ಬಾಂಗ್ಲಾದೇಶ(Bangladesh): ದೇಶದ್ರೋಹ ಪ್ರಕರಣದಲ್ಲಿ ನವೆಂಬರ್ 25ರಂದು ಢಾಕಾದಲ್ಲಿ ಬಂಧಿಸಲ್ಪಟ್ಟಿದ್ದ ಇಸ್ಕಾನ್ ನ ಚಿನ್ಮಯಿ ಕೃಷ್ಣದಾಸ್ ಬ್ರಹ್ಮಾಚಾರಿಗೆ ಬಾಂಗ್ಲಾದೇಶದ ಚಟ್ಟೋಗ್ರಾಮ್ ಕೋರ್ಟ್ ಗುರುವಾರ (ಜನವರಿ 02) ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ ಎಂದು ವರದಿ ತಿಳಿಸಿದೆ.
ಢಾಕಾದಿಂದ ಚಟ್ಟೋಗ್ರಾಮ್ ಕೋರ್ಟ್ ಗೆ ದಾಸ್ ಪರ ಆಗಮಿಸಿದ್ದ ವಕೀಲರ ತಂಡ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಮೆಟ್ರೋಪೊಲಿಟನ್ ಸೆಷನ್ಸ್ ಜಡ್ಜ್ ಮೊಹಮ್ಮದ್ ಸೈಫುಲ್ ಇಸ್ಲಾಂ, ವಾದ-ಪ್ರತಿವಾದ ಆಲಿಸಿದ ನಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವುದಾಗಿ ಢಾಕಾ ಮೂಲದ ಡೈಲಿ ಸ್ಟಾರ್ ವರದಿ ಮಾಡಿದೆ.
ಅಪೂರ್ವ್ ಕುಮಾರ್ ಭಟ್ಟಾಚಾರ್ಯಜೀ ನೇತೃತ್ವದ 11 ವಕೀಲರ ತಂಡ ಕೋರ್ಟ್ ಗೆ ಚಿನ್ಮಯಿ ದಾಸ್ ಪರವಾಗಿ ಹಾಜರಾಗಿತ್ತು. ನಾವು ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರುವುದಾಗಿ ದಿ ಡೈಲಿ ಸ್ಟಾರ್ ಗೆ ತಿಳಿಸಿದ್ದಾರೆ.
ಸಾರ್ವಜನಿಕವಾಗಿ ಹಲ್ೆ ನಡೆಸುವುದಾಗಿ ಇಸ್ಲಾಮಿಕ್ ಗುಂಪುಗಳು ಬೆದರಿಕೆ ಒಡ್ಡಿದ ಪರಿಣಾಮ ಚಟ್ಟೋಗ್ರಾಮ್ ಕೋರ್ಟ್ ನಲ್ಲಿ ಚಿನ್ಮಯಿ ದಾಸ್ ಪರ ವಾದಿಸಲು ಯಾವ ವಕೀಲರು ಮುಂದೆ ಬರಲಿಲ್ಲವಾಗಿತ್ತು. ಇದೀಗ ಸುಮಾರು ಒಂದು ತಿಂಗಳ ನಂತರ ಬಿಗಿ ಭದ್ರತೆಯಲ್ಲಿ ಗುರುವಾರ ಚಿನ್ಮಯ ದಾಸ್ ಜಾಮೀನು ಅರ್ಜಿ ವಿಚಾರಣೆ ನಡೆದಿರುವುದಾಗಿ ವರದಿ ವಿವರಿಸಿದೆ.
ಕಳೆದ ಡಿಸೆಂಬರ್ ತಿಂಗಳಿನಲ್ಲಿ ಚಿನ್ಮಯಿ ಕೃಷ್ಣದಾಸ್ ಪರವಾಗಿ ಹಿರಿಯ ವಕೀಲರಾದ ರವೀಂದ್ರನಾಥ್ ಘೋಷ್ ಅವರು ವಾದ ಮಂಡಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ಕೋರ್ಟ್ ಹೊರಭಾಗದಲ್ಲಿ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಇದರಿಂದ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು.