Advertisement

ತಜ್ಞರ ಸಮಿತಿ ನೇಮಕಕ್ಕೆ ವೀರಶೈವ ಮಹಾಸಭೆ ವಿರೋಧ

06:45 AM Dec 24, 2017 | |

ಬೆಂಗಳೂರು: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ  ಅಲ್ಪ ಸಂಖ್ಯಾತ ಧರ್ಮದ ಮಾನ್ಯತೆ ನೀಡುವ ಕುರಿತು ತಜ್ಞರ ಸಮಿತಿ ರಚನೆ ಮಾಡಿರುವುದಕ್ಕೆ ವೀರಶೈವ ಮಹಾಸಭೆ ವಿರೋಧ ವ್ಯಕ್ತಪಡಿಸಿದೆ.

Advertisement

ತಜ್ಞರ ಸಮಿತಿ ರಚಿಸಲು ಅಲ್ಪ ಸಂಖ್ಯಾತ ಆಯೋಗಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ವೀರಶೈವ ಮಹಾಸಭೆಯ ರಾಜ್ಯ ಘಟಕದ ಅಧ್ಯಕ್ಷ ಎನ್‌. ತಿಪ್ಪಣ್ಣ  ತಿಳಿಸಿದ್ದಾರೆ. ಸಮಿತಿ ರಚಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಆದರೆ, ಸರ್ಕಾರ ರಾಜ್ಯಪಾಲರ ಆಜ್ಞಾನುಸಾರ ಅಲ್ಪ ಸಂಖ್ಯಾತ ಇಲಾಖೆ ಮೂಲಕ ಸಮಿತಿ ರಚಿಸುವ ಬದಲು ಅಲ್ಪ ಸಂಖ್ಯಾತ ಆಯೋಗದಿಂದ ಸಮಿತಿ ರಚಿಸಿರುವುದು ಕಾನೂನು ಬಾಹಿರ ಎಂದು ದೂರಿದ್ದಾರೆ. ಆಯೋಗ ರಚಿಸಿರುವ ಸಮಿತಿಯ ವರದಿಗೆ ಯಾವುದೇ ಮಾನ್ಯತೆ ಇರುವುದಿಲ್ಲವಾದ್ದರಿಂದ ಅದನ್ನು ವೀರಶೈವ ಮಹಾಸಭೆ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಸಮಿತಿಯಲ್ಲಿ ನೇಮಕಗೊಂಡಿರುವ ಏಳೂ ಜನರಿಗೆ ವೀರಶೈವ ಪರಂಪರೆಯ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಅಲ್ಲದೇ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಸರ್ಕಾರದ ಭಾಗವಾಗಿದ್ದಾರೆ. ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನ್ಯಾಯಮೂರ್ತಿಯಾಗಿ ಒಳ್ಳೆಯ ಹೆಸರು ಪಡೆದಿದ್ದಾರೆ. ಆದರೆ, ವೀರಶೈವ ಧರ್ಮದ ಬಗ್ಗೆ ಅವರಿಗೆ ಆಳವಾದ ಅರಿವಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಎಸ್‌.ಜಿ. ಸಿದ್ದರಾಮಯ್ಯ ಸರ್ಕಾರದ ಭಾಗವಾಗಿದ್ದುಕೊಂಡು ನಿಷ್ಪಕ್ಷಪಾತ ವರದಿ ನೀಡಲು ಹೇಗೆ ಸಾಧ್ಯವಿದೆ ಎಂದು ಪ್ರಶ್ನಿಸಿದ್ದಾರೆ.

ತಜ್ಞರ ಸಮಿತಿಯಲ್ಲಿ ವೀರಶೈವ ಲಿಂಗಾಯತ ಧರ್ಮದ ಬಗ್ಗೆ ಸಂಶೋಧನೆ ಮಾಡಿದವರು ಯಾರೂ ಇಲ್ಲ. ಅಲ್ಲದೇ ಕೆಲವರು ಈಗಾಗಲೇ ವೀರಶೈವ ಹೊರತು ಪಡಿಸಿ ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕೆಂದು ವಾದ ಮಾಡಿದ್ದಾರೆ. ಎಲ್ಲರೂ ಎಡ ಪಂಥೀಯ ವಿಚಾರಧಾರೆ ಉಳ್ಳವರಾಗಿದ್ದಾರೆ. ರಾಜ್ಯ ಸರ್ಕಾರ ಸಮಿತಿ ರಚಿಸುವ ಮೊದಲು ಸೌಜನ್ಯಕ್ಕಾದರೂ, ವೀರಶೈವ ಮಹಾಸಭೆಯ ಅಭಿಪ್ರಾಯವನ್ನು ಪಡೆಯಬೇಕಿತ್ತು. ಆದರೆ, ಮುಖ್ಯಮತ್ರಿ ಸಿದ್ದರಾಮಯ್ಯ ವೀರಶೈವ ಲಿಂಗಾಯತ ಧರ್ಮವನ್ನು ವಿಭಜಿಸಿ ರಾಜಕೀಯ ಲಾಭ ಮಾಡಿಕೊಳ್ಳಲು ಹುನ್ನಾರ ನಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲಿಂಗಾಯತ ಸ್ವತಂತ್ರ ಧರ್ಮ ಸ್ಥಾಪನೆಗೆ ಏಳು ಜನ ಲಿಂಗಾಯತ ಅಥವಾ ವೀರಶೈವಕ್ಕೆ ಸೇರದ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ ಸಮರ್ಥ ಹಾಗೂ ತಜ್ಞರ ಸಮಿತಿ ರಚಿಸಿರುವ ಕ್ರಮ ಮೆಚ್ಚುವಂಥದ್ದು. ಸರ್ಕಾರದ ಕ್ರಮ ಸ್ವಾಗತಾರ್ಹ.
– ಡಾ|ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು, ಗದಗ ತೋಂಟದಾರ್ಯ ಮಠದ ಜಗದ್ಗುರು.

Advertisement

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಕುರಿತು ಮುಖ್ಯಮಂತ್ರಿಯವರು ರಚಿಸಿದ ಸಮಿತಿಯಲ್ಲಿ ಇರುವವರಿಗೆ ವೀರಶೈವ-ಲಿಂಗಾಯತ ಸಂಸ್ಕೃತಿ ಗೊತ್ತಿಲ್ಲ. ಸಮಿತಿ ರಚನೆ ಸಂವಿಧಾನ ಬಾಹಿರ. ಚುನಾವಣೆಯ ಈ ಹಂತದಲ್ಲಿ ಸರ್ಕಾರ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ರಾಜ್ಯಪಾಲರು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಾಕೀತು ಮಾಡಬೇಕು.
–  ರಂಭಾಪುರಿ ಪೀಠದ ಜಗದ್ಗುರು ಬಾಳೆಹೊನ್ನೂರು ಮಠ

ಸಿದ್ದರಾಮಯ್ಯ ಧರ್ಮ ಆಧಾರಿತ ರಾಜಕೀಯ ನಡೆಸುತ್ತಿರುವುದು ಸರಿಯಲ್ಲ. ಒಡೆದು ಆಳುವ ನೀತಿಗೆ ಎಂದಿಗೂ ಗೆಲುವು ಸಿಗಲು ಸಾಧ್ಯವಿಲ್ಲ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿಯನ್ನು ರಚಿಸುವ ಅವಶ್ಯಕತೆಯೇ ಇಲ್ಲ. ಸಿದ್ದರಾಮಯ್ಯ ಅನುಸರಿಸುತ್ತಿರುವ ರಾಜಕೀಯ ಅವರಿಗೆ ತಿರುಗಿ ಬೀಳಲಿದೆ.
– ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next