ವೇಣೂರು: ಕಂಬಳ ನಮ್ಮ ಸಂಸ್ಕೃತಿ. ಅದನ್ನು ಉಳಿಸಿ ಮುಂದುವರಿಸುವ ಕೆಲಸ ನಮ್ಮದಾಗಬೇಕು. ನ್ಯಾಯಾಲಯದ ಷರತ್ತುಗಳಿಗೆ ಬದ್ಧವಾಗಿ ಕಂಬಳ ಸಂಸ್ಕೃತಿಯನ್ನು ನಡೆಸಿದರೆ ಅದರ ಆಚರಣೆಗೆ ಯಾವುದೇ ಅಡಚಣೆ ಆಗದು ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ| ಪದ್ಮಪ್ರಸಾದ್ ಅಜಿಲ ಅವರು ಹೇಳಿದರು.
ಜಿಲ್ಲೆಯ ಇತಿಹಾಸ ಪ್ರಸಿದ್ಧ ವೇಣೂರು ಪೆರ್ಮುಡಯಲ್ಲಿ ಶನಿವಾರ ಜರಗಿದ 25ನೇ ವರ್ಷದ ಬೆಳ್ಳಿಹಬ್ಬ ಸೂರ್ಯ-ಚಂದ್ರ ಜೋಡು ಕರೆ ಬಯಲು ಕಂಬಳ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಂಬಳದಲ್ಲಿ ಕೋಣಗಳ ರೇಸ್ ನಡೆಯಬೇಕೇ ಹೊರತು ಇತರ ರೇಸ್ ನಡೆಯಬಾರದು. ನ್ಯಾಯಾಲಯದ ಷರತ್ತನ್ನು ಕೋಣಗಳ ಯಜಮಾನರು, ಓಡಿಸುವವರು ಹಾಗೂ ಕಂಬಳ ಅಭಿಮಾನಿಗಳು ಅರಿತುಕೊಂಡರೆ ಕಂಬಳ ನಿರಂತರವಾಗಿ ನಡೆಯಲು ಸಾಧ್ಯ ಎಂದು ತಿಳಿಸಿದರು.
ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್. ಅಧ್ಯಕ್ಷತೆ ವಹಿಸಿದ್ದರು. ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭಾಸ್ಕರ ಬಲ್ಯಾಯ, ವೇಣೂರು ಕ್ರಿಸ್ತರಾಜ ದೇವಾಲಯದ ಫಾ| ಆ್ಯಂಟನಿ ವಿ. ಲುವಿಸ್, ಕುಂಡದಬೆಟ್ಟು ಜುಮ್ಮಾ ಮಸೀದಿಯ ಧರ್ಮಗುರು ಕೆ.ಎಂ. ಹನೀಫ್ ಸಖಾμ ಬಂಗೇರ್‌ಕಟ್ಟೆ, ವೇಣೂರು ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿ ಕಾರ್ಯದರ್ಶಿ ಎಂ. ವಿಜಯರಾಜ ಅಧಿಕಾರಿ ಮಾರಗುತ್ತು, ಅಳದಂಗಡಿ ಜಿ.ಪಂಚಾಯತ್ ಸದಸ್ಯ ಶೇಖರ ಕುಕ್ಕೇಡಿ, ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ತೇಜಾಕ್ಷಿ, ಪಡಂಗಡಿ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ, ಅಳದಂಗಡಿ ಗ್ರಾ.ಪಂ. ಅಧ್ಯಕ್ಷ ಸತೀಶ್ ಕುಮಾರ್ ಮಿತ್ತಮಾರ್, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ವಿಮಲಚಂದ್ರ ಕೋಟ್ಯಾನ್, ಸುರೇಶ್ ಆರಿಗ ಪೆರ್ಮಾಣು, ಎಚ್. ಮಹಮ್ಮದ್ ವೇಣೂರು, ಅನೂಪ್ ಜೆ. ಪಾಯಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್. ಸ್ವಾಗತಿಸಿ, ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ ಕಾರ್ಯಕ್ರಮ ನಿರ್ವಹಿಸಿದರು. ಕಂಬಳ ಸಮಿತಿ ಕಾರ್ಯದರ್ಶಿ ಭರತ್‌ರಾಜ್ ಪಾಪುದಡ್ಕ ವಂದಿಸಿದರು.
ವಿದೇಶಿಗರ ಗಮನ ಸೆಳೆದ ಕಂಬಳ!
ಫ್ರಾನ್ಸ್‌ನಿಂದ ಪ್ರವಾಸಕ್ಕೆ ಬಂದಿದ್ದ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಕರಾವಳಿಯ ಗ್ರಾಮೀಣ ಕಂಬಳ ಕ್ರೀಡೆಯನ್ನು ವೀಕ್ಷಿಸಲು ಆಗಮಿಸಿ ಗಮನ ಸೆಳೆದರು. 2 ತಿಂಗಳಿನಿಂದ ಭಾರತ ಪ್ರವಾಸದಲ್ಲಿರುವ ಗೋಜ್‌ಫ್ರಾಯ್ ಹಾಗೂ ಬೊನ್ ಹ್ಯುರಿ ಅವರು ಕಂಬಳದ ಬಗ್ಗೆ ಆಸಕ್ತಿಹೊಂದಿ ಕಂಬಳ ವೀಕ್ಷಿಸಲು ಹಾತೊರೆಯುತ್ತಿದ್ದರು. ಇದೀಗ ವೇಣೂರು ಕಂಬಳ ವೀಕ್ಷಣೆಗೆ ನಮಗೆ ಅವಕಾಶ ಒದಗಿ ಬಂದಿದೆ ಎಂದು ಉದಯವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿ ಸಂತಸ ವ್ಯಕ್ತಪಡಿಸಿದರು.