ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರಿಕೆಟ್ ಮೈದಾನದ ಸ್ಟಾಂಡ್‌ಗೆ ಭಾರತ ವನಿತಾ ಕ್ರಿಕೆಟ್ ತಂಡದ ಮಾಜಿ ನಾಯಕಿ, ಕನ್ನಡತಿ ಶಾಂತಾ ರಂಗಸ್ವಾಮಿ ಅವರ ಹೆಸರಿಡುವಂತೆ ಆಗ್ರಹ ಜೋರಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪತ್ರ ಬರೆದಿರುವ ಮಾಜಿ ಮಹಿಳಾ ಕ್ರಿಕೆಟರ್‌ಗಳು, ಸ್ಟಾಂಡ್‌ಗಳಿಗೆ ಹೆಸರಿಡಲು ಪುರುಷ ಕ್ರಿಕೆಟರ್ ಗಳ ಹೆಸರನ್ನು ಮಾತ್ರ ಪರಿಗಣಿಸಿರುವ ಕರ್ನಾಟಕ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ನಿಲುವನ್ನು ಪ್ರಶ್ನಿಸಿದ್ದಾರೆ. ಸ್ವತಃ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಇತ್ತೀಚೆಗೆ ಕೆಎಸ್‌ಸಿಎಗೆ ಪತ್ರ ಬರೆದು ರಾಜ್ಯದ ಖ್ಯಾತ ಕ್ರಿಕೆಟಿಗರ ಹೆಸರು ಪರಿಗಣಿಸಬೇಕೆಂದು ಸೂಚಿಸಿದ್ದರು. ಹೀಗಿದ್ದರೂ ಕೆಎಸ್‌ಸಿಎ ಪಟ್ಟಿಯಲ್ಲಿ ಶಾಂತಾ ಹೆಸರು ಕಾಣಿಸುತ್ತಿಲ್ಲ ಎಂದು ಬೇಸರಿಸಲಾಗಿದೆ.
ಪತ್ರ ಬರೆದಿರುವ ಮಾಜಿ ಮಹಿಳಾ ಕ್ರಿಕೆಟರ್‌ಗಳಾದ ಮೀರಾ ಐಯ್ಯರ್, ಜಾಹ್ನವಿ ಆರ್.ದೇಸಾಯಿ, ಧರಣಿ ಕೊಂಗೋವಿ, ಡಿ.ಜಯಶ್ರೀ, ರಾಚೆಲ್ ಶೆಟ್ಟಿ, ವಿ.ಕಲ್ಪನಾ, ಮುಕ್ತಾ ಅಲ್ಗೆರಿ, ಲೀನಾ ಪ್ರಸಾದ್, ಗಾಯತ್ರಿ ಕೆ.ಆರ್., ಹೇಮಲತಾ, ವಿ.ಗಾಯತ್ರಿ, ಪುಷ್ಪಾ ಜಿ.ಕುಮಾರ್, ಎಸ್.ಕೆ.ಜಾಹ್ನವಿ, ಗಾಯತ್ರಿ ವಿಜಯೇಂದ್ರ, ಅನಿತಾ ಕಾಶೀನಾಥ್, ಕಾಂತಿಮತಿ, ಮಾಲಾ ಸುಂದರೇಶನ್, ಜಹಾನಾರಾ ಉಸ್ಮಾನ್, ಅನುರಾಧಾ ಪ್ರಸಾದ್ ಚಿನ್ನಸ್ವಾಮಿ ಸ್ಟಾಂಡ್ ಗೆ ಶಾಂತಾ ರಂಗಸ್ವಾಮಿ ಹೆಸರಿಡುವಂತೆ ಒತ್ತಾಯಿಸಿದ್ದಾರೆ.
ಏನೀ ವಿವಾದ? ಹಿನ್ನೆಲೆಯೇನು?
ಚಿನ್ನಸ್ವಾಮಿಯಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆದು 50 ವರ್ಷಗಳಾದ ಹಿನ್ನೆಲೆಯಲ್ಲಿ, ಮೈದಾನದ ಸ್ಟಾಂಡ್‌ಗಳಿಗೆ ಖ್ಯಾತ ಕ್ರಿಕೆಟಿಗರ ಹೆಸರಿಡಲು ಕೆಎಸ್‌ಸಿಎ ನಿರ್ಧರಿಸಿತ್ತು. ಎರ್ರಪ್ಪಳ್ಳಿ ಪ್ರಸನ್ನ, ಜಿ.ಆರ್. ವಿಶ್ವನಾಥ್, ಬಿ.ಎಸ್.ಚಂದ್ರಶೇಖರ್, ಸೈಯದ್ ಕಿರ್ಮಾನಿ, ಬ್ರಿಜೇಶ್ ಪಟೇಲ್, ರೋಜರ್ ಬಿನ್ನಿ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್ ಮತ್ತು ವೆಂಕಟೇಶ್ ಪ್ರಸಾದ್ ಹೆಸರಿಡಲು ಕೆಎಸ್‌ಸಿಎ ತೀರ್ಮಾನಿಸಿತ್ತು. ಈ ಪಟ್ಟಿಯಲ್ಲಿ ಒಬ್ಬರೇ ಒಬ್ಬರು ಮಹಿಳಾ ಕ್ರಿಕೆಟರ್ ಹೆಸರಿಲ್ಲದ ಬಗ್ಗೆ ಆರಂಭದಿಂದಲೇ ಅಸಮಾಧಾನ ವ್ಯಕ್ತವಾಗಿತ್ತು. ಆಗಿನಿಂದಲೂ ಚಿನ್ನಸ್ವಾಮಿಯ ಒಂದು ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿಯ ಹೆಸರು ಇಡುವಂತೆ ಒತ್ತಾಯ ಶುರುವಾಗಿತ್ತು.
ಭಾರತ ಕ್ರಿಕೆಟ್ ತಂಡದ ಮೊದಲ ನಾಯಕಿ ಶಾಂತಾ
1954 ಚೆನ್ನೈಯಲ್ಲಿ ಜನಿಸಿರುವ, ಈಗ 70 ವರ್ಷ ವಯಸ್ಸಿನ ಶಾಂತಾ ರಂಗಸ್ವಾಮಿ ಕರ್ನಾಟಕ ಪರ ಅನೇಕ ಪಂದ್ಯಗಳನ್ನಾಡಿದ್ದಾರೆ. ಬ್ಯಾಟಿಂಗ್ ಆಲ್‌ರೌಂಡರ್ ಆಗಿದ್ದ ಅವರು, ಭಾರತ ವನಿತಾ ತಂಡದ ಪರ 16 ಟೆಸ್ಟ್ ಪಂದ್ಯಗಳಲ್ಲಿ 750 ರನ್, 21 ವಿಕೆಟ್, 19 ಏಕದಿನ ಪಂದ್ಯಗಳಲ್ಲಿ 287 ರನ್, 12 ವಿಕೆಟ್ ಉರುಳಿಸಿದ್ದಾರೆ.
ಭಾರತೀಯ ಮಹಿಳಾ ತಂಡವನ್ನು ಮುನ್ನಡೆಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಇರುವ ಇವರು ಚಿನ್ನಸ್ವಾಮಿಯಲ್ಲಿ ಸಿಕ್ಸರ್ ಸಿಡಿಸಿದ ಮೊದಲ ಕನ್ನಡತಿ ಎನಿಸಿದ್ದಾರೆ. ಇವರಿಗೆ 1976ರಲ್ಲಿ ಅರ್ಜುನ ಪ್ರಶಸ್ತಿ ಲಭಿಸಿತ್ತು