ನವದೆಹಲಿ: 1971ರ ಯುದ್ಧದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿರುವ ದಿನವನ್ನು (ಡಿಸೆಂಬರ್ 16) ವಿಜಯ್ ದಿವಸ್ ಎಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ಈ ಯುದ್ಧ ಬಾಂಗ್ಲಾದೇಶ ವಿಮೋಚನೆಗೆ ಸಂಬಂಧಿಸಿದ್ದಾಗಿದೆ.
ಇದನ್ನೂ ಓದಿ:ಮಂಗಳಮುಖಿಯರಿಂದ ಅನೈತಿಕ ದಂಧೆ; ಕಾರ್ಯಾಚರಣೆಗಿಳಿದ ಉಡುಪಿ ಎಸ್ಪಿ
ಈ ಯುದ್ಧದಲ್ಲಿ ಪಾಕಿಸ್ತಾನ ಪಡೆ ಸೋಲನ್ನನುಭವಿಸಿದ ನಂತರ 1971ರ ಡಿಸೆಂಬರ್ 16ರಂದು ಪಾಕ್ ಸೇನಾಪಡೆಯ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಝಿ ನೇತೃತ್ವದ ಪಡೆ ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ಭಾರತದ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಔರೋರಾ ಎದುರು ಬೇಷರತ್ತಾಗಿ ಶರಣಾಗಿತ್ತು.
ಇದರೊಂದಿಗೆ ಬಾಂಗ್ಲಾದೇಶ ಸ್ವತಂತ್ರಗೊಂಡು ಬಿಕ್ಕಟ್ಟಿನಿಂದ ಮುಕ್ತಿ ಪಡೆದಿತ್ತು. 1971ರ ಯುದ್ಧದ ಬಳಿಕ ಅಮೆರಿಕ ಮತ್ತು ದಕ್ಷಿಣ ಏಷ್ಯಾ ದೇಶಗಳಾದ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧ ಹದಗೆಡಲು ಕಾರಣವಾಗಿತ್ತು. ಈ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡುವುದಾಗಿ ಅಮೆರಿಕ ಭರವಸೆ ನೀಡಿತ್ತು. ಆದರೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಸೋವಿಯತ್ ಯೂನಿಯನ್ ಜತೆ ಇಂಡೋ-ಸೋವಿಯತ್ ಸ್ನೇಹ ಮತ್ತು ಸಹಕಾರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಅಮೆರಿಕಕ್ಕೆ ತಿರುಗೇಟು ನೀಡಿದ್ದರು.
ಪೂರ್ವ ಪಾಕಿಸ್ತಾನದಲ್ಲಿನ ಬಂಗಾಳಿ ಜನರ ಮೇಲೆ ಪಾಕ್ ಸೈನಿಕರು ನಡೆಸುತ್ತಿದ್ದ ಹತ್ಯಾಕಾಂಡವನ್ನು ತಡೆಯವ ಈ ಯುದ್ಧದಲ್ಲಿ ಭಾರತ ಮತ್ತು ಪಾಕಿಸ್ತಾನ 3,800ಕ್ಕೂ ಅಧಿಕ ಯೋಧರನ್ನು ಕಳೆದುಕೊಂಡಿತ್ತು.
ಡಿಸೆಂಬರ್ 16ರಂದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಮೀರ್ ಖಾನ್ ನಿಯಾಝಿ ನೇತೃತ್ವದ 93,000 ಸೈನಿಕರ ಪಡೆಯು ಪೂರ್ವ ಪಾಕಿಸ್ತಾನದಲ್ಲಿ ಭಾರತೀಯ ಸೇನಾಪಡೆಗೆ ಶರಣಾಗಿತ್ತು. ಕೊನೆಗೆ ಢಾಕಾದ ರಾಮ್ನಾ ರೇಸ್ ಕೋರ್ಸ್ ನಲ್ಲಿ ಶರಣಾಗತಿ ಪತ್ರಕ್ಕೆ ಪಾಕ್ ಸಹಿ ಹಾಕಿತ್ತು. ಪಾಕ್ ಸೈನಿಕರು ಮತ್ತು ಅವರ ಪರವಾಗಿದ್ದ ಪೂರ್ವ ಪಾಕಿಸ್ತಾನ ನಾಗರಿಕರನ್ನು ಭಾರತ ಯುದ್ಧ ಕೈದಿಗಳನ್ನಾಗಿ ತನ್ನ ವಶಕ್ಕೆ ತೆಗೆದುಕೊಂಡಿತ್ತು.
1971ರ ಭಾರತ ಮತ್ತು ಪಾಕ್ ನಡುವೆ ನಡೆದ 13 ದಿನಗಳ ಯುದ್ಧದಲ್ಲಿ ನೂರಾರು ವೀರ ಯೋಧರು ಹುತಾತ್ಮರಾಗಿದ್ದರು. ಈ ಹುತಾತ್ಮ ಯೋಧರನ್ನು ವಿಜಯ್ ದಿವಸ್ ಸಂದರ್ಭದಲ್ಲಿ ನೆನಪಿಸಿಕೊಳ್ಳುವ ಮೂಲಕ ಗೌರವ ನೀಡಲಾಗುತ್ತಿದೆ.