ಬೆಂಗಳೂರು: ಸಾಮಾನ್ಯವಾಗಿ ಸೀರೆ “ಅಪ್ಪಟ ರೇಷ್ಮೆ’ ಎಂಬುದನ್ನು ಖಾತ್ರಿಪಡಿಸಿ ಕೊಳ್ಳಲು 5 ದಿನಗಳು ಬೇಕಾಗುತ್ತದೆ. ಈಗ ಅದನ್ನು 5 ಸೆಕೆಂಡ್‌ಗಳಲ್ಲಿ ಖಾತ್ರಿ ಪಡಿಸುವ ಸೆನ್ಸರ್ ಆಧಾರಿತ ತಂತ್ರಜ್ಞಾನ ಬಂದಿದೆ!
ಹೌದು, ಚಿನ್ನಕ್ಕೆ ಹಾಲ್‌ಮಾರ್ಕ್ ಇರುತ್ತದೆ. ಆದರೆ, ಸಾವಿರಾರು ರೂಪಾಯಿ ಸುರಿದು ಖರೀದಿಸುವ ಬಹುತೇಕ ರೇಷ್ಮೆ ಬಟ್ಟೆಗಳಿಗೆ ಆ ದೃಢೀಕರಿಸುವ ಮುದ್ರೆ ಇರುವುದಿಲ್ಲ. ಒಂದು ವೇಳೆ ಖಾತ್ರಿಪಡಿಸಿಕೊಳ್ಳಲು ಆ ಬಟ್ಟೆಯನ್ನು ಪ್ರಯೋಗಾಲಯಕ್ಕೆ ಕಳುಹಿಸಬೇಕು. ಆ ಸಂಬಂಧದ ಪ್ರಕ್ರಿಯೆಗೆ ಕನಿಷ್ಠ 5 ದಿನಗಳು ಹಿಡಿಯುತ್ತದೆ. ಈಗ ಅದಕ್ಕೂ ಸೆನ್ಸರ್ ಅಭಿವೃದ್ಧಿಪಡಿಸಿದ್ದು, ಅದರ ಸಹಾಯದಿಂದ ಕೇವಲ 5 ಸೆಕೆಂಡ್‌ಗಳಲ್ಲಿ ನಿಖರವಾಗಿ ದೃಢೀಕರಿಸಬಹುದಾಗಿದೆ.
ಬರೀ ರೇಷ್ಮೆ ಬಟ್ಟೆ ಅಲ್ಲ; ಕಾಟನ್, ಉಣ್ಣೆ, ರಿಯಾನ್, ಪಾಲಿಸ್ಟರ್ ಸೇರಿದಂತೆ ಎಲ್ಲ ಪ್ರಕಾರದ ಬಟ್ಟೆಗಳ ಗುಣಮಟ್ಟ ದೃಢೀಕರಿಸಲು ಎಐ ಸ್ಟಾರ್ಟ್‌ಅಪ್ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದೆ. ಈ ಡಿವೈಸ್ ಅನ್ನು ಬಟ್ಟೆ ಮೇಲೆ ಇಟ್ಟರೆ ಸಾಕು, ಅದು ಯಾವ ಗುಣಮಟ್ಟದ ಬಟ್ಟೆ ಎಂದು ಹೇಳುತ್ತದೆ.
ಮಾರುಕಟ್ಟೆಯಲ್ಲಿ ನಕಲಿ ರೇಷ್ಮೆ ಹಾವಳಿ ತುಂಬಾ ಇದೆ. ಈಗಿರುವ ಪ್ರಮಾಣದಲ್ಲೇ ಮುಂದುವರಿದರೆ, ಅದು ಪರೋಕ್ಷವಾಗಿ ರೇಷ್ಮೆ ಬೆಳೆಯುವ ರೈತರಿಗೂ ಮುಂದೊಂದು ದಿನ ಪೆಟ್ಟು ಕೊಡಲಿದೆ. ಆದರೆ, ಅದಕ್ಕೆ ಕಡಿವಾಣ ಹಾಕಲು ಈಗಿರುವ ವ್ಯವಸ್ಥೆಯಲ್ಲಿ ಸಾಧ್ಯವಾಗುತ್ತಿಲ್ಲ. ಹಾಗಾಗಿ, ತಂತ್ರಜ್ಞಾನ ಬಳಸಿ ಅದರ ಪತ್ತೆಗೆ ಕೋಶ.ಎಐ ಮುಂದಾಗಿದೆ. ಅದರ ಭಾಗವಾಗಿ ಸೆನ್ಸರ್ ಆಧಾರಿತ ಡಿವೈಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಂಸ್ಥೆಯ ಸಹ ಸಂಸ್ಥಾಪಕ ವಿಜಯ್ ಕೃಷ್ಣಪ್ಪ ತಿಳಿಸಿದರು.
ಈಗಾಗಲೇ ರೇಷ್ಮೆ ಮಂಡಳಿಯೊಂದಿಗೆ ಮಾತುಕತೆ ನಡೆದಿದ್ದು, ಅದು ಒಡಂಬಡಿಕೆಗೆ ಸಹಿ ಹಾಕುವ ಹಂತದಲ್ಲಿದೆ. ಜತೆಗೆ ಟಾಟಾ ಸೇರಿದಂತೆ ಹಲವು ದೊಡ್ಡ ಕಂಪನಿಗಳೊಂದಿಗೂ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ನಮ್ಮ ಈ ಉತ್ಪನ್ನದ ಬಗ್ಗೆ ಸ್ವತಃ ಪ್ರಧಾನಿ ಕೂಡ ಆಗಸ್ಟ್‌ನಲ್ಲಿಯ “ಮನ್ ಕಿ ಬಾತ್’ನಲ್ಲಿ ಉಲ್ಲೇಖೀಸಿ ಪ್ರಶಂಸೆ ವ್ಯಕ್ತಪಡಿಸಿದ್ದರು ಎಂದು ವಿಜಯ್ ಕೃಷ್ಣಪ್ಪ ಹೇಳಿದರು.