Advertisement

ವಿಜಯಪುರ: ದ್ರಾಕ್ಷಿ ಬೆಳೆಗಾರರ ಚಿಂತನ ಸಭೆ; ಒಣ ದ್ರಾಕ್ಷಿಗೆ ಬೆಂಬಲ ಘೋಷಣೆಗೆ ಆಗ್ರಹ

08:03 PM Aug 05, 2023 | Vishnudas Patil |

ವಿಜಯಪುರ: ಒಣದ್ರಾಕ್ಷಿಗೆ ಬೆಂಬಲ ಬೆಲೆ ಘೋಷಿಸುವ ಮೂಲಕ ಕೇಂದ್ರ-ರಾಜ್ಯ ಸರ್ಕಾರಗಳು ದ್ರಾಕ್ಷಿ ಬೆಳೆಗಾರರ ನೆರವಿಗೆ ಬರಬೇಕು. ಇದಕ್ಕಾಗಿ ಆ.11 ರಂದು ಬೆಳಗಾವಿ ಜಿಲ್ಲೆಯ ಅಥಣಿಗೆ ಭೇಟಿ ನೀಡುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಲು ಮಠಾಧೀಶರ ನೇತೃತ್ವದಲ್ಲಿ ನಡೆದ ದ್ರಾಕ್ಷಿ ಬೆಳೆಗಾರರ ಚಿಂತನ ಸಭೆಯಲ್ಲಿ ನಿರ್ಧರಿಸಲಾಗಿದೆ.

Advertisement

ಶನಿವಾರ ನಗರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಮಠಾಧೀಶರ ನೇತೃತ್ವದಲ್ಲಿ ನಡೆದ ದ್ರಾಕ್ಷಿ ಬೆಳೆಗಾರರ ಚಿಂತನ ಸಭೆಯಲ್ಲಿ ನಡೆದ ಸುದೀರ್ಘ ಚರ್ಚೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೇ ಚಿಂತನ ಸಭೆಯಲ್ಲಿ ಚರ್ಚಿಸಿ, ನಿರ್ಧರಿಸಿದ ಬೇಡಿಕೆಗಳ ಈಡೇರಿಕೆ ಕುರಿತು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಮೂಲಕ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮಸಬಿನಾಳದ ಸಿದ್ಧರಾಮ ಶ್ರೀಗಳು, ಬೆಲೆ ಕುಸಿತದಿಂದಾಗಿ ಒಣ ದ್ರಾಕ್ಷಿ ಬೆಳೇಗಾರರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೂಡಲೇ ಒಣದ್ರಾಕ್ಷಿಗೆ ಬೆಂಬಲ ಬೆಲೆ ಯೋಜನೆಯಲ್ಲಿ ಒಣದ್ರಾಕ್ಷಿ ಖರೀದಿಸಬೇಕು. ಖರೀದಿಸಿದ ಒಣದ್ರಾಕ್ಷಿಯನ್ನು ಅಂಗನವಾಡಿ ಮಕ್ಕಳಿಗೆ, ಅಕ್ಷರ ದಾಸೋಹ ಯೋಜನೆಯಲ್ಲಿ ಶಾಲಾ ಮಕ್ಕಳಿಗೆ, ಸೈನಿಕರಿಗೆ ವಿತರಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ರೈತರು ವರ್ಷ ಹಲವು ಕಾರಣಗಳಿಂದ ಸಂಕಷ್ಟದಲ್ಲಿದ್ದು, ದ್ರಾಕ್ಷಿ ಬೆಳೆಗಾರರ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಒಣದ್ರಾಕ್ಷಿ ಸೇವನೆಯಿಂದ ಹಲವು ರೀತಿಯ ಪೌಷ್ಠಿಕಾಂಶ ಲಭ್ಯವಾಗಲಿದ್ದು, 20 ಕ್ಕೂ ಹೆಚ್ಚು ರೋಗಗಳಿಗೆ ಔಷಧಿ ರೂಪದಲ್ಲಿ ಕೆಲಸ ಮಾಡಲಿದೆ.

ದೇವರಹಿಪ್ಪರಗಿಯ ವೀರಗಂಗಾಧರ ಶ್ರೀಗಳು ಮಾತನಾಡಿ, ದ್ರಾಕ್ಷಿ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದ್ದು, ಇದರಲ್ಲಿ ವಿಜಯಪುರ ಜಿಲ್ಲೆಯ ಉತ್ಪಾದನೆಯೇ ಶೇ.70 ರಷ್ಟಿದೆ. ಉಳಿದಂತೆ ಬಾಗಲಕೋಟೆ, ಬೆಳಗಾವಿ ಸೇರಿದಂತೆ ಇತರೆ ಜಿಲ್ಲೆಗಳಲ್ಲೂ ದ್ರಾಕ್ಷಿ ಬೆಳೆಯಲಾಗುತ್ತಿದೆ, ಆದರೆ ಒಣದ್ರಾಕ್ಷಿ ಉತ್ಪಾದನೆಯಲ್ಲಿ ವಿಜಯಪುರ ಜಿಲ್ಲೆ ಅಗ್ರ ಸ್ಥಾನದಲ್ಲಿದ್ದು, ವಾರ್ಷಿಕ ಒಟ್ಟು ಉತ್ಪಾದನೆಯಲ್ಲಿ ಶೇ.90 ರಷ್ಟು ಹಸಿದ್ರಾಕ್ಷಿ ಒಣದ್ರಾಕ್ಷಿಯಾಗಿ ಪರಿವರ್ತನೆಗೊಳ್ಳುತ್ತದೆ. ಇದರಿಂದ ವಾರ್ಷಿಕ ಸುಮಾರು 4500 ಕೋಟಿ ರು. ವಹಿವಾಟು ಆಗಲಿದೆ ಎಂದರು.

Advertisement

ವಿಜಯಪುರ ಜಿಲ್ಲೆಯಲ್ಲಿ 1 ಲಕ್ಷ ಕೃಷಿ ಕುಟುಂಬಗಳು ದ್ರಾಕ್ಷಿ ಬೆಳೆಯಯನ್ನೇ ಅವಲಂಬಿಸಿದ್ದು, 15 ಕೋಟಿ ಮಾನವ ದಿನಗಳ ಕೆಲಸ ನೀಡುವ ಮೂಲಕ ವರ್ಷಪೂರ್ತಿ ಗ್ರಾಮೀಣ ಕೃಷಿ ಕಾರ್ಮಿಕರಿಗೆ ನಿರಂತರ ಉದ್ಯೋಗ ಕಲ್ಪಿಸುತ್ತಿದೆ ಎಂದರು.

ಅಖಿಲ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಸಾಮಾನ್ಯ ಮಾರುಕಟ್ಟೆಯಲ್ಲಿ ಹಸಿದ್ರಾಕ್ಷಿಗೆ 30-50 ರೂ. ಬೆಲೆ ಇರುತ್ತಿದ್ದು, ಈಚಿನ ವರ್ಷಗಳಲ್ಲಿ ಈ ದರ 15-20 ರೂ. ಕುಸಿದಿದೆ. ಒಣದ್ರಾಕ್ಷಿ ಬೆಲೆ ಇದೀಗ 150-250 ರೂ. ಗೆ ಬದಲಾಗಿ 60-110 ರೂ.ಗೆ ಕುಸಿದಿದ್ದು, ದ್ರಾಕ್ಷಿ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಮಸ್ಯೆ ನಿವೇದಿಸಿದರು.

ಮಾರುಕಟ್ಟೆ ಹಾಗೂ ದರದ ಸಮಸ್ಯೆ ಮಾತ್ರವಲ್ಲದೇ 1 ಎಕರೆ ದ್ರಾಕ್ಷಿ ಬೆಳೇ ನಿರ್ವಹಣೆಗೆ ವಾರ್ಷಿಕ ಕನಿಷ್ಟ 2.25 ಲಕ್ಷ ರೂ. ಖರ್ಚು ತಗುಲುತ್ತದೆ. ಸಾಲ ಸೂಲ ಮಾಡಿ ದ್ರಾಕ್ಷಿ ಬೆಳೆಯುವ ರೈತರಿಗೆ ಈಚಿನ ವರ್ಷಗಳಲ್ಲಿ ಪ್ರಕೃತಿ ವಿಕೋಪವೂ ದೊಡ್ಡ ಸಮಸ್ಯೆಯನ್ನೇ ಸೃಷ್ಡಿಸುತ್ತಿದೆ. ಅಧಿಕ ವೆಚ್ಚ, ಪ್ರಕೃತಿ ವಿಕೋಪದಂಥ ಸಮಸ್ಯೆಗಳ ಮಧ್ಯೆ ಕಂಗಾಲಾರಿರುವ ದ್ರಾಕ್ಷಿ ಬೆಳೆಗಾರರು, ಆರ್ಥಿಕ ಸಮಸ್ಯೆಯಿಂದಾಗಿ ಸಾಲದ ಸುಳಿಗೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಪ್ರತಿ ಟನ್ ಒಣದ್ರಾಕ್ಷಿಗೆ 1.50 ದಿಂದ 2,50 ಲಕ್ಷ ರೂ. ವರೆಗೆ ಬೆಂಬಲ ಘೋಷಿಸಿ, ತ್ವರಿತವಾಗಿ ಖರೀದಿಗೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಬಂಥನಾಳ ವೃಷಭಲಿಂಗ ಶ್ರೀಗಳು, ಕರಭಂಟನಾಳ ಗಂಗಾಧರ ಮಠದ ಶಿವಕುಮಾರ ಶ್ರೀಗಳು, ಬಸವನಬಾಗೇವಾಡಿಯ ಹಿರೇಮಠ ಶಿವಪ್ರಕಾಶ ಶ್ರೀಗಳು, ಕುಮಸಿ ಶ್ರೀಗಳು ಮಡಿವಾಳೇಶ್ವರ ಶ್ರೀಗಳು, ವಡವಡಗಿಯ ನಂದಿಮಠದ ವೀರಸಿದ್ಧ ಶ್ರೀಗಳು, ಅಥಣಿ ಮಾಜಿ ಶಾಸಕ ಶಹಜಾನ್ ಡೊಂಗರಗಾಂವ, ರವಿ ತೊರವಿ, ಎಸ್.ಎಲ್.ಜೀರಗಾಳ, ಡಾ.ಕೆ.ಎಚ್.ಮುಂಬಾರೆಡ್ಡಿ, ಭೀಮಸೇನ ರಾಕ್ಸೆ, ಸಂಗನಗೌಡ ಚಕ್ಕೊಂಡ, ಅಶೋಕ ಗಂಗಾನವರ, ಮಹೇಶಚಂದ್ರ ಯಂಕಂಚಿ, ನಾನಾಗೌಡ ಪಾಟೀಲ ನಾಗರಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next