Advertisement
150 ಟಾರ್ಗೆಟ್ ಹೊಂದಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ಗೂ 123 ಗುರಿಯತ್ತ ಹೊರಟಿರುವ ಜೆಡಿಎಸ್‌ಗೂ ಬೆಂಗಳೂರು, ಬೆಳಗಾವಿ, ಮಂಗಳೂರು, ಮೈಸೂರು ಸಹಜವಾಗಿ ರಾಜಕೀಯ ಪಕ್ಷಗಳಿಗೆ “ಹಾಟ್ ಸ್ಪಾಟ್’ ಆ ಪೈಕಿ ರಾಜಧಾನಿ ಬೆಂಗಳೂರು ಅಧಿಕಾರದ ಕೇಂದ್ರಬಿಂದು.
Related Articles
Advertisement
ಪ್ರಸ್ತುತ 28 ಕ್ಷೇತ್ರಗಳ ಪೈಕಿ ಬಿಜೆಪಿ-15, ಕಾಂಗ್ರೆಸ್-12 ಜೆಡಿಎಸ್-1 ಶಾಸಕರನ್ನು ಹೊಂದಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಲ 15, ಬಿಜೆಪಿ-11 ಹಾಗೂ ಜೆಡಿಎಸ್‌ನ ಬಲ 2 ಇತ್ತು.
ಮುಂದಿನ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ 20 ಸ್ಥಾನ ಗೆಲ್ಲುವುದು ಬಿಜೆಪಿ ಹಾಗೂ ಕಾಂಗ್ರೆಸ್‌ನ ಗುರಿಯಾದರೆ ಕನಿಷ್ಠ 5 ಸ್ಥಾನ ಗೆಲ್ಲುವುದು ಜೆಡಿಎಸ್‌ಗೆ ಪ್ರತಿಷ್ಠೆಯಾಗಿದೆ. ಒಂದು ಕಾಲದಲ್ಲಿ ನಗರದಲ್ಲಿ ಜನತಾದಳ ಪ್ರಾಬಲ್ಯ ಸಾಧಿಸಿದ್ದು ಇದೆ. ಮರಳಿ ಹಿಡಿತ ಸಾಧಿಸಲು ಜೆಡಿಎಸ್ ಹರಸಾಹಸ ಮಾಡುತ್ತಿದೆ. ಅದಕ್ಕಾಗಿ ಈಗಿನಿಂದಲೇ ಕಾರ್ಯತಂತ್ರಗಳೂ ನಡೆಯುತ್ತಿವೆ.ಚಿತ್ರಣ ಬದಲು: ಕಾಂಗ್ರೆಸ್‌ನಿಂದ ಗೆದ್ದಿದ್ದ ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜ್, ಮುನಿರತ್ನ ಹಾಗೂ ಜೆಡಿಎಸ್‌ನ ಗೋಪಾಲಯ್ಯ ಬಿಜೆಪಿಗೆ ಸೇರಿದ್ದರಿಂದ ಬಿಜೆಪಿ ಬಲ 15ಕ್ಕೆ ಏರಿಕೆಯಾಯಿತು. ಆ ಮೂಲಕ ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿ ಬಲ ಹೆಚ್ಚಿಸಿದ್ದು ಪೂರ್ವಾಶ್ರಮದ ಕಾಂಗ್ರೆಸ್-ಜೆಡಿಎಸ್‌ನವರೇ. ಎಸ್‌ಬಿಎಂ ಎಂದೇ ಖ್ಯಾತಿ ಹೊಂದಿದ್ದ ಕಾಂಗ್ರೆಸ್‌ನ ಮೂವರ ಜತೆ ಗೋಪಾಲಯ್ಯ ಜೆಡಿಎಸ್‌ನಿಂದ ಬಿಜೆಪಿಗೆ ಬಂದಿದ್ದರಿಂದ ರಾಜಧಾನಿಯಲ್ಲಿ ಶಕ್ತಿಶಾಲಿಯಾಗಿದೆ. ನಾಲ್ವರ ಸೇರ್ಪಡೆ ಬೆಂಗಳೂರಿನ ರಾಜಕೀಯ ಚಿತ್ರಣವನ್ನೇ ಬದಲಿಸಿದೆ. ಈ ಮೊದಲು ಜಮೀರ್ ಅಹ್ಮದ್ ಜೆಡಿಎಸ್ ನಲ್ಲಿದ್ದಾಗ ನಗರದಲ್ಲಿ ಮೂವರು ಶಾಸಕರು ಜೆಡಿಎಸ್‌ನಿಂದ ಗೆದ್ದಿದ್ದರು. ಕಳೆದ ಚುನಾವಣೆಗೆ ಮುನ್ನವೇ ಜಮೀರ್ ಅಹ್ಮದ್, ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್ ಸೇರಿದರೆ, ಚುನಾವಣೆ ಅನಂತರ ಗೋಪಾಲಯ್ಯ ಬಿಜೆಪಿ ಸೇರಿದರು. ಹೀಗಾಗಿ ಜೆಡಿಎಸ್ ಸಂಖ್ಯಾಬಲ ಒಂದಕ್ಕೆ ಕುಸಿದಿದೆ. ಇಷ್ಟರ ನಡುವೆಯೂ ಬಿಜೆಪಿ ರಾಜಧಾನಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಗಾಳ ಹಾಕಿದೆ. ಆದರೆ, ಸದ್ಯಕ್ಕೆ ಆ ರೀತಿಯ ಲಕ್ಷಣ ಕಂಡು ಬರುತ್ತಿಲ್ಲವಾದರೂ ಚುನಾವಣೆ ಸಮೀಪಿಸಿದಾಗ ಯಾರ ನಿಲುವು ಏನಿರುತ್ತೋ ಎಂಬಂತಾಗಿದೆ. ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್, ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸ ಲಿ ದ್ದಾರೆ. ರಾಜ್ಯಸಭೆ ಸದಸ್ಯರಾಗಿ ನಿವೃತ್ತಿಯಾಗಿ ಪುನರಾಯ್ಕೆ ಬಯಸಿರುವ ಕೆ.ಸಿ.ರಾಮಮೂರ್ತಿ ಅವರನ್ನು ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸಲಾಗುವುದು. ಸರ್ವಜ್ಞ ಕ್ಷೇತ್ರದ ಮಾಜಿ ಸಚಿವ ಕೆ.ಜೆ.ಜಾರ್ಜ್ ಲೋಕಸಭೆಗೆ ಸ್ಪರ್ಧಿಸಿ ಪುತ್ರ ರಾಣಾ ಜಾರ್ಜ್‌ರನ್ನು ವಿಧಾನಸಭೆ ಚುನಾವಣೆ ಕಣಕ್ಕಿಳಿಸಲಾಗುವುದು ಎಂಬೆಲ್ಲ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್ -ಬಿಜೆಪಿಯದ್ದೇ ಸಾಮ್ರಾಜ್ಯ
ರಾಜಧಾನಿ ಬೆಂಗಳೂರಿನ ರಾಜಕಾರಣ “ಹಿಡಿತ’ ಬಿಜೆಪಿಯಲ್ಲಿ ಆರ್.ಅಶೋಕ್, ಕಾಂಗ್ರೆಸ್‌ನಲ್ಲಿ ರಾಮಲಿಂಗಾರೆಡ್ಡಿ ನಡುವೆಯೇ ಎಂಬ ಮಾತಿತ್ತು. ಆದರೆ ಇದೀಗ ರಾಜಧಾನಿಯಲ್ಲಿ ಪ್ರಭುತ್ವ ಸಾಧಿಸಲು ಬಿಜೆಪಿಯಿಂದ ಡಾ| ಸಿ.ಎನ್.ಅಶ್ವತ್ಥನಾರಾಯಣ, ವಿ.ಸೋಮಣ್ಣ ಅವರಿಂದಲೂ ಪ್ರಯತ್ನ ನಡೆದೇ ಇದೆ. ಕಾಂಗ್ರೆಸ್‌ನಲ್ಲಿ ಜಮೀರ್ ಅಹ್ಮದ್, ಎಂ.ಕೃಷ್ಣಪ್ಪ, ಎನ್.ಎ.ಹ್ಯಾರೀಸ್, ಕೃಷ್ಣಬೈರೇಗೌಡರು ಹಿರಿಯ ಶಾಸಕರ ಸಾಲಿಗೆ ಸೇರಿದ್ದು ಅವಕಾಶ ಸಿಕ್ಕಾಗಲೆಲ್ಲ ತಮ್ಮ ಛಾಪು ಮೂಡಿಸಲು ಯತ್ನಿಸುತ್ತಿರುತ್ತಾರೆ. ಸದ್ಯದ ಮಟ್ಟಿಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯದ್ದೇ ಸಾಮ್ರಾಜ್ಯ ಎಂಬಂತಾಗಿದೆ. – ಎಸ್.ಲಕ್ಷ್ಮೀನಾರಾಯಣ