Advertisement

ಇಂದು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌-21 ಉದ್ಘಾಟನೆ

11:33 PM Apr 23, 2022 | Team Udayavani |

ಬೆಂಗಳೂರು: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌-21 ಅನ್ನು ಭಾನುವಾರ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಉದ್ಘಾಟಿಸಲಿದ್ದಾರೆ.

Advertisement

ದೇಶದ 200 ವಿವಿಗಳಿಂದ 4,500ಕ್ಕೂ ಅಧಿಕ ಅಥ್ಲೀಟ್‌ಗಳು ಕೂಟದಲ್ಲಿ ಭಾಗವಹಿಸಲಿದ್ದಾರೆ. ದೇಶದ ಖ್ಯಾತನಾಮ ಅಥ್ಲೀಟ್‌ಗಳು ಪಾಲ್ಗೊಳ್ಳುತ್ತಿದ್ದಾರೆ.

ಮೇ 3ರವರೆಗೆ ನಡೆಯುವ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಕರ್ನಾಟಕದ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌, ಸಹಾಯಕ ಸಚಿವ ನಿಶೀಥ್‌ ಪ್ರಾಮಾಣಿಕ್‌, ರಾಜ್ಯ ಕ್ರೀಡಾಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಎಸ್‌.ಹೊರಟ್ಟಿ ಪಾಲ್ಗೊಳ್ಳಲಿದ್ದಾರೆ.

ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌ ಅಧ್ಯಕ್ಷತೆ ವಹಿಸಲಿದ್ದಾರೆ.ಉದ್ಘಾಟನಾ ಸಮಾರಂಭ ಭಾನುವಾರ ಸಂಜೆ 4 ಗಂಟೆ ನಂತರ ಆರಂಭವಾಗಲಿದೆ.

Advertisement

ಈ ವೇಳೆ 2,500 ಅಥ್ಲೀಟ್‌ಗಳು ಇರುವ ನಿರೀಕ್ಷೆಯಿದೆ. ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯ ಕುರಿತು ವಿಶೇಷ ಪ್ರದರ್ಶನಗಳು ಇರಲಿವೆ. ದೇಶದ ವಿವಿಧ ಭಾಗದ ಡೊಳ್ಳುವಾದಕರು ತಮ್ಮ ಪ್ರತಿಭೆ ತೋರಿಸಲಿದ್ದಾರೆ.

ಮಲ್ಲಕಂಬದ ಪ್ರದರ್ಶನ ಇರಲಿದೆ. ಇಡೀ ರಾಜ್ಯದ ವೈವಿಧ್ಯಮಯತೆಯನ್ನು ಲೇಸರ್‌ ಶೋ ಮೂಲಕ ಪ್ರಕಟಿಸಲಾಗುತ್ತದೆ.

ಪರಿಸರ ಸಂರಕ್ಷಣೆಗೆ ಬದ್ಧತೆ: ಇಂತಹ ಬೃಹತ್‌ ಕೂಟ ಆಯೋಜಿಸಿರುವ ಹೊತ್ತಿನಲ್ಲಿ ಕರ್ನಾಟಕ ಸರ್ಕಾರ ಪರಿಸರ ಸಂರಕ್ಷಿಸುವ ಬದ್ಧತೆಯನ್ನು ತೋರಿದೆ. ಕ್ರೀಡಾ ಅಂಕಣಗಳ ಹೊರಗೆ ಬಳಸುವ ಪ್ರತಿಯೊಂದು ವಸ್ತುಗಳೂ ನವೀಕರಿಸಬಹುದಾದ, ರೂಪಾಂತರಿಸಬಹುದಾದ ರೀತಿಯಲ್ಲಿರುತ್ತವೆ. ವಿದ್ಯುತ್‌ ಚಾಲಿತ ವಾಹನಗಳನ್ನು ಅಥ್ಲೀಟ್‌ಗಳ ಸಂಚಾರಕ್ಕೆ ಬಳಸಲಾಗುತ್ತದೆ. ಜೈನ್‌ ವಿವಿ ಗ್ಲೋಬಲ್‌ ಕ್ಯಾಂಪಸ್‌ನ 300 ಎಕರೆ ಆವರಣದಲ್ಲಿ ಈ ವಾಹನಗಳ ಬಳಕೆಗೆ ಪ್ರಧಾನ ಆದ್ಯತೆ ನೀಡಲಾಗಿದೆ.

ಎಲ್ಲೆಲ್ಲಿ ಯಾವ್ಯಾವ ಕ್ರೀಡೆಗಳು?: ಒಟ್ಟು 20 ಕ್ರೀಡೆಗಳು ನಡೆಯಲಿವೆ. ಇದರಲ್ಲಿ ಒಟ್ಟು 261 ಉಪವಿಭಾಗಗಳು ಇರಲಿವೆ. ಪಕ್ಕಾ ದೇಶೀಯ ಕ್ರೀಡೆಗಳಾದ ಮಲ್ಲಕಂಬ, ಯೋಗಾಸನಗಳಿಗೂ ಇಲ್ಲಿ ಸ್ಥಾನ ನೀಡಲಾಗಿದೆ. ಕಂಠೀರವ ಮೈದಾನದಲ್ಲಿ ಅಥ್ಲೆಟಿಕ್ಸ್‌, ಬಾಸ್ಕೆಟ್‌ಬಾಲ್‌ ಸ್ಪರ್ಧೆಗಳು ನಡೆಯಲಿವೆ. ಸಾಯ್‌ ಆವರಣದಲ್ಲಿ ಶೂಟಿಂಗ್‌, ಕಾರಿಯಪ್ಪ ಮೈದಾನದಲ್ಲಿ ಹಾಕಿ ಸ್ಪರ್ಧೆಗಳು ನಡೆಯಲಿವೆ. ಉಳಿದೆಲ್ಲ ಕ್ರೀಡೆಗಳು ಜೈನ್‌ ವಿವಿ ಆವರಣದಲ್ಲಿ ನಡೆಯಲಿವೆ.

ಒಂದೇ ಆ್ಯಪ್‌ನಲ್ಲಿ ಎಲ್ಲ ಮಾಹಿತಿ: ಖೇಲೋ ಇಂಡಿಯಾ ಕ್ರೀಡಾಕೂಟದ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಖೇಲೋ ಇಂಡಿಯಾ ಆ್ಯಪ್‌ನಲ್ಲಿ ಪಡೆಯಬಹುದು. ಇದು ಈ ಕೂಟಕ್ಕಾಗಿಯೇ ವಿಶೇಷವಾಗಿ ಸಿದ್ಧಪಡಿಸಿದ ಆ್ಯಪ್‌. ಇಲ್ಲಿ ವಸತಿ ವ್ಯವಸ್ಥೆ, ಆಹಾರ, ಪ್ರಯಾಣ, ತುರ್ತು ಸಂಪರ್ಕ, ಮಾರ್ಗನಕ್ಷೆಗಳು ಇರಲಿವೆ. ಕೂಟದ ಕುರಿತು ಇತರೆ ಪ್ರಮುಖ ಮಾಹಿತಿಗಳು ಈ ಆ್ಯಪ್‌ನಲ್ಲಿ ಲಭ್ಯವಿರುತ್ತವೆ.

ಉದ್ಘಾಟನಾ ಸಮಾರಂಭಕ್ಕೆ ಸಂಬಂಧಿಸಿದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೇಂದ್ರ, ರಾಜ್ಯ ಸಚಿವರೊಂದಿಗೆ ರಾಷ್ಟ್ರದ ಪ್ರಮುಖ ಕ್ರೀಡಾಪಟುಗಳಾದ ಪಂಕಜ್‌ ಅಡ್ವಾಣಿ, ಪ್ರಕಾಶ್‌ ಪಡುಕೋಣೆ, ಅಂಜು ಬಾಬ್ಬಿ ಜಾರ್ಜ್‌, ಅಶ್ವಿ‌ನಿ ನಾಚಪ್ಪ, ರೀಟ್‌ ಅಬ್ರಹಾಂರಂತಹ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
-ಡಾ.ನಾರಾಯಣ ಗೌಡ, ರಾಜ್ಯ ಕ್ರೀಡಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next