Advertisement

ಅಭಿವೃದ್ಧಿ ಪಥದಲ್ಲಿ ವೇಣೂರು ಸ.ಪ.ಪೂ. ಕಾಲೇಜು

04:47 PM Dec 28, 2017 | Team Udayavani |

ವೇಣೂರು: ಮೂಲ ಸೌಲಭ್ಯಗಳಿಲ್ಲದೆ ಯಾತನೆ ಅನುಭವಿಸುತ್ತಿದ್ದ ವೇಣೂರಿನ ಸರಕಾರಿ ಪ.ಪೂ. ಕಾಲೇಜಿಗೆ ಕಳೆದ ವರ್ಷದಿಂದ ವಿವಿಧ ಮೂಲಗಳಿಂದ ಲಕ್ಷಾಂತರ ರೂ. ಮೊತ್ತದ ಅನುದಾನ ಲಭಿಸಿದ್ದು, ಪ್ರಗತಿಯ ಹಂತದಲ್ಲಿದೆ. ದ.ಕ. ಸಂಸದರಿಂದ ಪ್ರಯೋಗಾಲಯ ಕೊಠಡಿ ನಿರ್ಮಾಣಕ್ಕೆ 50 ಲ.ರೂ. ಅನುದಾನ ಪ್ರಸಕ್ತ ಸಾಲಿನಲ್ಲಿಯೇ ದೊರೆಯುವ ನಿರೀಕ್ಷೆ ಇದ್ದು, 1 ಕೋ.ರೂ.ಗೂ ಅಧಿಕ ಮೊತ್ತದ ಅನುದಾನ ಈ ಕಾಲೇಜಿಗೆ ದೊರೆತಂತಾಗುತ್ತದೆ. ವರ್ಷದಿಂದ ವರ್ಷ ಏರುತ್ತಿದ್ದ ವಿದ್ಯಾರ್ಥಿಗಳ ದಾಖಲಾತಿಸಂಖ್ಯೆಗೆ ಅನುಗುಣವಾಗಿ ಇದೀಗ ಸೌಲಭ್ಯಗಳು ಒದಗಿಬರುತ್ತಿದ್ದು, ಉಪನ್ಯಾಸಕರು, ವಿದ್ಯಾರ್ಥಿಗಳು ನಿಟ್ಟುಸಿರುಬಿಡುವಂತಾಗಿದೆ.

Advertisement

ಬೆಂಚ್‌, ಡೆಸ್ಕ್ ದೇಣಿಗೆ
ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಅವರು ನಾಲ್ಕು ಕೊಠಡಿ ನಿರ್ಮಾಣಕ್ಕೆ ಪ್ರಸಕ್ತ ಸಾಲಿನಲ್ಲಿ 50.5 ಲ.ರೂ. ಅನುದಾನ ಮಂಜೂರು ಮಾಡಿದ್ದು, ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. 15 ವರ್ಷಗಳ ಹಿಂದೆ ಕೊರೆಯಲಾದ ಬೋರ್‌ವೆಲ್‌ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಹೊಸ ಬೋರ್‌ವೆಲ್‌ ಕೊರೆಯಲಾಗಿದೆ.

ಒಂದೇ ಬೆಂಚ್‌ನಲ್ಲಿ ಐದಾರು ವಿದ್ಯಾರ್ಥಿಗಳು ಕುಳಿತು ಪಾಠ ಕೇಳಬೇಕಾದ ಅನಿವಾರ್ಯ ವಿದ್ಯಾರ್ಥಿಗಳಿಗಿತ್ತು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗಣವಾಗಿ ಬೆಂಚ್‌, ಡೆಸ್ಕ್ ಗಳ  ಕೊರತೆ ನೀಗಿಸಲು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಮನವಿ ಮಾಡಲಾಗಿದ್ದು, ಸುಮಾರು 50 ಸಾವಿರ ರೂ. ಮೌಲ್ಯದ 10 ಜತೆ ಬೆಂಚ್‌, ಡೆಸ್ಕ್ ಗಳನ್ನು ಒದಗಿಸಲಾಗಿದೆ. ಇಲಾಖೆಗೂ ಮನವಿ ಮಾಡಿಕೊಂಡಾಗ 28 ಜತೆ ಬೆಂಚ್‌, ಡೆಸ್ಕ್ಗಳನ್ನು ಒದಗಿಸಲಾಗಿದೆ. ಕಾಲೇಜು ಅಭಿವೃದ್ಧಿ ಶುಲ್ಕದಿಂದ 2.64 ಲ.ರೂ. ವೆಚ್ಚದಲ್ಲಿ ಕಟ್ಟಡಕ್ಕೆ ಸುಣ್ಣಬಣ್ಣ ಲೇಪಿಸಲಾಗಿದೆ.

ಶೌಚಾಲಯದ ಸಮಸ್ಯೆ ಎದುರಿಸುತ್ತಿದ್ದ ಕಾಲೇಜು ಪಣಂಬೂರಿನ ಮಂಗಳೂರು ಕೆಮಿಕಲ್ಸ್‌ ಆ್ಯಂಡ್‌ ಫರ್ಟಿಲೈಸರ್ಸ್‌ ಸಂಸ್ಥೆಗೆ ಮನವಿ ಮಾಡಿಕೊಂಡಿದ್ದು, ಸಾಮಾಜಿಕ ಕಾಳಜಿ (ಸಿಎಸ್‌ಆರ್‌) ಕಾರ್ಯಕ್ರಮದಲ್ಲಿ 3 ಲ.ರೂ. ವೆಚ್ಚದಲ್ಲಿ 10 ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. ಸುಮಾರು 35 ವರ್ಷ ಹಳೆಯದ ಶೌಚಾಲಯವನ್ನು ವೇಣೂರು ಗ್ರಾ.ಪಂ. ಅನುದಾನದಲ್ಲಿ 35,000 ರೂ. ವೆಚ್ಚದಲ್ಲಿ ದುರಸ್ತಿ ಮಾಡಲಾಗಿದೆ.

403 ವಿದ್ಯಾರ್ಥಿಗಳು
 ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಅವರ ಅನುದಾನದಲ್ಲಿ ಕಾಲೇಜಿಗೆ ಹೆಚ್ಚುವರಿ ಕೊಠಡಿಗಳು ಲಭಿಸಲಿವೆ. ಕಾಲೇಜಿನ ಮನವಿಗೆ ಸ್ಪಂದಿಸಿರುವ ಅವರು 7 ಲ.ರೂ. ಅನುದಾನ ಮಂಜೂರುಗೊಳಿಸಿದ್ದು, ಟೆಂಡರ್‌ ಪ್ರಕ್ರಿಯೆಯಲ್ಲಿದೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತರುವಲ್ಲಿ ಪ್ರಭಾರ ಪ್ರಾಂಶುಪಾಲರು ಅವಿರತ ಶ್ರಮ ವಹಿಸಿದ್ದಾರೆ. ದ.ಕ. ಸಂಸದರಿಂದ ಪ್ರಯೋಗಾಲಯ ಕೊಠಡಿಗೆ 50 ಲ.ರೂ. ಅನುದಾನ ಪ್ರಸಕ್ತ ಸಾಲಿನಲ್ಲಿಯೇ ದೊರೆಯುವ ನಿರೀಕ್ಷೆ ಇದೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗ ಹೊಂದಿರುವ ವೇಣೂರು ಸರಕಾರಿ ಪ.ಪೂ. ಕಾಲೇಜಿನಲ್ಲಿ 403 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

Advertisement

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಜ್ಞಾನದಾಹವನ್ನು ತಣಿಸುವ ಉದ್ದೇಶದೊಂದಿಗೆ 1982ರಲ್ಲಿ ಆರಂಭಗೊಂಡ ವೇಣೂರು ಸ.ಪ.ಪೂ. ಕಾಲೇಜು 36 ಸಂವತ್ಸರ ಪೂರೈಸಿದೆ. ಪ್ರೌಢಶಾಲೆಯೊಂದಿಗೆ ವಿಲೀನಗೊಂಡಿದ್ದ ಕಾಲೇಜು ಪ್ರತ್ಯೇಕ ಕಟ್ಟಡ ನಿರ್ಮಾಣವಾಗಿ 2002ರಿಂದ ಅಲ್ಲಿ ತರಗತಿಗಳು ಪ್ರಾರಂಭಗೊಂಡಿದ್ದವು. 2007ರಲ್ಲಿ ಪ್ರೌಢಶಾಲೆಯಿಂದ ಪೂರ್ಣ ವಿಂಗಡನೆಗೊಂಡು ವಿದ್ಯಾರ್ಜನೆ ನಡೆಯುತ್ತಿದೆ. 2015-16ರಲ್ಲಿ 408 ವಿದ್ಯಾರ್ಥಿಗಳು, 2016-17ರಲ್ಲಿ 418 ವಿದ್ಯಾರ್ಥಿಗಳು ಹಾಗೂ 2017-18ರಲ್ಲಿ 403 ವಿದ್ಯಾರ್ಥಿಗಳು ವಿದ್ಯಾರ್ಜನೆ ನಡೆಸಿದ್ದಾರೆ.

ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ
ಕಳೆದ ಸಾಲಿನ ಎಸೆಸೆಲ್ಸಿಯಲ್ಲಿ ಸ್ಥಳೀಯ ಪ್ರೌಢಶಾಲೆಗಳಲ್ಲಿ ಶೇಕಡಾವಾರು ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ಸಂಖ್ಯೆ
ಇಳಿಕೆಯಾಗಿರುವುದರಿಂದ ಕಾಲೇಜಿನ ದಾಖಲಾತಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಆದರೆ ಗ್ರಾಮೀಣ ಭಾಗದ ಕಾಲೇಜೊಂದರ 2 ತರಗತಿಗಳಲ್ಲಿ 400ಕ್ಕೂ ಅಧಿಕ ವಿದ್ಯಾರ್ಥಿಗಳು ಇರುವುದು ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ.

ಬೇಡಿಕೆಗಳು
ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವುದರಿಂದ ಸಂಸ್ಥೆಗೆ ಇನ್ನಷ್ಟು ಸೌಲಭ್ಯಗಳ ಅಗತ್ಯವಿದೆ. ಪ್ರಾಂಶುಪಾಲರ ಕಚೇರಿ, ಖಾಲಿ ಇರುವ ಪ್ರಾಂಶುಪಾಲರ ಹುದ್ದೆ, ಉಪನ್ಯಾಸಕ ಹಾಗೂ ಉಪನ್ಯಾಸಕರ ಕೊಠಡಿ ಹಾಗೂ ಜವಾನ ಹುದ್ದೆ. ಮೂರು ಪ್ರಯೋಗಾಲಯ ಕೊಠಡಿಗಳು, ಗ್ರಂಥಾಲಯ, ಕ್ರೀಡಾ ಕೊಠಡಿ, ಬಾಲಕಿಯರ ವಿಶ್ರಾಂತಿ ಕೊಠಡಿ ಹಾಗೂ ಆವರಣ ಗೋಡೆ ಆಗಬೇಕಿದೆ. ಎಲ್ಲ ನಿರೀಕ್ಷಿತ ಅನುದಾನ ದೊರೆತರೆ ಕೊರತೆ ನಿವಾರಣೆಯಾಗಲಿದೆ. ಜನಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆಗಳ ಅತ್ಯುನ್ನತ ಸಹಕಾರ ಕಾಲೇಜಿಗೆ ದೊರೆತಿದ್ದು, ಪ್ರಸಕ್ತ ಸಾಲಿನಲ್ಲಿ ಒಟ್ಟು 1 ಕೋಟಿ ರೂ. ಅನುದಾನದ ನಿರೀಕ್ಷೆಯಲ್ಲಿದ್ದೇವೆ.
ಚಂದ್ರು ಎಂ.ಎನ್‌.,
  ಪ್ರಭಾರ ಪ್ರಾಂಶುಪಾಲರು

ಸರಕಾರ ಶಾಲಾ ಕಾಲೇಜುಗಳ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದೆ. ವೇಣೂರು ಕಾಲೇಜಿನಲ್ಲಿ ಗುಣಮಟ್ಟದ ಮೌಲ್ಯಯುತ ಶಿಕ್ಷಣಕ್ಕೆ ಉಪನ್ಯಾಸಕರು ಪ್ರೋತ್ಸಾಹ ನೀಡುತ್ತಿದ್ದು, ಅಲ್ಲಿನ ಸಾಕಷ್ಟು ಅಗತ್ಯ ಪೂರೈಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಿಸಲಾಗಿದ್ದು, ವಾರದ ಹಿಂದೆ ಹೊಸ ಬೋರ್‌ ಕೊರೆಯಲಾಗಿದೆ.
ಕೆ. ವಸಂತ ಬಂಗೇರ‌,
   ಶಾಸಕರು, ಬೆಳ್ತಂಗಡಿ

ಪದ್ಮನಾಭ ವೇಣೂರು

Advertisement

Udayavani is now on Telegram. Click here to join our channel and stay updated with the latest news.

Next