು ಹೇಳುತ್ತಾನೆ. ಇದಕ್ಕೆ ಪ್ರತಿಯಾಗಿ ಅರ್ಜುನನು ನನಗೆ ಶ್ರೇಷ್ಠನಾಗುವ ಯಾವುದೇ ಮಹಾತ್ವಾಕಾಂಕ್ಷೆ ಇಲ್ಲ. ನಾನು ಉತ್ತಮನಾಗಿಯೇ ತೃಪ್ತನಾಗಿದ್ದೇನೆ ಎಂದು ಹೇಳುತ್ತಾನೆ.
ಶ್ರೇಷ್ಠತೆಯ ಅಮಲು ಮೈಗೇರಿದಾಗ ಮನುಷ್ಯನಿಗೆ ಮಾನವೀಯತೆಯೇ ಮರೆತು ಹೋಗುತ್ತದೆ. ಪ್ರೀತಿ, ಅಕ್ಕರೆಗಳು ಸತ್ತು ಹೋಗುತ್ತದೆ. ಶ್ರೇಷ್ಠತೆಯ ಹಿಂದೆ ಬಿದ್ದು ಮೃಗದ ಹಾಗೆ ವರ್ತಿಸಿ ಜಗತ್ತಿನ ಅಧಃಪತನಕ್ಕೆ ಮನುಷ್ಯ ಕಾರಣನಾಗುತ್ತಿದ್ದಾನೆ. ಮಾನವನು ಸಮ ಸಮಾಜದಲ್ಲಿ ಗುರಿ ಇಲ್ಲದೆ ಬಾಳಲು ಸಾಧ್ಯವಿಲ್ಲ.
ಆದರೆ ಗುರಿಯು ಪ್ರಕೃತಿ ಹಾಗೂ ಮಾನವ ಸಮಾಜ ಮತ್ತು ಜಗತ್ತಿಗೆ ಕುತ್ತು ಉಂಟಾಗಬಾರದು. ಇತಿಹಾಸದ ಪುಟಗಳನ್ನು ತೆಗೆದು ನೋಡಿದಾಗ ಹಿಟ್ಲರ್ ಮತ್ತು ಮುಸಲೋನಿಯ ಮಹಾತ್ವಾಕಾಂಕ್ಷೆ ಯಾವ ಮಟ್ಟಿನಲ್ಲಿತ್ತೆಂಬುದು ತಿಳಿಯುತ್ತದೆ. ಶ್ರೇಷ್ಠತೆಯ ಅಮಲಿನಲ್ಲಿ ನಡೆದ ಎರಡು ಮಹಾಯುದ್ಧಗಳ ಪಾಪದ ಫಲವನ್ನು ಮನುಷ್ಯ ಒಂದಲ್ಲ ಒಂದು ರೀತಿಯಲ್ಲಿ ಈಗಲೂ ಅನುಭವಿಸುತ್ತಿದ್ದಾನೆ.
ಜಗತ್ತಿನಾದ್ಯಂತ ನಡೆಯುತ್ತಿರುವ ಎಲ್ಲ ಯುದ್ಧಗಳಿಗೆ ಕಾರಣ ಶ್ರೇಷ್ಠತೆ. ಬಣ್ಣಗಳ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳಲು ಮೂರನೇ ಮಹಾಯುದ್ಧದ ಅಂಚಿನಲ್ಲಿ ಜಗತ್ತು ಬಂದು ನಿಂತಿದೆ. ಶ್ರೇಷ್ಠತೆಯ ಗುಂಗಿನಿಂದ ಹೊರಬಂದು ಮಾನವ ಉತ್ತಮನಾಗುವುದಿಲ್ಲವೇಕೆ? ಯಾಕೆಂದರೆ ಮಾನವನಲ್ಲಿ ಮಾನವೀಯತೆಯೇ ಇಲ್ಲದಂತಾಗುತ್ತಿದೆ. ಕಾಯಕವೆಂಬ ರಾಕ್ಷಸ ಮಾನವನನ್ನೇ ಸಂಪೂರ್ಣವಾಗಿ ಆವರಿಸಿದ್ದಾನೆ. ಅತ್ಯಾಚಾರ, ಕೊಲೆ, ಸುಲಿಗೆಗಳು ಈ ಶ್ರೇಷ್ಠ ಮಾನವನಿಂದಲೇ ಆಗುತ್ತಿವೆ. ಜಾತಿ ಮತ್ತು ವರ್ಣ ಶ್ರೇಷ್ಠತೆಯ ಆ ಮೇಲು ಮಾನವನನ್ನು ಇನ್ನೂ ಕೂಡ ಸಂಪೂರ್ಣವಾಗಿ ತ್ಯಜಿಸಿಲ್ಲ.
ವಿಜ್ಞಾನ ಮತ್ತು ಆವಿಷ್ಕಾರಗಳು ಎಷ್ಟೇ ಬೆಳವಣಿಗೆಗೆ ಸಂಬಂಧಿಸಿದರು ಕೂಡ ಜಾತೀಯತೆ ಇನ್ನೂ ಸಮಾಜದಿಂದ ತೊಲಗದೆ ಇರುವುದು ಮನುಕುಲವೇ ತಲೆತಗ್ಗಿಸಬೇಕಾದಂತಹ ಸಂಗತಿಯಾಗಿದೆ. ಜಗತ್ತನ್ನು ಮುಂದೆ ಕೊಂಡೊಯ್ಯಬೇಕಾದರೆ ಮಾನವನು ಉತ್ತಮನಾಗುವತ್ತ ಹೆಜ್ಜೆ ಇಡಬೇಕು. ಕರುಣಾ ಭಾವ ಮಾನವನ ಎದೆಯಲ್ಲಿ ಜನಿತವಾಗಬೇಕು. ಶ್ರೇಷ್ಠತೆಗಿಂತ ಉತ್ತಮನಾಗುವುದು ಅಗತ್ಯ ಎನ್ನುವುದನ್ನು ಅರಿಯಬೇಕು.
–
ಹನುಮೇಶ ಉಪ್ಪಾರ್
ಎಸ್ಡಿಎಂ, ಉಜಿರೆ