Advertisement

Vijay Hazare Trophy ಕ್ರಿಕೆಟ್‌; ಬ್ಯಾಟಿಂಗ್‌ ವೈಫ‌ಲ್ಯ: ಕರ್ನಾಟಕ ಪರಾಭವ

11:26 PM Dec 03, 2023 | |

ಆನಂದ್‌ (ಗುಜರಾತ್‌): ಇನ್‌ಫಾರ್ಮ್ ಆಟಗಾರ ದೇವದತ್ತ ಪಡಿಕ್ಕಲ್‌ ಗೈರಲ್ಲಿ ಕಣಕ್ಕಿಳಿದ ಕರ್ನಾಟಕ, “ವಿಜಯ್‌ ಹಜಾರೆ ಟ್ರೋಫಿ’ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಸೋಲಿನ ರುಚಿ ಕಂಡಿದೆ. ರವಿವಾರ ಹರ್ಯಾಣ ವಿರುದ್ಧ “ಸಿ’ ವಿಭಾಗದ 6ನೇ ಪಂದ್ಯ ಆಡಲಿಳಿದ ಕರ್ನಾಟಕ 5 ವಿಕೆಟ್‌ಗಳಿಂದ ಪರಾಭವಗೊಂಡಿತು.

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದು ಕೊಂಡ ಕರ್ನಾಟಕ 43.5 ಓವರ್‌ಗಳಲ್ಲಿ ಕೇವಲ 143ಕ್ಕೆ ಸರ್ವಪತನ ಕಂಡಿತು. ಹರ್ಯಾಣ 31.1 ಓವರ್‌ಗಳಲ್ಲಿ 5 ವಿಕೆಟಿಗೆ 144 ರನ್‌ ಬಾರಿಸಿತು. ಇದರೊಂದಿಗೆ ಆರೂ ಪಂದ್ಯಗಳನ್ನು ಗೆದ್ದು ನಾಕೌಟ್‌ ಪ್ರವೇಶಿಸಿದ ಹೆಗ್ಗಳಿಕೆ ಹರ್ಯಾಣದ್ದಾಯಿತು. ಕರ್ನಾಟಕದ ನಾಕೌಟ್‌ ಪ್ರವೇಶವೂ ಖಾತ್ರಿಯಾಗಿದೆ. ಮಂಗಳವಾರದ ಅಂತಿಮ ಲೀಗ್‌ ಪಂದ್ಯದಲ್ಲಿ ಅಗ ರ್ವಾಲ್‌ ಪಡೆ ಮಿಜೋರಂ ವಿರುದ್ಧ ಆಡಲಿದೆ.

42ಕ್ಕೆ 5 ವಿಕೆಟ್‌ ಪತನ
3 ರನ್‌ ಆಗುವಷ್ಟರಲ್ಲಿ ಕರ್ನಾಟಕದ ಆರಂಭಿಕರಾದ ಮಾಯಾಂಕ್‌ ಅಗ ರ್ವಾಲ್‌ (0) ಮತ್ತು ಆರ್‌. ಸಮರ್ಥ್ (1) ಪೆವಿಲಿಯನ್‌ ಸೇರಿಕೊಂಡರು. ಬಿ.ಆರ್‌. ಶರತ್‌ (15), ನಿಕಿನ್‌ ಜೋಸ್‌ (3), ಅಭಿನವ್‌ ಮನೋಹರ್‌ (3), ಮನೋಜ್‌ ಭಾಂಡಗೆ (8) ಕೂಡ ತಂಡದ ಕೈ ಹಿಡಿಯಲಿಲ್ಲ. 42ಕ್ಕೆ 5 ವಿಕೆಟ್‌, 74ಕ್ಕೆ 8 ವಿಕೆಟ್‌ ಉದುರಿಸಿಕೊಂಡ ಕರ್ನಾಟಕ ನೂರರ ಗಡಿ ತಲುಪುವುದೂ ಕಷ್ಟ ಎಂಬ ಸ್ಥಿತಿಯಲ್ಲಿತ್ತು.

10ನೇ ಕ್ರಮಾಂಕದಲ್ಲಿ ಆಡಲು ಬಂದ ವಿಜಯ್‌ಕುಮಾರ್‌ ವೈಶಾಖ್‌ ಸಿಡಿದು ನಿಂತ ಪರಿಣಾಮ ಮೊತ್ತ ನೂರೈವತ್ತರ ಗಡಿಯತ್ತ ಮುಖ ಮಾಡಿತು. ವೈಶಾಖ್‌ 4 ಬೌಂಡರಿ, 4 ಸಿಕ್ಸರ್‌ ನೆರವಿನಿಂದ 54 ರನ್‌ ಕೊಡುಗೆ ಸಲ್ಲಿಸಿದರು (61 ಎಸೆತ).

ಹರ್ಯಾಣ ಪರ ಸುಮಿತ್‌ ಕುಮಾರ್‌ 3 ವಿಕೆಟ್‌, ಅಂಶುಲ್‌ ಕಾಂಬೋಜ್‌, ನಿಶಾಂತ್‌ ಸಿಂಧು, ಯಜುವೇಂದ್ರ ಚಹಲ್‌ ತಲಾ 2 ವಿಕೆಟ್‌ ಉರುಳಿಸಿದರು. ಒಂದು ವಿಕೆಟ್‌ ಹರ್ಷಲ್‌ ಪಟೇಲ್‌ ಪಾಲಾಯಿತು.
ಚೇಸಿಂಗ್‌ ವೇಳೆ ಹರ್ಯಾಣ ಕೂಡ ಕುಸಿತಕ್ಕೆ ಸಿಲುಕಿತು. ಅಂಕಿತ್‌ ಕುಮಾರ್‌ (2), ಹಿಮಾಂಶು ರಾಣಾ (0), ಯುವ್ರಾಜ್‌ ಸಿಂಗ್‌ (19) 35 ರನ್‌ ಒಟ್ಟುಗೂಡುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡರು. ಆದರೆ 4ನೇ ವಿಕೆಟಿಗೆ ಜತೆಗೂಡಿದ ನಿಶಾಂತ್‌ ಸಿಂಧು (43) ಮತ್ತು ರೋಹಿತ್‌ ಪ್ರಮೋದ್‌ ಶರ್ಮ (63) 99 ರನ್‌ ಜತೆಯಾಟ ನಿಭಾಯಿಸಿ ತಂಡವನ್ನು ಮೇಲೆತ್ತಿದರು. ವಾಸುಕಿ ಕೌಶಿಕ್‌ ಮತ್ತು ಜಗದೀಶ್‌ ಸುಚಿತ್‌ ತಲಾ 2 ವಿಕೆಟ್‌ ಕೆಡವಿದರು.

Advertisement

ಸಂಕ್ಷಿಪ್ತ ಸ್ಕೋರ್‌
ಕರ್ನಾಟಕ-43.5 ಓವರ್‌ಗಳಲ್ಲಿ 143 (ವಿ. ವೈಶಾಖ್‌ 54, ಮನೀಷ್‌ ಪಾಂಡೆ 24, ಶರತ್‌ 15, ಸುಮಿತ್‌ 28ಕ್ಕೆ 3, ಚಹಲ್‌ 16ಕ್ಕೆ 2, ನಿಶಾಂತ್‌ 22ಕ್ಕೆ 2, ಅಂಶುಲ್‌ 29ಕ್ಕೆ 2). ಹರ್ಯಾಣ-31.1 ಓವರ್‌ಗಳಲ್ಲಿ 5 ವಿಕೆಟಿಗೆ 144 (ರೋಹಿತ್‌ 63, ನಿಶಾಂತ್‌ 43, ವಿ. ಕೌಶಿಕ್‌ 9ಕ್ಕೆ 2, ಸುಚಿತ್‌ 37ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next