Advertisement
ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಈ ಮಹತ್ವದ ಸಭೆಯಲ್ಲಿ ಸರಕಾರದ ಭಾಗವಾಗಿರುವ ಹಿರಿಯ ಸಚಿವರೂ ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯದ ಶಾಸಕರು, ಸಂಸದರು, ವಿಧಾನ ಪರಿಷತ್ತಿನ ಸದಸ್ಯರು, ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಮುಂಚೂಣಿ ನಾಯಕರೆಲ್ಲರೂ ಭಾಗವಹಿಸಿದ್ದರು. ಅಲ್ಲಿ ಸರಕಾರ ಕೈಗೆತ್ತಿಕೊಳ್ಳಲಿರುವ ಜಾತಿ ಗಣತಿ ವರದಿಗೆ ಒಕ್ಕೊರಲಿನಿಂದ ವಿರೋಧ ವ್ಯಕ್ತವಾಗಿದ್ದು ಹೊಸದಾಗಿ ವೈಜ್ಞಾನಿಕವಾಗಿ ಜಾತಿ ಸಮೀಕ್ಷೆ ನಡೆಸಲು ಸರಕಾರವನ್ನು ಒತ್ತಾಯಿಸಲಾಯಿತು.
Related Articles
ಹತ್ತು ವರ್ಷಗಳ ಹಿಂದೆ ನಡೆಸಲಾದ ಸಮೀಕ್ಷೆ ವರದಿಯು ಹಲವು ವೈರುಧ್ಯ ಮತ್ತು ಲೋಪಗಳಿಂದ ಕೂಡಿದೆ. ಅವೈಜ್ಞಾನಿಕ ಮತ್ತು ಅಸಂವಿಧಾನಿಕವಾದ ಈ ವರದಿಯು ಸ್ವೀಕಾರಾರ್ಹವಲ್ಲ. ಆದ್ದರಿಂದ ಹೊಸದಾಗಿ ಸಮೀಕ್ಷೆ ನಡೆಸಬೇಕು. ಅಲ್ಲದೆ, ಮುಖ್ಯಮಂತ್ರಿ ಈ ಕುರಿತು ಯಾವುದೇ ಉದ್ದೇಶಿತ ಪ್ರಕ್ರಿಯೆಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದ ಸಮುದಾಯದ ನಾಯಕರು, ಶೀಘ್ರದಲ್ಲೇ ಮಹಾಸಭಾ ವತಿಯಿಂದಲೇ ರಾಜ್ಯಾದ್ಯಂತ ವೀರಶೈವ-ಲಿಂಗಾಯತರ ಸಮೀಕ್ಷೆ ನಡೆಸಲು ತೀರ್ಮಾನಿಸಿತು. ಇದನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸುವ ಗುರಿಯನ್ನೂ ಇದೇ ವೇಳೆ ನಿಗದಿಪಡಿಸಲಾಯಿತು.
Advertisement
ಸಾಮಾಜಿಕ ಅಸಮಾನತೆಯ ನಿರಾಕರಣೆ ಮತ್ತು ಸಾಮಾಜಿಕನ್ಯಾಯ ಕುರಿತ ಸರ್ಕಾರದ ಎಲ್ಲ ಸೈದ್ಧಾಂತಿಕ, ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಪ್ರಕ್ರಿಯೆಗಳಲ್ಲಿ ವೀರಶೈವ ಲಿಂಗಾಯತ ಸಮುದಾಯ ಮುಂಚೂಣಿಯಲ್ಲಿ ನಿಂತು ಬೆಂಬಲಿಸುತ್ತದೆ. ಸರ್ವರಿಗೂ ಲೇಸನ್ನೇ ಬಯಸುವ ಸಮಸಮಾಜ ನಿರ್ಮಾಣ ಮಾಡಬೇಕು ಎಂಬ ಶರಣರ ತತ್ವದಡಿ ಮಹಾಸಭಾ ನಡೆಯುತ್ತಿದೆ. ಹಾಗಾಗಿ, ನಾವು ಜಾತಿ ಗಣತಿ ವಿರೋಧಿಗಳಲ್ಲ. ಆದರೆ, ಇದು ಹಲವು ಲೋಪಗಳಿಂದ ಕೂಡಿರುವುದರಿಂದ ಸ್ವೀಕಾರಕ್ಕೆ ಅರ್ಹವಲ್ಲ ಎಂದು ಮಹಾಸಭಾ ಸಮರ್ಥನೆಯನ್ನೂ ನೀಡಿದೆ.
ಬಿಎಸ್‌ವೈ ಸೇರಿ ಪ್ರಮುಖ ನಾಯಕರು ಭಾಗಿಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಮಹಾಸಭಾ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಸಚಿವರಾದ ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ, ಶಿವಾನಂದ ಪಾಟೀಲ್, ಶರಣಬಸಪ್ಪ ದರ್ಶನಾಪುರ, ಮುಖ್ಯಮಂತ್ರಿ ಸಲಹೆಗಾರ ಬಿ.ಆರ್. ಪಾಟೀಲ್, ಶಾಸಕರಾದ ವಿನಯ್ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ, ಹಂಪನಗೌಡ ಬಾದರ್ಲಿ, ಸಿ.ಎಸ್. ನಾಡಗೌಡ, ಸಂಸದರಾದ ಗದ್ದಿಗೌಡ ಮತ್ತು ಸಾಗರ್ ಖಂಡ್ರೆ, ಸಮುದಾಯದ ಮುಖಂಡ ಅಲ್ಲಂ ವೀರಭದ್ರಪ್ಪ, ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಸೇರಿದಂತೆ 55ಕ್ಕೂ ಅಧಿಕ ಶಾಸಕರು- ಮಾಜಿ ಶಾಸಕರು, ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.