Advertisement

ಸಂಚಾರಕ್ಕೆ ಅಯೋಗ್ಯವಾದ ಕೂಳೂರು ಸರ್ವಿಸ್‌ ರಸ್ತೆ!

09:55 PM Aug 27, 2020 | mahesh |

ಕೂಳೂರು: ಮಂಗಳೂರು ಸ್ಮಾರ್ಟ್‌ಸಿಟಿಯಾಗಿ ಅಭಿವೃದ್ಧಿ ಹೊಂದುತ್ತಿದ್ದರೂ ಪಾಲಿಕೆ ವ್ಯಾಪ್ತಿಯ ಹೆದ್ದಾರಿ 66ರ ಕೂಳೂರು ಬಳಿಯ ಸರ್ವಿಸ್‌ ರಸ್ತೆಗಳಲ್ಲಿ ಈಗ ಹೊಂಡ-ಗುಂಡಿಗಳು ಸೃಷ್ಟಿಯಾಗಿ ಸಂಚಾರ ದುಸ್ತರವಾಗಿದೆ. ಈ ಬಾರಿಯ ಮಳೆಯಿಂದಾಗಿ ಇಲ್ಲಿನ ಬಹುತೇಕ ರಸ್ತೆಗಳು ಹಾಳಾಗಿವೆ. ಆದರೆ ಇದೀಗ ಮಳೆ ಕಡಿಮೆಯಾದರೂ ಅವುಗಳ ದುರಸ್ತಿಗೆ ಸಂಬಂಧಪಟ್ಟವರು ಗಮನಹರಿಸಿಲ್ಲ.

Advertisement

ಈ ಸರ್ವಿಸ್‌ ರಸ್ತೆ ಕೂಳೂರು, ಕಾವೂರು, ಮಂಗಳೂರು ಮತ್ತು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಹು ಮುಖ್ಯವಾದ ರಸ್ತೆಯಾಗಿದೆ. ಆದರೆ ಇದರ ರಸ್ತೆ ಯೋಜನೆಯೇ ಅವೈಜ್ಞಾನಿಕವಾಗಿದೆ. ಈಗಾಗಲೇ ಬಿ.ಸಿ. ರೋಡ್‌ನಿಂದ ಸುರತ್ಕಲ್‌ವರೆಗೆ 22.99 ಕೋಟಿ ರೂ. ರಾ. ಹೆದ್ದಾರಿ ರಸ್ತೆ ನಿರ್ವಹಣೆಗೆ ಬಿಡುಗಡೆಯಾಗಿದೆ. ಆದರೆ ಗುತ್ತಿಗೆ ವಹಿಸಿಕೊಂಡ ಸಂಸ್ಥೆ ಮಾತ್ರ ದುರಸ್ತಿಗೆ ವಿಳಂಬ ಮಾಡುತ್ತಿದೆ.

ಈ ಸರ್ವಿಸ್‌ ರಸ್ತೆ ಹೀಗೇಕೆ ?
ಸುರತ್ಕಲ್‌ ಬಳಿಕ ಮಂಗಳೂರು, ನಂತೂರು ವರೆಗೆ ಸಿಗುವ ಹೆದ್ದಾರಿ ಬದಿಯ ಸರ್ವಿಸ್‌ ರಸ್ತೆ ಮಾತ್ರ ಹೀಗೇಕೆ ಎಂಬ ಪ್ರಶ್ನೆ ಸವಾರರದ್ದು. ಈ ರಸ್ತೆಯ ಅಲ್ಲಲ್ಲಿ ಹೊಂಡ, ಡಾಮರು ಕಿತ್ತು ಮಣ್ಣು ಕಾಣುತ್ತಿದೆ. ಹೊನ್ನಕಟ್ಟೆ, ಬೈಕಂಪಾಡಿ, ಕೈಗಾರಿಕೆ ಪ್ರದೇಶ, ಸರ್ವಿಸ್‌ ರಸ್ತೆಗಳೇ ಇಲ್ಲದ ಹೆದ್ದಾರಿ. ಇದರಿಂದ ಅಪಘಾತ ಕಡಿಮೆಯಾಗಲು ಮಾಡಿದ ಚತುಷ್ಪಥ ರಸ್ತೆಯ ಉದ್ದೇಶವೇ ವಿಫಲವಾಗಿದೆ ಎಂಬಂತಾಗಿದೆ.

ಭೀತಿಯಲ್ಲಿ ಸಣ್ಣ ವಾಹನಗಳು!
ಸಣ್ಣ ವಾಹನಗಳು ಇಲ್ಲಿನ ಸರ್ವಿಸ್‌ ರಸ್ತೆಯಲ್ಲಿ ಆತಂಕದಿಂದಲೇ ಓಡಾಡುವ ಸ್ಥಿತಿಯಿದೆ. ಕಾರಣ ಈ ರಸ್ತೆ ಕನಿಷ್ಠ 12 ಅಡಿಗಳಷ್ಟೂ ಅಗಲವಿಲ್ಲ. ಒಂದು ವಾಹನ ಬಂದರೆ ಇನ್ನೊಂದು ಬದಿಗೆ ನಿಲ್ಲಬೇಕಾದ ಇಸ್ಥಿತಿಯಿದೆ. ಇದರ ನಡುವೆ ಹೊಂಡ ಬಿದ್ದ ರಸ್ತೆಯಿಂದ ಸಣ್ಣ ವಾಹನಗಳ ಚೇಸಿಸ್‌ ಹಾನಿಗೀಡಾಗುತ್ತಿದೆ.

ನಿತ್ಯ ಇಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಲ್ಲಿ ಕೆಲವು ನತದೃಷ್ಟರು ಆಸ್ಪತ್ರೆಯ ಕದತಟ್ಟುವಂತಾದರೆ, ವಾಹನಗಳ ಬಿಡಿ ಭಾಗಗಳೇ ಕಳಚಿ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಲಕ್ಷಾಂತರ ರೂ. ವ್ಯಯಿಸಿ ಚರಂಡಿ ನಿರ್ಮಾಣ ಮಾಡಲಾಗಿದೆ. ಆದರೆ ನೀರು ಮಾತ್ರ ಹರಿಯುತ್ತಿಲ್ಲ. ಕೆಟ್ಟು ಹೋದ ಚರಂಡಿಗಳನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅಣಿ ಮಾಡಬೇಕಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ ತಾಳಿರುವ ಕಾರಣ ನೀರು ಇಂದಿಗೂ ರಸ್ತೆಯ ಮೇಲೆಯೇ ನಿಲ್ಲುತ್ತಿದೆ. ಹೀಗಾಗಿ ರಸ್ತೆ ಡಾಮರು ಕಿತ್ತು ಹೋಗುತ್ತಿದೆ.

Advertisement

ಬಂಗ್ರ ಕೂಳೂರು ರಸ್ತೆಗೆ ಬೇಕಿದೆ ಕಾಯಕಲ್ಪ
ಬಂಗ್ರಕೂಳೂರಿನ ಹೆದ್ದಾರಿ ಬದಿಯ ಸರ್ವಿಸ್‌ ರಸ್ತೆ ಪ್ರತೀ ವರ್ಷ ಮಳೆಗಾಲದಲ್ಲಿ ಹಾಳಾಗುತ್ತಿದೆ. ಇದನ್ನು ಕೇಳುವವರಿಲ್ಲದಂತಾಗಿದೆ. ಮೂರ್ನಾಲ್ಕು ವರ್ಷಗಳಿಂದ ಇಲ್ಲಿ ಪ್ರತಿದಿನವೂ ವಾಹನಗಳು ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ. ಪಾಲಿಕೆಗೂ ಈ ರಸ್ತೆ ಮುಖ್ಯವಾಗಿದ್ದರೂ ಹೆದ್ದಾರಿ ಇಲಾಖೆಯ ಜವಾಬ್ದಾರಿ ಆಗಿರುವುದರಿಂದ ದುರಸ್ತಿಗೆ ಆಸಕ್ತಿ ತೋರುತ್ತಿಲ್ಲ.

ಸಮರ್ಪಕ ರಸ್ತೆಗೆ ಸೂಕ್ತ ಕ್ರಮ
ಸರ್ವಿಸ್‌ ರಸ್ತೆ ಕೆಟ್ಟು ಹೋಗಿದ್ದು, ಈ ಬಗ್ಗೆ ಹೆದ್ದಾರಿ ಯೋಜನ ಅಧಿಕಾರಿಗಳಲ್ಲಿ ಮಾತನಾಡಿ, ಸೂಕ್ತ ಚರಂಡಿ ವ್ಯವಸ್ಥೆ ಮತ್ತು ಸರ್ವಿಸ್‌ ರಸ್ತೆಯನ್ನು ಸಮರ್ಪಕವಾಗಿಸಲು ಕ್ರಮ ಕೈಗೊಳ್ಳಲಾಗುವುದು.
– ಡಾ| ಭರತ್‌ ಶೆಟ್ಟಿ ವೈ., ಸ್ಥಳೀಯ ಶಾಸಕರು

ಸಚಿವರಿಗೆ ಮನವಿ
ರಾ.ಹೆದ್ದಾರಿಯ ಕೂಳೂರು ಭಾಗವು ನವಮಂಗಳೂರು ಪೋರ್ಟ್‌ ರೋಡ್‌ ವ್ಯಾಪ್ತಿಗೆ ಬರುವುದರಿಂದ ಇಲ್ಲಿನ ಸರ್ವಿಸ್‌ ರಸ್ತೆ ದುರಸ್ತಿ ಗೊಳಿಸಲು ಪ್ರತ್ಯೇಕ ಅನುದಾನ ಅಗತ್ಯವಿದೆ. ಹಾಗಾಗಿ ಅನುದಾನ ಬಿಡುಗಡುಗೊಳಿಸುವಂತೆ ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ಮನವಿ ಮಾಡಲಾಗುವುದು. ಕೂಳೂರು ಸಹಿತ ರಾಷ್ಟ್ರೀಯ ಹೆದ್ದಾರಿ 66ರ ಬಳಿಯ ಸರ್ವಿಸ್‌ ರಸ್ತೆ ಹಾಳಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ತಾತ್ಕಾಲಿಕ ದುರಸ್ತಿಗೆ ಬೇಕಾದ ಕ್ರಮ ಕೈಗೊಳ್ಳುವಂತೆ ಹೆದ್ದಾರಿ ಇಲಾಖೆಯ ಅ ಧಿಕಾರಿಗಳಿಗೆ ಸೂಚಿಸಲಾಗುವುದು.
– ನಳಿನ್‌ ಕುಮಾರ್‌ ಕಟೀಲು, ಸಂಸದರು, ದ.ಕ.

ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next