ಚನ್ನಪಟ್ಟಣ: ಗ್ರಾಮದ ರಸ್ತೆ ಅವ್ಯವಸ್ಥೆ ಯಿಂದ ರೋಸಿ ಹೋದ ತಾಲೂಕಿನ ಸಾದರಹಳ್ಳಿ ಗ್ರಾಮದ ಮಹಿಳೆಯರು ರಸ್ತೆಯಲ್ಲಿ ನಾಟಿಮಾಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಗ್ರಾಮದಿಂದ ಅಕ್ಕೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಗ್ರಾಮದ ಕೆಲ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಪಾದಚಾರಿಗಳು ಸಹ ನಡೆಯಲು ಆಸಾಧ್ಯ ಎಂಬ ಪರಿಸ್ಥಿತಿ ತಲುಪಿವೆ.
ಗ್ರಾಮದ ರಸ್ತೆ ಅವ್ಯವಸ್ಥೆಯಿಂದ ಆಕ್ರೋಶಗೊಂಡು ಗ್ರಾಮದ ಬೀದಿಯೊಂದರ ಮಹಿಳೆಯರು ರಸ್ತೆಯಲ್ಲಿ ನಾಟಿ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಗ್ರಾಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಗ್ರಾಮದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ಸುರಿದ ಮಳೆಯಿಂದ ರಸ್ತೆಯೆಲ್ಲ ಕೆಸರು ಗದ್ದೆಯಾಗಿದನ್ನು ಕಂಡು ರೋಸಿಹೋಗಿ, ಗ್ರಾಮದ ಮಹಿಳೆಯರು ರಸ್ತೆಯಲ್ಲಿ ಪೈರು ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ;- ಭಾರತದಲ್ಲಿ ಮಂದಿರ, ಮಸೀದಿ ಕಟ್ಟುವ ಸ್ವಾತಂತ್ರ್ಯವಿದೆ, ಜಗತ್ತಿನ ಹಲವೆಡೆ ಅಸಾಧ್ಯ: ಮಿಶ್ರಾ
ಸುಮಾರು 250ಕ್ಕೂ ಹೆಚ್ಚಿನ ಕುಟುಂಬಗಳು ವಾಸಿಸುವ ಗ್ರಾಮದಲ್ಲಿ ಹಲವು ವರ್ಷಗಳಿಂದ ಈ ಸಮಸ್ಯೆಯಿದ್ದರೂ ಯಾರೊಬ್ಬರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಮಳೆ ಬಂದಾಗ ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಈ ಸಂಬಂಧ ಗ್ರಾಪಂ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ಹಾಗೂ ಚರಂಡಿ ಅವ್ಯವಸ್ಥೆಯಿಂದ ಕಲುಷಿತ ನೀರು ಮನೆಯ ಮುಂದೆ ಶೇಖರಣೆಯಾಗಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗುತ್ತಿದೆ ಎಂದು ಆಳಲು ತೋಡಿಕೊಂಡರು. ಇನ್ನೆರಡು ದಿನಗಳಲ್ಲಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.