Advertisement

ವೀಳ್ಯದೆಲೆ ಸಾಬೂನು, ಪಕೋಡ, ಮೌತ್‌ ಫ್ರೆಶ್ನರ್‌, ಗುಳಿಗೆ !

12:27 PM Jan 12, 2018 | |

ಬೆಳ್ತಂಗಡಿ: ವೀಳ್ಯದೆಲೆಗೆ ಧಾರ್ಮಿಕ ಕಾರ್ಯಗಳಲ್ಲಿ ಅತ್ಯಂತ ಮಹತ್ವವಿದೆ. ತಾಂಬೂಲಪ್ರಿಯರಿಗೆ ವೀಳ್ಯದೆಲೆ ಬೇಕೇಬೇಕು. ರಸಗವಳ ಎಂಬ ಪದದ ಮೂಲ ಈ ಎಲೆ. ಹಾಗಿದ್ದರೂ ಈಗ ವೀಳ್ಯದೆಲೆ ಉಪಯೋಗ ಸೀಮಿತವಾಗಿದೆ. ಮೆಲ್ಲುವವರ, ಬೆಳೆಯುವವರ ಸಂಖ್ಯೆಯೂ ಕಡಿಮೆಯಾ ಗಿದೆ. ವೀಳ್ಯದೆಲೆಯಲ್ಲಿ ಅನೇಕ ರಾಸಾಯನಿಕ ಅಂಶಗಳಿವೆ. ಧರ್ಮಸ್ಥಳದ ಎಸ್‌ಡಿಎಂ ಆಂಗ್ಲ ಮಾ. ಶಾಲಾ ವಿದ್ಯಾರ್ಥಿಗಳು ವೀಳ್ಯದೆಲೆಯಿಂದ ಸ್ಕ್ವಾಶ್‌, ಸಿರಪ್‌, ಗುಳಿಗೆ, ಪಕೋಡ, ಸಾಬೂನು, ಲಿಪ್‌ಬಾಮ್‌, ಮೌತ್‌ ಫ್ರೆಶ್ನರ್‌, ಸಾಬೂನು ತಯಾರಿಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

Advertisement

8ನೇ ತರಗತಿ ಮಕ್ಕಳು
ವೀಳ್ಯದೆಲೆಯ ವೈಜ್ಞಾನಿಕ ಮಹತ್ವವನ್ನರಿತ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಾದ ಆತ್ರೇಯ, ಆಗ್ನೇಯ, ಚೇತನಾ, ಉಜ್ವಲಾ, ವಿಕಾಸ್‌ ನಿಡ್ಲೆ ಅವರು ಮುಖ್ಯೋಪಾಧ್ಯಾಯಿನಿ ಪರಿಮಳಾ ಎಂ.ವಿ., ವಿಜ್ಞಾನ ಶಿಕ್ಷಕಿ ರೇಖಾ ಕೆ. ಅವರ ಮಾರ್ಗದರ್ಶನದಲ್ಲಿ ಸ್ವಯಂಪ್ರೇರಿತರಾಗಿ ಸಂಶೋಧನೆ ನಡೆಸಿದ್ದಾರೆ.

ವೈಜ್ಞಾನಿಕ ಮಾಹಿತಿ
ಈ ವಿದ್ಯಾರ್ಥಿಗಳು ವಿವಿಧ ತಳಿಗಳ ವೀಳ್ಯದೆಲೆ ಸಂಗ್ರಹಿಸಿ ಅವುಗಳ ಫೈಟೋ ಕೆಮಿಕಲ್‌, ಆ್ಯಂಟಿಮೈಕ್ರೋಬಿಯಲ್‌ ಸಾಮರ್ಥ್ಯದ ಪರೀಕ್ಷೆ ನಡೆಸಿದ್ದಾರೆ. ವೀಳ್ಯ ದೆಲೆಯಲ್ಲಿ ಆಲ್ಕಲಾಯ್ಡಗಳು, ಟ್ಯಾನಿನ್‌ ಗಳು, ಸಫಾನಿನ್‌ಗಳು, ಫಿನೋಲ್‌, ಕಾರ್ಬೋಹೈಡ್ರೇಟ್‌ಗಳು, ಟರ್ಪೆನೋಯ್ಡ ಅಂಶ ಇರುವುದನ್ನು, ಅದು ಸೂಕ್ಷ್ಮಜೀವಿ ಪ್ರತಿರೋಧಕ ಗುಣ ಹೊಂದಿರುವುದನ್ನು, ಉತ್ತಮ ಜೀರ್ಣಕಾರಿ ಎಂದು ತಿಳಿದು ಉತ್ಪನ್ನ ತಯಾರಿಸಲು ಪ್ರೇರಿತರಾದರು.

ವೀಳ್ಯದೆಲೆ ಉತ್ಪನ್ನ ಸಿದ್ಧ
ವಿದ್ಯಾರ್ಥಿಗಳು ವೀಳ್ಯದೆಲೆಯ ಸ್ಕ್ವಾಶ್‌, ಸಿರಪ್‌, ಗುಳಿಗೆ, ಪಕೋಡ ಮುಂತಾದವುಗಳನ್ನು ತಯಾರಿಸಿ ಇನ್ನಷ್ಟು ಉತ್ತೇಜನಗೊಂಡರು. ಇದರ ಆಂಟಿ ಮೈಕ್ರೋಬಿಯಲ್‌ ಗುಣವನ್ನು ಅರಿತ ವಿದ್ಯಾರ್ಥಿಗಳು ವೀಳ್ಯದೆಲೆಯ ಸಾಬೂನು, ಲಿಪ್‌ಬಾಮ್‌, ಮೌತ್‌ಪ್ರಶ°ರ್‌ ಇತ್ಯಾದಿ ಜನೋಪಯೋಗಿ ಮೌಲ್ಯವರ್ಧಿತ ವಸ್ತುಗಳನ್ನು ತಯಾರಿಸಿದ್ದಾರೆ.

ಸಮೀಕ್ಷೆ
ವಿದ್ಯಾರ್ಥಿಗಳು ಧರ್ಮಸ್ಥಳದ ಆಸುಪಾಸಿನಲ್ಲಿ ಸಮೀಕ್ಷೆ ನಡೆಸಿದಾಗ ಪ್ರಸಕ್ತ ಶೇ. 80 ವಯೋವೃದ್ಧರು, ಶೇ. 20 ಯುವಕರು ತಾಂಬೂಲ ಸೇವಿಸುವುದು ಹಾಗೂ ಶೇ.40 ಯುವಕರು ಗುಟ್ಕಾ, ಪಾನ್‌ ಪರಾಗ್‌ ನಂತಹ ತಂಬಾಕುಯುಕ್ತ ಪದಾರ್ಥಗಳಿಗೆ ದಾಸರಾಗಿರುವುದು ತಿಳಿಯಿತು. ಇಂತಹ ಅಭ್ಯಾಸಗಳು ಪರಿಸರವನ್ನು ಕೂಡ ಮಲಿನಗೊಳಿಸುತ್ತವೆ ಎಂದು ವಿದ್ಯಾರ್ಥಿಗಳು ಸ್ವತ್ಛ ಭಾರತ ಕಲ್ಪನೆಯಡಿ ವೀಳ್ಯದೆಲೆಯನ್ನು ಪರ್ಯಾಯವಾಗಿ ಬಳಸುವ ಮಾರ್ಗ ತಿಳಿಸಿದರು. ವೀಳ್ಯದೆಲೆಯ ಕ್ಯಾಂಡಿ, ಪೆಪ್ಪರ್‌ ಮೆಂಟ್‌, ಕ್ಯಾಪ್ಸೂಲ್‌, ಜ್ಯೂಸ್‌ಗಳಂತಹ ಪರಿಸರಸ್ನೇಹಿ ಉತ್ಪನ್ನಗಳನ್ನು ಸೇವಿಸಿ ಆರೋಗ್ಯಪೂರ್ಣ ಬದುಕನ್ನು ರೂಪಿಸಿಕೊಳ್ಳಿ ಎನ್ನುವ ಸಂದೇಶದೊಂದಿಗೆ ಈ ವಿದ್ಯಾರ್ಥಿಗಳು ವೀಳ್ಯದೆಲೆಯನ್ನು ಬೃಹತ್‌ ಪ್ರಮಾಣದಲ್ಲಿ ಬೆಳೆಸಿ ಆರ್ಥಿಕವಾಗಿಯೂ ಸಬಲರಾಗಬಹುದು ಎಂದಿದ್ದಾರೆ.

Advertisement

ತಯಾರಿಸಿದ ವಸ್ತುಗಳು
ಆರೋಗ್ಯಪೂರ್ಣ ಪೇಯ
ವೀಳ್ಯದೆಲೆಯ ರಸಕ್ಕೆ ಶುಂಠಿ, ಕರಿ ಮೆಣಸು, ಬಡೆಸೊಪ್ಪು ಸೇರಿಸಿ ಊಟದ ಬಳಿಕ 2 ಚಮಚ ಸೇವಿಸಿದರೆ ಜೀರ್ಣಕ್ರಿಯೆ ಸುಲಭವಾಗುತ್ತದೆ.

ಪಾನೀಯ
ವೀಳ್ಯದೆಲೆ ರಸವನ್ನು ನಿಂಬೆ ಪಾನೀಯದೊಂದಿಗೆ ಬೆರೆಸಿ ಸೇವಿಸಿದರೆ ರುಚಿಕರ.

ಮಿಠಾಯಿ/ಕ್ಯಾಂಡಿ
ವೀಳ್ಯದೆಲೆಯ ರಸವನ್ನು ಬೆಲ್ಲದೊಂದಿಗೆ ಕುದಿಸಿ ಮಿಠಾಯಿ ತಯಾರಿ, ರುಚಿಗೆ ಬೇಕಷ್ಟು ಶುಂಠಿ, ಕರಿಮೆಣಸು, ಬಡೆಸೊಪ್ಪು ಸೇರಿಸಬಹುದು.

ಗುಳಿಗೆ/ಕ್ಯಾಪ್ಸೂಲ್‌
ವೀಳ್ಯದೆಲೆಯನ್ನು ಚೆನ್ನಾಗಿ ತೊಳೆದು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಸ್ವಲ್ಪ ಏಲಕ್ಕಿ ಮತ್ತು ಕಾಳುಮೆಣಸಿನ ಹುಡಿ
ಸೇರಿಸಿ ಕ್ಯಾಪ್ಸೂಲ್‌ ತಯಾರಿ.

ಸಾಬೂನು
100 ಗ್ರಾಂ ಕಾಸ್ಟಿಕ್‌ ಸೋಡ, 50 ಮಿ.ಲೀ. ತೆಂಗಿನಎಣ್ಣೆ, 500 ಮಿ. ಲೀ. ಪಾಮೆಣ್ಣೆ ಸೇರಿಸಿ ತಯಾರಿ.

ಲಿಪ್‌ ಬಾಮ್‌
ತೆಂಗಿನಎಣ್ಣೆ/ಬೆಣ್ಣೆ 50 ಗ್ರಾಂ, ಜೇನು ಮೇಣ 50 ಗ್ರಾಂ, ವೀಳ್ಯದೆಲೆ 20, ಅಡಿಕೆ ಮೂಲಕ ತಯಾರಿ.

ಮೌತ್‌ ಫ್ರೆಶ್ನರ್‌
ವೀಳ್ಯದೆಲೆ ರಸಕ್ಕೆ ಏಲಕ್ಕಿ, ಲವಂಗದ ಪುಡಿ ಸೇರಿಸಿ ಬಾಯಿಯ ದುರ್ಗಂಧ ನಿವಾರಕ ತಯಾರಿ.

ನಮ್ಮ ಶಾಲಾ ಮಕ್ಕಳು ವೀಳ್ಯದೆಲೆಯಿಂದ ತಯಾರಿಸಿದ ಉತ್ಪನ್ನಗಳು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ನಡೆಸಿದ
ನ್ಯಾಶನಲ್‌ ಚಿಲ್ಡ್ರನ್ಸ್‌ ಸೈನ್ಸ್‌ ಕಾಂಗ್ರೆಸ್‌ ವಿಜ್ಞಾನ ಮೇಳದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿವೆ. ಇವನ್ನು ಇನ್ನಷ್ಟು ಸಂಶೋಧನೆಗೆ ಒಳಪಡಿಸಿ, ಸುಧಾರಿಸಿದರೆ ಉತ್ತಮ ಮಾರುಕಟ್ಟೆ ಪಡೆಯಬಹುದು.
ಪರಿಮಳಾ ಎಂ.ವಿ.
 ಮುಖ್ಯೋಪಾಧ್ಯಾಯಿನಿ

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next