ಡಮಾಸ್ಕಸ್: ಸಿರಿಯಾ ರಾಜಧಾನಿ ಡಮಾಸ್ಕಸ್ ಬಂಡುಕೋರರ ತೆಕ್ಕೆಗೆ ಬೀಳುತ್ತಿದ್ದಂತೆಯೇ ಅಧ್ಯಕ್ಷ ಬಶರ್ ಅಸಾದ್ ದೇಶ ಬಿಟ್ಟು ರಷ್ಯಾಕ್ಕೆ ಪರಾರಿಯಾದ ಬೆನ್ನಲ್ಲೇ ಅಮೆರಿಕ ಸಿರಿಯಾದಲ್ಲಿರುವ ಐಸಿಸ್ (ISIS) ಉ*ಗ್ರರ ನೆಲೆಗಳನ್ನು ಗುರಿಯಾಗಿರಿಸಿ ದಾಳಿ ಮಾಡಿರುವುದಾಗಿ ವರದಿ ತಿಳಿಸಿದೆ.
ಸಿರಿಯಾದಲ್ಲಿ ನೆಲೆಯೂರಿರುವ ಐಸಿಸ್ ಭಯೋ*ತ್ಪಾದಕ ಗುಂಪಿನ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಅಮೆರಿಕ ನಿರ್ಗಮನ ಅಧ್ಯಕ್ಷ ಜೋ ಬೈಡೆನ್ ಸೋಮವಾರ(ಡಿ.09) ತಿಳಿಸಿದ್ದು, ಸಿರಿಯಾದಲ್ಲಿನ ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆಯಲು ಅಮೆರಿಕ ಪ್ರಯತ್ನಿಸಲಿದೆ ಎಂದು ಬೈಡೆನ್ ಘೋಷಿಸಿದ್ದಾರೆ.
ಭಾನುವಾರ ಅಮೆರಿಕ ಸಿರಿಯಾದೊಳಗೆ ಐಸಿಸ್ ನೆಲೆ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಯುದ್ಧವಿಮಾನಗಳು ಎಲ್ಲೆಡೆ ಸುತ್ತುವರಿದಿರುವುದಾಗಿ ಅಮೆರಿಕದ ಮಿಲಿಟರಿ ಪಡೆ ಖಚಿತಪಡಿಸಿರುವುದಾಗಿ ವರದಿ ವಿವರಿಸಿದೆ.
ಬಿ 52ಎಸ್, ಎಫ್ 15 ಎಸ್ ಹಾಗೂ ಎ 10ಎಸ್ ಸೇರಿದಂತೆ ಅಮೆರಿಕದ ವೈಮಾನಿಕ ಪಡೆ ಸಿರಿಯಾ ಸೆಂಟ್ರಲ್ ಕೇಂದ್ರದಲ್ಲಿರುವ ಐಸಿಸ್ ನೆಲೆ ಮೇಲೆ ದಾಳಿ ನಡೆಸಿರುವುದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಸಿರಿಯಾದಲ್ಲಿ ಐಸಿಸ್ ವಿರುದ್ಧ ಅಮೆರಿಕದ 900 ಪಡೆಗಳು ಹೋರಾಡುತ್ತಿವೆ. ದೀರ್ಘಕಾಲದಿಂದ ಸಿರಿಯಾ ಜನರು ಸರ್ವಾಧಿಕಾರದಿದ ರೋಸಿ ಹೋಗಿದ್ದು, ಇದೀಗ ಸರ್ವಾಧಿಕಾರದ ವಿರುದ್ಧ ಹೋರಾಡಲು ಐತಿಹಾಸಿಕ ಅವಕಾಶವೊಂದು ಲಭಿಸಿರುವುದಾಗಿ ಅಮೆರಿಕ ಹೇಳಿದೆ.
ಪದಚ್ಯುತಗೊಂಡ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಮತ್ತು ಕುಟುಂಬ ಸದಸ್ಯರು ಮಾಸ್ಕೋಗೆ ಪಲಾಯನಗೊಂಡಿದ್ದು, ರಷ್ಯಾ ಅಸ್ಸಾದ್ ಕುಟುಂಬಕ್ಕೆ ನೆಲೆಯೂರಲು ರಾಜತಾಂತ್ರಿಕ ಮನ್ನಣೆ ನೀಡಿರುವುದಾಗಿ ವರದಿ ತಿಳಿಸಿದೆ.
ಐದು ದಶಕಗಳ ಕಾಲದ ಸರ್ವಾಧಿಕಾರದ ವಿರುದ್ಧ ಜಯ ಸಾಧಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದು, ಇದೊಂದು ನನ್ನ ಸಹೋದರರಿಗೆ ದೊರೆತ ವಿಜಯವಾಗಿದೆ ಎಂದು ಬಂಡುಕೋರ ನಾಯಕ ಅಬು ಮೊಹಮ್ಮದ್ ಅಲ್ ಗೋಲಾನಿ ಡಮಾಸ್ಕಸ್ ನಲ್ಲಿ ನೆರೆದಿದ್ದ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ್ದ.
2011ರಿಂದ ಸಿರಿಯಾದಲ್ಲಿ ಸರ್ವಾಧಿಕಾರದ ವಿರುದ್ಧ ನಾಗರಿಕ ಯುದ್ಧ ಆರಂಭಗೊಂಡಿದ್ದು, ಅಂದಿನಿಂದ ಈವರೆಗೆ ಸಿರಿಯಾದಲ್ಲಿ 5 ಲಕ್ಷಕ್ಕೂ ಅಧಿಕ ಜನರು ಸಾವಿಗೀಡಾಗಿದ್ದು, ಲಕ್ಷಾಂತರ ಜನರು ಸಿರಿಯಾ ಬಿಟ್ಟು ವಲಸೆ ಹೋಗಿರುವುದಾಗಿ ವರದಿ ತಿಳಿಸಿದೆ.