ವಿಜಯಪುರ: ನಗರದಲ್ಲಿರುವ ಶಾಲೆಯೊಂದರ ಗೋಡೆ ಕುಸಿದು ಇಬ್ಬರು ವಿದ್ಯಾರ್ಥಿನಿಯರು ಗಾಯಗೊಂಡಿರುವ ಘಟನೆ ಸೋಮವಾರ ಸಂಭವಿಸಿದೆ.
ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂಬರ್ 1 ರಲ್ಲಿ ಗೋಡೆ ಕುಸಿದು 8ನೇ ತರಗತಿಯಲ್ಲಿ ಓದುತ್ತಿರುವ ಜುನೇರಾ ಚೋಕದಾರ ಹಾಗೂ ಹುಷ್ನಾ ಫತೇಪೂರ ಎಂಬ ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ.
ಶಾಲೆಯಲ್ಲಿ ಮಧ್ಯಾಹ್ನದ ಊಟದ ಬಳಿಕ ಕೈ ತೊಳೆಯಲೆಂದು ಹಳೆಯ ತರಗತಿಯಲ್ಲಿದ್ದ ತೊಟ್ಟಿಗೆ ಹೋಗಿದ್ದಾಗ ಗೋಡೆಯ ಕಲ್ಲು ಕುಸಿದು ತಲೆ ಮೇಲೆ ಬಿದ್ದ ಕಲ್ಲುಗಳಿಂದ ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಗೋಡೆ ಹಳೆಯದಾಗಿದ್ದು, ಶಿಥಿಲಾವಸ್ಥೆ ತಲುಪಿದ್ದರೂ ದುರಸ್ತಿಗೆ ಮುಂದಾಗದಿರುವುದೆ ಘಟನೆಗೆ ಕಾರಣ ಎಂದು ದೂರಲಾಗಿದೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಶಿಕ್ಷಕರು, ಗಾಯಾಳು ವಿದ್ಯಾರ್ಥಿನಿಯರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಜುನೇರಾ ತೆಲೆಗೆ 7-8 ಹೊಲಿಗೆ ಹಾಕುವ ಮಟ್ಟಿಗೆ ಗಾಯಗಳಾಗಿವೆ.
ಇಬ್ಬರು ವಿದ್ಯಾರ್ಥಿನಿಯರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅಪಾಯದಿಂದ ಪಾರಾಗಿದ್ದಾರೆ.