ಮಂಗಳೂರು: ಬಾಂಗ್ಲಾದೇಶದಲ್ಲಿ ಚುನಾಯಿತ ಪ್ರಧಾನಮಂತ್ರಿ ರಾಜೀನಾಮೆ ನೀಡಿ ದೇಶ ತೊರೆದ ಅನಂತರ ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಈ ಗೊಂದಲಮಯ ಪರಿಸ್ಥಿತಿಯಲ್ಲಿ ಅಲ್ಲಿನ ತೀವ್ರಗಾಮಿ ಜಿಹಾದಿ ಶಕ್ತಿಗಳು ಹಿಂದೂ ಸಮಾಜದ ಮೇಲೆ ದೊಡ್ಡ ಪ್ರಮಾಣದ ದಾಳಿ ಆರಂಭಿಸಿವೆ. ಈ ದಾಳಿಯನ್ನು ತಡೆದು ಹಿಂದೂಗಳ ಸುರಕ್ಷತೆಗೆ ಭಾರತ ಸರಕಾರ ಸೇರಿದಂತೆ ವಿಶ್ವಸಮುದಾಯ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ.
ಶನಿವಾರದಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವಹಿಂದೂ ಪರಿಷತ್‌ನ ಪ್ರಾಂತ ಕಾರ್ಯಾಧ್ಯಕ್ಷ ಡಾ ಎಂ.ಬಿ.ಪುರಾಣಿಕ್ ಅವರು, ಬಾಂಗ್ಲಾದೇಶದಲ್ಲಿ ಕಳೆದ ಹಲವಾರು ದಿನಗಳಿಂದ ಹಿಂದೂ ಧಾರ್ಮಿಕ ಸ್ಥಳಗಳು, ಹಿಂದೂ ವ್ಯಾಪಾರ ಸಂಸ್ಥೆಗಳು ಮತ್ತು ಹಿಂದೂಗಳ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿದೆ. ಹಿಂದೂಗಳನ್ನು ಕ್ರೂರವಾಗಿ ಹಿಂಸಿಸುವ ಮೂಲಕ ಅಲ್ಲಿನ ಅಲ್ಪಸಂಖ್ಯಾಕ ಹಿಂದೂಗಳ ಮಾನವ ಹಕ್ಕು ಮತ್ತು ಧಾರ್ಮಿಕ ಹಕ್ಕಿಗೆ ಚ್ಯುತಿ ಬರುತ್ತಿದ್ದು ಬಾಂಗ್ಲಾದೇಶದಾದ್ಯಂತ ಪ್ರತಿ ಜಿಲ್ಲೆಯಲ್ಲಿಯೂ ನೂರಕ್ಕೂ ಹೆಚ್ಚು ಹಿಂದೂ ದೇವಾಲಯಗಳಿಗೆ ಭಾರಿ ಪ್ರಮಾಣದ ಹಾನಿಯಾಗಿದೆ. ಬಾಂಗ್ಲಾದೇಶದಲ್ಲಿ ಶೇ.32ರಷ್ಟಿದ್ದ ಹಿಂದೂಗಳು ಶೇ.8ಕ್ಕಿಂತಲೂ ಕಡಿಮೆ ಇದ್ದಾರೆ. ಅವರು ನಿರಂತರವಾಗಿ ಜಿಹಾದಿ ಕಿರುಕುಳಕ್ಕೆ ಬಲಿಯಾಗುತ್ತಿದ್ದಾರೆ. ಈಗ ಬಾಂಗ್ಲಾದಲ್ಲಿ ನಡೆಯುತ್ತಿರುವುದು ಅತ್ಯಂತ ಕಳವಳಕಾರಿ ಘಟನೆ. ಅಲ್ಲಿ ಹಿಂದೂಗಳ ಮನೆಗಳು, ಮಠಗಳು, ಅಂಗಡಿಗಳು, ಕಚೇರಿಗಳು, ವಾಣಿಜ್ಯ ಸಂಸ್ಥೆಗಳು, ಮಹಿಳೆಯರು, ಮಕ್ಕಳು, ಅವರ ನಂಬಿಕ ಮತ್ತು ಶ್ರದ್ಧಾಕೇಂದ್ರಗಳು ಸುರಕ್ಷಿತವಾಗಿಲ್ಲ ಎಂದು ಹೇಳಿದರು.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾಕ ಹಿಂದೂಗಳ ಸುರಕ್ಷತೆಗಾಗಿ ಮತ್ತು ಅವರ ಮಾನವ ಹಕ್ಕುಗಳನ್ನು ರಕ್ಷಿಸಲು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳುವುದು ವಿಶ್ವ ಸಮುದಾಯದ ಜವಾಬ್ದಾರಿಯಾಗಿದೆ. ಭಾರತವು ಸಾಂಪ್ರದಾಯಿಕವಾಗಿ ಪ್ರಪಂಚದಾದ್ಯಂತ ಕಿರುಕುಳಕ್ಕೊಳಗಾದ ವಲಸಿಗರಿಗೆ ಸಹಾಯ ಮಾಡಿಕೊಂಡು ಬಂದಿರುವಂತೆ ಬಾಂಗ್ಲಾದೇಶದಲ್ಲಿರುವ ಹಿಂದೂ ಅಲ್ಪಸಂಖ್ಯಾಕರ ರಕ್ಷಣೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಪರಿಸ್ಥಿತಿಯ ಲಭಾವನ್ನು ಪಡೆದುಕೊಂಡು ಗಡಿಯಾಚೆಯಿಂದ ಜಿಹಾದಿಗಳು ಭಾರತಕ್ಕೆ ಒಳನುಸುಳುವಿಕೆ ಪ್ರಯತ್ನವನ್ನು ಮಾಡಬಹುದು. ಇದನ್ನು ಭಾರತ ಸರಕಾರ ಗಂಭೀರವಾಗಿ ಪರಿಗಣಿಸಿ ನಮ್ಮ ಭದ್ರತಾಪಡೆಗಳ ಮೂಲಕ ಗಡಿ ಪ್ರದೇಶದಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ: Kolkata: ಆಸ್ಪತ್ರೆಯಲ್ಲೇ ಕಿರಿಯ ವೈದ್ಯೆಯ ಶವ ಪತ್ತೆ… ಪ್ರತಿಭಟನೆ ಬೆನ್ನಲೇ ಓರ್ವನ ಬಂಧನ