Advertisement

ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಶೀಘ್ರ ರದ್ದು: ಅನಗತ್ಯ ವೆಚ್ಚಕ್ಕೆ ಕಡಿವಾಣಕ್ಕೆ ಕ್ರಮ

11:20 PM Jul 14, 2022 | Team Udayavani |

ಬೆಂಗಳೂರು : ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಉದ್ದೇಶದಿಂದ ದಶಕದ ಹಿಂದೆ ರಚಿಸಲಾಗಿದ್ದ “ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ’ (ಕೆಎಸ್‌ಡಿಬಿಡಿ) ಶೀಘ್ರದಲ್ಲೇ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ.

Advertisement

ಆಡಳಿತ ಸುಧಾರಣೆ ಮತ್ತು ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿರುವ ಸರಕಾರ, ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ನೇತೃತ್ವದ ಆಡಳಿತ ಸುಧಾರಣ ಆಯೋಗ-2ರ ವರದಿಯ ಶಿಫಾರಸಿನಂತೆ ಕೆಎಸ್‌ಡಿಬಿಡಿ ರದ್ದುಪಡಿಸಲು ಸಿದ್ಧತೆ ನಡೆಸಿದೆ.

ಆಯೋಗದ ಶಿಫಾರಸಿನಂತೆ ಮಂಡಳಿಯನ್ನು ರದ್ದುಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಕಡತ ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲೇ ಅದು ಸರಕಾರಕ್ಕೆ ಸಲ್ಲಿಕೆಯಾಗಲಿದೆ. ಬಳಿಕ ಆಡಳಿತ ಸುಧಾರಣ ಆಯೋಗದ ಶಿಫಾರಸುಗಳ ಅನುಷ್ಠಾನಕ್ಕೆ ಸಂಬಂಧಿಸಿ ರಚಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿಯು ಮಂಡಳಿಯನ್ನು ರದ್ದುಪಡಿಸುವ ಬಗ್ಗೆ ತೀರ್ಮಾನಿಸಲಿದೆ.

ಪರ್ಯಾಯ ಇಂಧನ ಮೂಲಗಳಿಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ 2010ರಲ್ಲಿ ರಾಜ್ಯ ಜೈವಿಕ ಇಂಧನ ಮಂಡಳಿ ಸ್ಥಾಪಿಸಲಾಗಿತ್ತು. ಕಳೆದೊಂದು ದಶಕದ ಮಂಡಳಿಯ ಸಾಧನೆ ಮತ್ತು ಪ್ರಗತಿ ಗಮನಿಸಿದರೆ ನಿರೀಕ್ಷಿತ ಗುರಿ ತಲುಪಿಲ್ಲ. ಜತೆಗೆ ಮಂಡಳಿಯ ಯೋಜನೆಗಳ ನಿರ್ವಹಣೆ ಮತ್ತು ಆಡಳಿತಾತ್ಮಕ ವೆಚ್ಚಕ್ಕೆ ವಾರ್ಷಿಕ ಐದಾರು ಕೋಟಿ ರೂ. ಬೇಕಾಗುತ್ತಿತ್ತು. ಎಂಡಿ ಸಹಿತ ಒಟ್ಟು 14 ಸಿಬಂದಿ ಮಂಡಳಿಯಲ್ಲಿದ್ದಾರೆ.

ಮಂಡಳಿ ಒಂದೆರಡು ಯೋಜನೆಗಳನ್ನು ಮಾತ್ರ ನಿರ್ವ ಹಿಸುತ್ತಿದೆ. ಹಣಕಾಸು, ಕಚ್ಚಾ ಪದಾರ್ಥ ಇತ್ಯಾದಿಗಳ ಸಮಸ್ಯೆ ಇತ್ತು. ಮಂಡಳಿ ಅಷ್ಟೊಂದು ಲಾಭದಾಯಕವಾಗಿಯೂ ಇರಲಿಲ್ಲವಾದ್ದರಿಂದ ಅದನ್ನು ರದ್ದುಪಡಿಸುವಂತೆ ಆಡಳಿತ ಸುಧಾರಣ ಆಯೋಗ ಶಿಫಾರಸು ಮಾಡಿದೆ.

Advertisement

ಕೆಎಸ್‌ಡಿಬಿಡಿ-ಕೆಆರ್‌ಇಡಿಎಲ್‌ ಉದ್ದೇಶ ಒಂದೇ
ಕರ್ನಾಟಕ ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ(ಕೆಆರ್‌ಇಡಿಎಲ್‌)ವು ರಾಜ್ಯದಲ್ಲಿ ಇಂಧನ ಸಂರಕ್ಷಣೆ ಯೊಂದಿಗೆ ಜೈವಿಕ ಇಂಧನ ಮತ್ತು ಜೈವಿಕ ಇಂಧನವನ್ನು ಒಳಗೊಂಡಿರುವ ನವೀಕರಿಸಬಹುದಾದ ಇಂಧನವನ್ನು ಉತ್ತೇಜಿ ಸುವ ಒಂದೇ ರೀತಿಯ ಉದ್ದೇಶವನ್ನು ಹೊಂದಿದೆ. ಆದುದರಿಂದ ಕೆಎಸ್‌ಡಿಬಿಡಿ ರದ್ದುಪಡಿಸಲು ಆಯೋಗ ಶಿಫಾರಸು ಮಾಡಿದೆ.

ಆಯೋಗ ಹೇಳಿದ್ದೇನು?
– ಕೆಎಸ್‌ಡಿಬಿಡಿ ಮಂಡಳಿಯಿಂದ ನಿರ್ವಹಿಸಲ್ಪ ಡುತ್ತಿರುವ ಜೈವಿಕ ಇಂಧನ ಶಕ್ತಿ ಯೋಜನೆಗಳನ್ನು ಕೆಆರ್‌ಇಡಿಎಲ್‌ ನಿರ್ವಹಿಸಬಹುದು.
– ಜೈವಿಕ ಇಂಧನ ಸ್ಥಾವರದ ಯೋಜನೆಗಳನ್ನು ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗಕ್ಕೆ ಹಸ್ತಾಂತರಿಸಬಹುದು.
– ಕೆಎಸ್‌ಡಿಬಿಡಿಯ ಸ್ಥಗಿತಗೊಂಡ 1 ಮೆ.ವ್ಯಾ. ಬಯೋಮಾಸ್‌ ಯೋಜನೆ ಕೆಆರ್‌ಇಡಿಎಲ್‌ ಮೂಲಕ ನಿರ್ವಹಿಸಬಹುದು.

ಇಂಧನ ಇಲಾಖೆ ಕ್ರಮ ಕೈಗೊಳ್ಳಬೇಕು
ಕೆಎಸ್‌ಡಿಬಿಡಿಯನ್ನು ಇಂಧನ ಇಲಾಖೆಯ ಆಡಳಿತಾತ್ಮಕ ನಿಯಂತ್ರಣಕ್ಕೆ ವರ್ಗಾಯಿಸಲು ಆಯೋಗ ಶಿಫಾರಸು ಮಾಡಿದೆ. ಯಾಕೆಂದರೆ ನವೀಕರಿಸಬಹುದಾದ ಇಂಧನವು ಆ ಇಲಾಖೆಯ ವಿಷಯವಾಗಿದೆ. ಕೆಎಸ್‌ಡಿಬಿಡಿಯನ್ನು ರದ್ದುಪಡಿಸುವ ಬಗ್ಗೆ ಇಂಧನ ಇಲಾಖೆ ಕ್ರಮ ತೆಗೆದುಕೊಳ್ಳಬಹುದು. ಆ ಮೂಲಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯನ್ನು ರದ್ದುಪಡಿಸಬಹುದು ಎಂದು ಆಯೋಗ ತನ್ನ ವರದಿಯಲ್ಲಿ ಹೇಳಿದೆ.

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next