ವಿಜಯಪುರ: ವಿಜಯಪುರ ನಗರದಲ್ಲಿ ವಕೀಲರ ಸಂಘದಿಂದ ಫೆ.7 ರಿಂದ 11 ರ ವರೆಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ವಿಜಯಪುರ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಈರಣ್ಣ ಚಾಗಶಟ್ಟಿ ಹೇಳಿದರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕ್ರಿಕೆಟ್ ಪಂದ್ಯಾವಳಿಯ ವಿವರ ನೀಡಿದ ಅವರು, ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದರು.
ಕೇರಳ ಮೂಲದ ತಜ್ಞರಿಂದ ಪಿಚ್ ರೂಪಿಸಲಾಗಿದ್ದು, ಹೊನಲು, ಬೆಳಕಿನ ಪಂದ್ಯಾವಳಿ ಆಗಿರುವ ಕಾರಣ ಎಲ್.ಇ.ಡಿ. ಬಲ್ಬ್ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಪ್ರತಿ ತಂಡಗಳಿಗೆ 15 ಸಾವಿರ ರೂ. ಪ್ರವೇಶ ಶುಲ್ಕವಿದ್ದು, ನಗರಕ್ಕೆ ಆಗಮಿಸುವ ಸ್ಪರ್ಧಿಗಳಿಗೆ ಇತರರಿಗೆ ಸೂಕ್ತ ವಸತಿ, ಊಟದ ವ್ಯವಸ್ಥೆ ಮಾಡಿದ್ದೇವೆ ಎಂದು ವಿವರಿಸಿದರು.
ಲೀಗ ಹಂತದಲ್ಲಿ 10 ಓವರ್ ನ ಪಂದ್ಯ ನಡೆದರೆ, ನಾಕೌಟ್ ಹಂತದಲ್ಲಿ 12 ಓವರ್ ಪಂದ್ಯ ಇರಲಿದೆ. ಅಂತಿಮ ಪಂದ್ಯ 15 ಓವರ್ ಗಳಿಂದ ಕೂಡಿರಲಿದೆ. ಪ್ರಥಮ ಬಹುಮಾನ ಎಸ್.ಎಸ್. ಮೂಡಲಗಿ ಪ್ರಾಯೋಜಿತ 1 ಲಕ್ಷ ರೂ., ಎರಡನೇ ಬಹುಮಾನ ಎಂ.ಎಚ್. ಖಾಸನೀಸ ಪ್ರಾಯೋಜಿತ 50 ಸಾವಿರ ರೂ. ಮೂರನೇ ಬಹುಮಾನ ಎಸ್.ಪಿ.ಮಾನೆ ಪ್ರಾಯೋಜಿತ 25 ಸಾವಿರ ರೂ. ಇದೆ ಎಂದು ವಿವರಿಸಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ 30 ತಂಡಗಳು ಪಾಲ್ಗೊಳ್ಳುತ್ತಿದ್ದು, ಬಿಎಲ್.ಡಿ.ಇ. ಕ್ಯಾಂಪಸ್ ಮೈದಾನದಲ್ಲಿ ನಿತ್ಯವೂ 10 ಪಂದ್ಯಗಳ ಆಯೋಜಿಸಲಾಗುತ್ತದೆ ಎಂದರು.
ಜಿಲ್ಲಾ ನ್ಯಾಯಾಧೀಶರಾದ ಸಂಜೀವ ನಲವಡೆ ಅವರು ಪಂದ್ಯಾವಳಿಗೆ ಚಾಲನೆ ನೀಡಲಿದ್ದು, ಶಾಸಕ ಸುನಿಲಗೌಡ ಪಾಟೀಲ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ. ಈರಣ್ಣ ಚಾಗಶೆಟ್ಟಿ, ಸಂಜೀವ ಜಹಗೀರದಾರ, ಎಸ್.ಎಸ್. ಮೂಡಲಗಿ, ವಿ.ಎನ್.ಪಾಟೀಲ, ಸಂಗಮೇಶ ಡೊಂಗರಗಾಂವಿ, ಬಸವರಾಜ ಸೋರಗಾಂವ, ಡಿ.ಜಿ.ಬಿರಾದಾರ, ರಾಜಶೇಖರ, ಕುಮಾರ ನಿಡೋಣಿ, ಕ್ರಿಕೆಟ್ ಪಂದ್ಯಾವಳಿ ಸಂಘಟಕ ಜಾಫರ ಅಂಗಡಿ ಇತರರು ಉಪಸ್ಥಿತರಿದ್ದರು.