Advertisement

ವಿದ್ಯಾಗಮ ಹೆಸರಿನಲ್ಲಿ ಸರ್ಕಾರದಿಂದ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ಲೋಕೇಶ್ ತಾಳಿಕಟ್ಟೆ

05:42 PM Oct 09, 2020 | Mithun PG |

ಬೆಂಗಳೂರು: ಕೋವಿಡ್-19 ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರವು, ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳನ್ನು ಕಡೆಗಣಿಸುತ್ತಿದೆ. ಸರ್ಕಾರದ ಧೋರಣೆಯಿಂದ ಸಾವಿರಾರು ಖಾಸಗಿ ಶಾಲೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ಸಂಪೂರ್ಣವಾಗಿ ಮುಚ್ಚಲ್ಪಟ್ಟಿವೆ. ರಾಜ್ಯ ಸರ್ಕಾರದಿಂದ ಖಾಸಗಿ ಶಾಲೆಗಳಿಗೆ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಗಳಿಗೆ ಅನ್ಯಾಯವಾಗುತ್ತಿದೆ. ವಿದ್ಯಾಗಮ ಹೆಸರಿನಲ್ಲಿ ರಾಜ್ಯ ಸರ್ಕಾರ ಕೋವಿಡ್ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತಿದೆ ಎಂದು ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಆರೋಪಿಸಿದರು.

Advertisement

ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ತನ್ನ ಅಧೀನದ ಶಾಲೆಗಳಿಗೆ ಶೈಕ್ಷಣಿಕ ಚಟುವಟಿಕೆಗಳ ಮತ್ತ ಶೈಕ್ಷಣಿಕ ವೇಳಾ ಪಟ್ಟಿಯ ಕುರಿತು ಸ್ಪಷ್ಟ ಮಾರ್ಗಸೂಚಿ ಹೊರಡಿಸಿದೆ. ಆದರೆ ರಾಜ್ಯ ಸರ್ಕಾರ ಈವರೆಗೂ ಅಂತಹ ಯಾವ ನಿರ್ದೇಶನಗಳನ್ನು ನೀಡಿಲ್ಲ. ಎಷ್ಟು ಪಾಠ ಮಾಡಬೇಕು, ಯಾವೆಲ್ಲಾ ವಿಷಯಗಳು ಈ ವರ್ಷದ ಶೈಕ್ಷಣಿಕ ಚಟುವಟಿಕೆಯಲ್ಲಿ ಇವೆ ಎಂದು ಗೊತ್ತಾಗುತ್ತಿಲ್ಲ. ಒಮ್ಮೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ ಎನ್ನುತ್ತಾರೆ, ಮತ್ತೊಮ್ಮೆ ಶುಲ್ಕ ವಸೂಲಿ ಮಾಡಬೇಡಿ ಎನ್ನುತ್ತಾರೆ.

ಸರ್ಕಾರದ ಈ ರೀತಿಯ ನಿರ್ಧಾರಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ದಯನೀಯ ಸ್ಥಿತಿಗೆ ಬಂದಿದೆ. ಇಡೀ ವ್ಯವಸ್ಥೆ ಕೋವಿಡ್ ನಲ್ಲಿ ಸಿಲುಕಿಕೊಂಡಿದೆ. ಸರಕಾರ ಸ್ಪಷ್ಟ ನಿರ್ದೇಶನಗಳನ್ನು ಕೊಟ್ಟರೆ, ಅದನ್ನು ಅನುಸರಿಸಲು ನಾವು ಸಿದ್ಧರಿದ್ದೇವೆ. ಒಂದು ವ್ಯವಸ್ಥೆಯನ್ನು ನಾಶ ಮಾಡಿ, ಮತ್ತೊಂದು ವ್ಯವಸ್ಥೆಯನ್ನು ಸರಿಪಡಿಸುತ್ತೇವೆ ಎನ್ನುವುದು ಐತಿಹಾಸಿಕವಾಗಿ ಸುಳ್ಳಾಗಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ, ಆದ್ರೆ ಎಲ್ಲ ಖಾಸಗಿ ಶಾಲೆಗಳನ್ನು ಹಾಳು ಮಾಡಿ ಅವುಗಳನ್ನು ಉಳಿಸುತ್ತೇವೆ ಅನ್ನೋದು ಎಷ್ಟು ಸರಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಜ್ಯುವೆಲ್ಲರಿ ಅಂಗಡಿ ಮುಂಭಾಗ 20 ಗಂಟೆ ಲೇಖಕಿ ಪ್ರತಿಭಟನೆ: ಕೊನೆಗೂ ಕ್ಷಮೆ ಕೇಳಿದ ಮಾಲೀಕ!

ನಮ್ಮ ಮೇಲೆ ಆರೋಪ ಮಾಡೋದನ್ನು ಮೊದಲು ಬಿಡಲಿ:

Advertisement

ಖಾಸಗಿ ಶಾಲೆಗಳು ಅನ್ ಲೈನ್ ತರಗತಿ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿವೆ ಎಂಬ ಆರೋಪದ ಬಗ್ಗೆ ಮಾತನಾಡಿ, ನಾವು ಗ್ರಾಮೀಣ ಭಾಗದಲ್ಲಿ ತುಂಬಾ ಕಡಿಮೆ ಹಣ ಪಡೆದು ಗುಣಮಟ್ಟ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆಗಳನ್ನು ನಡೆಸುತ್ತಿದ್ದೇವೆ. ಸರ್ಕಾರ ತಲುಪದ ಭಾಗಗಳಲ್ಲೂ ನಾವು ಶಾಲೆಗಳನ್ನು ಆರಂಭಿಸಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇವೆ. ಸರ್ಕಾರ ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೆ 40 ಸಾವಿರ ಖರ್ಚು ಮಾಡುತ್ತಿದೆ. ನಾವು 10 ಸಾವಿರಕ್ಕಿಂತ ಕಡಿಮೆ ಶುಲ್ಕ ಪಡೆದು ಶಿಕ್ಷಣ ನೀಡುತ್ತಿದ್ದೇವೆ. ಇದರಲ್ಲಿ ಶ್ರೀಮಂತರಾಗುವ ದುರುದ್ದೇಶ ಇಲ್ಲ. ನಗರ ಪ್ರದೇಶದಲ್ಲಿರುವ ಕಾರ್ಪೋರೇಟ್ ಖಾಸಗಿ ಶಾಲೆಗಳನ್ನು ನೋಡಿ ಎಲ್ಲರೂ ಅದೇ ರೀತಿ ಇರುತ್ತಾರೆ ಎಂದು ವಕ್ರದೃಷ್ಟಿಯಿಂದ ನಮ್ಮನ್ನು ಕಾಣಬೇಡಿ ಎಂದು ಮಾಡಿಕೊಂಡರು.

ಶಾಲೆಗಳನ್ನು ತೆರೆಯಲು ನಾವು ಸಿದ್ಧರಿಲ್ಲ

ಕೋವಿಡ್ ನಿಂದ  ಇಡೀ ಜಗತ್ತು ತಲ್ಲಣಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ನಮಗೆ ಶಾಲೆಗಳನ್ನು ತೆರೆಯಲು ಸುತಾರಾಂ ಒಪ್ಪಿಗೆ ಇಲ್ಲ. ಏಕಾಏಕಿ ಶಾಲೆ ಶುರುಮಾಡಲು ಸಾಧ್ಯವಿಲ್ಲ, ಹಂತ ಹಂತವಾಗಿ ಹಣಕಾಸು ಹೊಂದಿಸಿಕೊಳ್ಳಬೇಕಿದೆ. ಸಾಲ ತೀರಿಸಲಾಗುತ್ತಿಲ್ಲ, ವಾಹನಗಳ ಸಾಲದ ಕಂತು ಪಾವತಿಸಿಲ್ಲ ಎಂದು ಅವುಗಳನ್ನು ಜಪ್ತಿ ಮಾಡುತ್ತಿದ್ದಾರೆ. ಸರ್ಕಾರ ಸಾಲದ ಕಂತುಗಳಿಗೆ ಕನಿಷ್ಟ ಒಂದು ವರ್ಷ ವಿನಾಯಿತಿ ಕೊಟ್ಟಿಲ್ಲ. ಶಿಕ್ಷಕರಿಗೆ ವೇತನ ಇಲ್ಲದೆ ಬೀದಿ ಸುತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಗೊಂದಲಮಯ ಆದೇಶಗಳು ಗ್ರಾಮೀಣ ಪ್ರದೇಶದಲ್ಲಿರುವ ಖಾಸಗಿ ಶಾಲೆಗಳ ಕತ್ತು ಹಿಸುಕುತ್ತಿವೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಶೇ 21 ಸಾವಿರ ಶಾಲೆಗಳಿವೆ, ನಗರ ಪ್ರದೇಶದಲ್ಲಿ ಒಂದು ಸಾವಿರ ಕಾರ್ಪೊರೇಟರ್ ಶಾಲೆಗಳಿದ್ದರೆ, ಉಳಿದ 20 ಸಾವಿರ ಶಾಲೆಗಳು ಗ್ರಾಮೀಣಭಾಗದಲ್ಲಿವೆ. ಒಂದು ಕೋಟಿ ವಿದ್ಯಾರ್ಥಿಗಳಿದ್ದಾರೆ. ಆರ್ಥಿಕತೆಗೆ ಸರಿ ಸುಮಾರು ಶೇ.15ರಿಂದ 20 ರಷ್ಟು ನಮ್ಮ ಕೊಡುಗೆ ಇದೆ. ಕೋವಿಡ್ ನಿಂದಾಗಿ ಎಲ್ಲವೂ ಸ್ಥಗಿತಗೊಂಡಿದೆ. ರಾಜ್ಯ ಸರ್ಕಾರ ಕೂಡಲೇ ವಿಶೇಷ ಪ್ಯಾಕೇಜ್ ನೀಡಿ ನೇರವಾಗಬೇಕು ಎಂದು ಮನವಿ ಮಾಡಿದರು. ಹಾಗೇ ಆನ್ ಲೈನ್ ಶಿಕ್ಷಣಕ್ಕೆ ಸರ್ಕಾರ ಸ್ಪಷ್ಟವಾದ ಮಾರ್ಗಸೂಚಿಗಳನ್ನು ನೀಡಲಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ:  ಮಂಗಳೂರು: ಹೆಬ್ಬಾವು ಕಚ್ಚಿದರೂ ಅಳುಕದೆ ಅದರ ತಲೆಮೇಲೆ ಕಾಲಿಟ್ಟು ಸೆರೆಹಿಡಿದ 10ರ ಪೋರ !

ಸುದ್ದಿಗೋಷ್ಠಿಯಲ್ಲಿ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ ಕಾರ್ಯದರ್ಶಿ ಶಶಿ ಕುಮಾರ್ ದಿಂಡೂರು, ಉಪಾಧ್ಯಕ್ಷರಾದ ಉಮಾಪ್ರಭಾಕರ್, ಜಂಟಿ ಕಾರ್ಯದರ್ಶಿ ಕೋಟ್ರೇಶ್ ಸಂಘಟಕರಾದ ಜೈರಂಗನಾಥ್, ನಿರ್ದೇಶಕರಾದ ನಾಗರಾಜ್ ಹಾಗೂ ಕೋಶಾಧಿಕಾರಿ ಶಿವ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next