Advertisement

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

10:04 AM Dec 26, 2024 | Team Udayavani |

ಮಂಗಳೂರು: ಜಮ್ಮುಕಾಶ್ಮೀರ ಪೂಂಛ್‌ನಲ್ಲಿ ಮಂಗಳವಾರ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಕುಂದಾಪುರದ ಬೀಜಾಡಿಯ ಯೋಧ ಲ್ಯಾನ್ಸ್ ಹವಾಲ್ದಾರ್ ಅನೂಪ್ ಪೂಜಾರಿ (31) ಅವರ ಪಾರ್ಥೀವ ಶರೀರವನ್ನು ಬುಧವಾರ ತಡರಾತ್ರಿ ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು.

Advertisement

ದಕ್ಷಿಣ ಕನ್ನಡ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ವಿಮಾನ ನಿಲ್ದಾಣಕ್ಕೆ ಭೇಟಿ, ಸೇನಾ ವಿಮಾನದಿಂದ ಪಾರ್ಥೀವ ಶರೀರವನ್ನು ಹೊರಗೆ ತೆಗೆಯುವ ವೇಳೆ ಶವ ಪಟ್ಟಿಗೆಗೆ ಹೆಗಲು ನೀಡಿದರು. ಮಾಜಿ ಯೋಧರೂ ಆಗಿರುವ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ್ ಸಿ.ಎಲ್. ಅವರೂ ಸೇನಾ ಸಿಬಂದಿಗಳಿಗೆ ಜತೆಯಾದರು. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರೂ ಜತೆಗಿದ್ದರು. ಬಳಿಕ ಅಂತಿಮ ನಮನ ಸಲ್ಲಿಸಿದರು.

ತೆರೆದ ವಾಹನದಲ್ಲಿ ಮೆರವಣಿಗೆ:
ಇಂದು (ಡಿ.26)ರ ಬೆಳಗ್ಗೆ 9ಕ್ಕೆ ತೆಕ್ಕಟ್ಟೆಯಿಂದ ತೆರೆದ ವಾಹನದಲ್ಲಿ ಕೋಟೇಶ್ವರ ಮೂಲಕವಾಗಿ ಮೆರವಣಿಗೆ ನಡೆಸಿ ಹುಟ್ಟೂರಾದ ಬೀಜಾಡಿಗೆ ತಂದು ಮನೆಯಲ್ಲಿ ಸಕಲ ವಿಧಿ ಗಳನ್ನು ನೆರವೇರಿಸಿ, ಅಂತಿಮ ಸಂಸ್ಕಾರಕ್ಕೆ ಮೊದಲು ಬೀಜಾಡಿ ಪಡು ಶಾಲೆಯ ಆವರಣದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಅನಂತರ ಬೀಜಾಡಿ ಕಡಲ ಕಿನಾರೆಯ ಸರಕಾರಿ ಜಾಗದಲ್ಲಿ ಸರಕಾರದ ಗೌರವದೊಡನೆ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ.

ಮೌನವಾದ ಬೀಜಾಡಿ ಪರಿಸರ
ಅನೂಪ್‌ ಪೂಜಾರಿ ಮೃತಪಟ್ಟ ಸುದ್ದಿ ಹರಡುತ್ತಿದ್ದಂತೆ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಸಹಿತ ನೂರಾರು ಜನರು ಮೃತರ ಮನೆಗೆ ತೆರಳಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.

Advertisement

ಪತ್ನಿ, ಪುಟ್ಟ ಮಗಳನ್ನು ಅಗಲಿದ ಯೋಧ:
ಪೆರ್ಡೂರು ಮುಳ್ಳುಗುಡ್ಡೆಯ ಮಂಜುಶ್ರೀಯನ್ನು ಮದುವೆಯಾಗಿದ್ದ ಅನೂಪ್‌ ಅವರಿಗೆ ಒಂದೂವರೆ ವರ್ಷದ ಇಶಾನಿ ಹೆಸರಿನ ಹೆಣ್ಣು ಮಗುವಿದೆ.

ದೇಶಕ್ಕಾಗಿ ಯಾವ ತ್ಯಾಗಕ್ಕೂ ಸಿದ್ದ ಎಂಬ ಸಿದ್ದಾಂತವನ್ನು ಹೊಂದಿದ್ದ ಅನೂಪ್‌ ಅವರು ಡಿಸೆಂಬರ್‌ನಲ್ಲಿ ರಜೆ ಪಡೆದು ಊರಿಗೆ ಬಂದು ಕೋಟೇಶ್ವರದ ಕೊಡಿಹಬ್ಬದಲ್ಲಿ ಪಾಲ್ಗೊಂಡು ಮಿತ್ರರೊಡನೆ ಸಮಯ ಕಳೆದಿದ್ದರು. ಸ್ನೇಹಮಯಿಯಾಗಿದ್ದ ಅವರು ಬೀಜಾಡಿ, ಕೋಟೇಶ್ವರ ಪರಿಸರದ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ಕೊಡಿಹಬ್ಬಕ್ಕೆ ಬಂದವರು ಅದೇ ಸಂದರ್ಭದಲ್ಲಿ ಮಗಳ ಹುಟ್ಟುಹಬ್ಬವನ್ನು ಕೂಡ ಆಚರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next