ಬೆಂಗಳೂರು: ಸಾಹಸಸಿಂಹ ಡಾ| ವಿಷ್ಣುವರ್ಧನ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ತೆಲುಗು ನಟ ವಿಜಯ ರಂಗರಾಜು ವಿರುದ್ಧ ಕನ್ನಡ ಚಿತ್ರರಂಗ ತಿರುಗಿಬಿದ್ದಿದೆ.
ಈಗಾಗಲೇ ವಿಷ್ಣು ಅಭಿಮಾನಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿ ವಿಜಯ ರಂಗರಾಜು ವಿರುದ್ಧ ಕ್ರಮ ಜರಗಿಸುವಂತೆ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ನಟರಾದ ಜಗ್ಗೇಶ್, ಸುದೀಪ್, ಪುನೀತ್, ಗಣೇಶ್, ನಿರ್ದೇಶಕ ಎಸ್. ನಾರಾಯಣ್ ಸಹಿತ ಚಿತ್ರರಂಗದ ಗಣ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದೀಪ್ ಎಚ್ಚರಿಕೆ
ಒಬ್ಬ ವ್ಯಕ್ತಿ ಬದುಕಿದ್ದಾಗ ಅವರ ಬಗ್ಗೆ ಮಾತನಾಡುವುದರಲ್ಲಿ ಗಂಡಸುತನ ಇರುತ್ತದೆ ಅನ್ನುವ ನಂಬಿಕೆ ನನ್ನದು. ಆಗ ತನ್ನ ಸತ್ಯ ಏನು ಎಂದು ಅವರು ಉತ್ತರ ಕೊಡುತ್ತಿದ್ದರು, ನಿಮ್ಮ ಸತ್ಯ ಏನು ಎಂದು ನೀವು ಉತ್ತರ ಕೊಡುತ್ತಿದ್ದಿರಿ. ಆದರೆ ಇವತ್ತು ಆ ವ್ಯಕ್ತಿ ನಮ್ಮ ಮಧ್ಯೆ ಇಲ್ಲದಿರುವಾಗ, ಎಷ್ಟೋ ಕೋಟಿ ಅಭಿಮಾನಿಗಳಿಗೆ ಆರಾಧ್ಯ ದೈವವಾಗಿರುವಾಗ ಅವರ ಬಗ್ಗೆ ಇಂಥ ಹೇಳಿಕೆ ನೀಡುವುದು ಬಹಳ ದೊಡ್ಡ ತಪ್ಪು. ಎಲ್ಲ ಸಿನೆಮಾ ಇಂಡಸ್ಟ್ರಿಗಳು ಬಾಂಧವ್ಯದಿಂದ ಮುನ್ನಡೆಯಬೇಕು ಎಂದು ನಾವು ಬಯಸುತ್ತಿರುವಾಗ, ನಿಮ್ಮಂತಹ ಒಬ್ಬ ನೀಡುವ ಇಂತಹ ಹೇಳಿಕೆಗಳಿಂದ ಎಲ್ಲವೂ ಚೂರಾಗಿ ಹೋಗುತ್ತದೆ. ನೀವು ಒಬ್ಬ ಹಿರಿಯ ಕಲಾವಿದರಾಗಿ ಮತ್ತೂಬ್ಬ ಚಿತ್ರರಂಗದ ಕಲಾವಿದನ ಬಗ್ಗೆ ಈ ರೀತಿ ಮಾತನಾಡಿರುವುದನ್ನು ನಿಮ್ಮ ಇಂಡಸ್ಟ್ರಿಯಲ್ಲೇ ಯಾರೂ ಒಪ್ಪುವುದಿಲ್ಲ. ನೀವು ವಿಷ್ಣು ಅವರ ಬಗ್ಗೆ ಏನು ಮಾತನಾಡಿದ್ದೀರೋ ಅದನ್ನು ವಾಪಸ್ ತೆಗೆದುಕೊಳ್ಳಿ’ ಎಂದು ಚಿತ್ರನಟ ಸುದೀಪ್ ಎಚ್ಚರಿಕೆ ನೀಡಿದ್ದಾರೆ.
“ಮೊದಲು ಮಾನವನಾಗು’ ಎಂದ ಪುನೀತ್
ಪುನೀತ್ ಅವರು ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಕಲಾವಿದನ ಮೊದಲ ಅರ್ಹತೆ ಎಂದರೆ, ಸಹೋದ್ಯೋಗಿ ಕಲಾವಿದರ ಬಗ್ಗೆ ಗೌರವ ಮತ್ತು ಪ್ರೀತಿ ತೋರುವುದು. ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನು ಹಿಂಪಡೆಯಬೇಕು. ಭಾರತೀಯ ಚಿತ್ರರಂಗ ನಮ್ಮ ಮನೆ. ಎಲ್ಲ ಕಲಾವಿದರು ಒಂದು ಕುಟುಂಬ. ಕಲೆ ಹಾಗೂ ಕಲಾವಿದರನ್ನು ಗೌರವಿಸುವುದು ನಮ್ಮ ಕರ್ತವ್ಯ. ಮೊದಲು ಮಾನವನಾಗು’ ಎಂದಿದ್ದಾರೆ. ನಟ ಗಣೇಶ್ ಕೂಡ ಟ್ವೀಟ್ ಮಾಡಿ, ವಿಷ್ಣು ದಾದಾ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆ ನಟ ಕೂಡಲೇ ಪತ್ರಿಕಾಗೋಷ್ಠಿ ಕರೆದು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾಲರ್ ಹಿಡಿಯಲು ಸಾಧ್ಯವೇ: ಅನಿರುದ್ಧ್
ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ಕೂಡ ರಂಗರಾಜು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. “ಅಪ್ಪಾವ್ರ ಬಗ್ಗೆ ವಿಜಯ್ ರಂಗರಾಜು ತುಂಬಾ ಕೆಟ್ಟದಾಗಿ ಮಾತನಾಡಿದ್ದಾರೆ. ಇದು ತುಂಬಾ ಬೇಸರದ ವಿಷಯ. ಇದರಿಂದ ನಮಗೆ, ಎಲ್ಲ ಅಭಿಮಾನಿಗಳಿಗೆ ಬೇಸರವಾಗಿದೆ. ಈ ವ್ಯಕ್ತಿ ಅಪ್ಪಾವ್ರ ಕಾಲರ್ ಹಿಡಿದೆ ಅಂದಿದ್ದಾರೆ. ಸಾಹಸಸಿಂಹ ಡಾ| ವಿಷ್ಣುವರ್ಧನ್ ಅವರ ಕಾಲರ್ ಹಿಡಿಯುವುದೇ? ಸಿಂಹದ ಕಾಲರ್ ಹಿಡಿಯಲು ಯಾರಿಂದ ಸಾಧ್ಯ? ಅವರಿಗೆ ಅಷ್ಟು ಧೈರ್ಯ ಇರುವುದೇ ಆಗಿದ್ದರೆ ಅಪ್ಪಾವ್ರು ಇದ್ದಾಗಲೇ ಈ ವಿಷಯ ಹೇಳಬೇಕಿತ್ತು. ಅಪ್ಪಾವ್ರು ಶಾರೀರಿಕವಾಗಿ ಇಲ್ಲವಾದ ಹನ್ನೊಂದು ವರ್ಷಗಳ ಬಳಿಕ ಇದನ್ನು ಹೇಳಿದ್ದಾರೆ ಎಂದರೆ ಆ ವ್ಯಕ್ತಿಗೆ ಎಷ್ಟು ಧೈರ್ಯ? ತೆಲುಗು ಇಂಡಸ್ಟ್ರಿಯವರಲ್ಲಿ ಒಂದು ವಿನಂತಿ, ದಯವಿಟ್ಟು ಆ ವ್ಯಕ್ತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ’ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.