Advertisement

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

03:15 PM Nov 25, 2024 | Team Udayavani |

ಬಿಗ್ ಬಾಸ್‌ ಮನೆಯಿಂದ ಧರ್ಮ ಕೀರ್ತಿರಾಜ್‌ ಔಟ್‌ ಆಗಿದ್ದಾರೆ. ಎಂಟು ವಾರಗಳ ಏಳು – ಬೀಳಿನ ಅವರ ಜರ್ನಿಯನ್ನು ತಿರುಗಿ ನೋಡಿದರೆ ಅಲ್ಲೊಂದು ನಿಷ್ಕಲ್ಮಶ ಮನಸ್ಸಿನ ವ್ಯಕ್ತಿತ್ವವೊಂದು ಕಾಣುತ್ತದೆ.

Advertisement

ಸಿನಿಮಾರಂಗದಲ್ಲಿ ಚಾಕ್ಲೇಟ್‌ ಹೀರೋ ಆಗಿ ಗುರುತಿಸಿಕೊಂಡ ಧರ್ಮ ಕೀರ್ತಿರಾಜ್‌ ಅವರಿಗೆ ಬಿಗ್‌ ಬಾಸ್‌ ಒಂದು ಅವಕಾಶದ ವೇದಿಕೆ ಆಗಿತ್ತು. ಪ್ರತಿ ಸ್ಪರ್ಧಿಗಳ ಹಾಗೆ ತಾನು ಬಿಗ್‌ ಬಾಸ್‌ ಮನೆಯಲ್ಲಿ ಚೆನ್ನಾಗಿ ಆಡಿ ಟ್ರೋಫಿ ಗೆಲ್ಲಬೇಕೆನ್ನುವ ಕನಸಿನೊಂದಿಗೆ ಧರ್ಮ ಹೋಗಿದ್ದರು. ಕನಿಷ್ಠ ಪಕ್ಷ ಟ್ರೋಫಿ ಗೆಲ್ಲದಿದ್ದರೂ ಜನಮನವನ್ನು ಗೆಲ್ಲುವ ಪ್ರಯತ್ನವನ್ನು ಸ್ಪರ್ಧಿಗಳು ಮಾಡುತ್ತಾರೆ.

ಬಿಗ್‌ ಬಾಸ್‌ನಂತಹ ಕಾರ್ಯಕ್ರಮದಲ್ಲಿ ನೂರು ದಿನ ನಿಂತು ಟ್ರೋಫಿ ಗೆಲ್ಲಬೇಕಾದರೆ ಅಲ್ಲಿ ನಮ್ಮ ನಿಜವಾದ ವ್ಯಕ್ತಿತ್ವಕ್ಕೂ ಮುಖವಾಡ ಹಾಕುವ ಪರಿಸ್ಥಿತಿ ಪ್ರತಿನಿತ್ಯ ಬಂದು ಹೋಗುತ್ತದೆ. ತಾನು ಹೇಗಿದ್ದೇನೋ ಹಾಗೆಯೇ ಇರಬೇಕೆನ್ನುವ ಮನಸ್ಸಿನ ನಿರ್ಧಾರ ಬಿಗ್‌ ಬಾಸ್‌ ಕನ್ನಡಿಯಲ್ಲಿ ಮಾಯವಾಗುತ್ತದೆ.

ಬಿಗ್‌ ಬಾಸ್‌ ನಮ್ಮ ವ್ಯಕ್ತಿತ್ವದ ಆಟ. ಹೊರಗಡೆ ವ್ಯಕ್ತಿಗತವಾಗಿ ನಾವು ಹೇಗೆ ಇದ್ದೆವೋ ಹಾಗೆಯೇ ಇದ್ದರೆ ಖಂಡಿತ ಬಿಗ್‌ ಬಾಸ್‌ ಗೆಲ್ಲುವುದು ಅಷ್ಟು ಸುಲಭವಲ್ಲ. ಒಬ್ಬ ವ್ಯಕ್ತಿ ನಿಜವಾಗಿಯೂ ತಾನು ಇರೋದೇ ಹೀಗೆ ಎಂದು ಅದೇ ವ್ಯಕ್ತಿತ್ವವನ್ನು ಬಿಗ್‌ ಬಾಸ್‌ನಲ್ಲೂ ತೋರಿಸಿದರೆ ಸಹ ಸ್ಪರ್ಧಿಗಳ ಏ ಅವರನ್ನು ʼಮುಖವಾಡʼ ಹಾಕಿಕೊಂಡು ಬದುಕುತ್ತಿದ್ದಾರೆ ಎನ್ನುವ ಹಣೆಪಟ್ಟಿಯನ್ನು ಹಂಚಿಬಿಡುತ್ತಾರೆ. ಇದಲ್ಲದೆ ಒಬ್ಬಾತ ಜೋರು ಧ್ವನಿಯಲ್ಲಿ ಮಾತನಾಡಿದರೆ ʼಡಾಮಿನೇಟ್‌ʼ ಮಾಡುತ್ತಿದ್ದಾರೆ ಎನ್ನುವ ಮಾತನ್ನು ಕೇಳಿ ನಾಮಿನೇಷನ್‌ಗೆ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆಗಳಿರುತ್ತದೆ.

Advertisement

ಅತ್ತ ಸಿಟ್ಟು ಅಲ್ಲ ಇತ್ತ ಮುಗ್ಧನೂ ಅಲ್ಲದಂತೆ ಆಗಾಗ ತಪ್ಪಿಗೆ ತಪ್ಪು, ಸರಿಗೆ ಸರಿ ಎನ್ನುವ ಸ್ಪರ್ಧಿ ಮಾತ್ರ ಜನಮನದಲ್ಲಿ ʼಬಿಗ್‌ ಬಾಸ್‌ʼ ಆಗುತ್ತಾನೆ.

ಬಿಗ್‌ ಬಾಸ್‌ ಮನೆಯಲ್ಲಿ ಒಂದೊಂದು ಸ್ಪರ್ಧಿಗಳು ಒಂದೊಂದು ರೀತಿಯಲ್ಲಿದ್ದಾರೆ. ಕೆಲವರು ಆಟ ಶುರು ಮಾಡುವುದಕ್ಕೆ ಸೂಕ್ತ ಸಮಯಕ್ಕೆ ಕಾಯುತ್ತಿದ್ದಾರೆ. ಇನ್ನು ಕೆಲವರು ಇದೇ ನಮ್ಮ ಆಟವೆಂದು ಹೇಳುತ್ತಿದ್ದಾರೆ. ಟಾಸ್ಕ್‌ ಬಂದಾಗ ಮಾತ್ರ ತಮ್ಮ ಪವರ್‌ ಏನೆಂದು ತೋರಿಸುತ್ತೇವೆ ಎಂದು ಸವಾಲಿಗೆ ಸವಾಲಾಗುವಂತೆ ಮಾತಿನಲ್ಲೇ ರೋಷಾವೇಷ ತೋರಿಸುತ್ತಿದ್ದಾರೆ.

ಈ ಸ್ಪರ್ಧಿಗಳ ನಡುವೆ ಎಲ್ಲರೊಂದಿಗೆ ಆತ್ಮೀಯವಾಗಿದ್ದುಕೊಂಡು ತಾನಾಯಿತು ತನಗೆ ಸಿಕ್ಕ ಅವಕಾಶವಾಯಿತೆಂದು ಬಿಗ್‌ ಬಾಸ್‌ ಮನೆಯಲ್ಲಿದ್ದ ಧರ್ಮ ಇದೇ ಮುಳುವಾಯಿತು ಎಂದರೆ ತಪ್ಪಾಗದು.

ಮನೆಯಲ್ಲಿದ್ದಷ್ಟು ದಿನ ಯಾರೊಂದಿಗೂ ವಿನಃ ಕಾರಣ ಜಗಳ, ಮಾತು , ಕಿರಿಕ್‌ ಮಾಡಿಕೊಳ್ಳದೆ ಇದ್ದರು. ವೀಕ್ಷಕರಿಗೆ ಇದು ಧರ್ಮ ಅವರು ಎಲ್ಲೂ ಮನೆಯಲ್ಲಿ ಕಾಣಿಸುತ್ತಿಲ್ಲ ತುಂಬಾ ಡಲ್‌ ಆಗಿದ್ದಾರೆ ಎನ್ನುವ ಅಭಿಪ್ರಾಯ ಮೂಡುವಂತೆ ಮಾಡಿತು.

ಉಳಿದ ಸ್ಪರ್ಧಿಗಳ ಒಂದಲ್ಲ ಒಂದು ವಿಚಾರದಲ್ಲಿ ಮನೆಯಲ್ಲಿ ಸುದ್ದಿಯಾಗುತ್ತಿದ್ದರು. ಆ ವಾರ ಕಿಚ್ಚನ ಮಾತಿನಲ್ಲಿ ಆ ಸ್ಪರ್ಧಿಗಳ ಹೆಸರು ಕೇಳಿ ಬರುತ್ತಿತ್ತು. ಆದರೆ  ಧರ್ಮ ಅವರನ್ನು ಮಾತನಾಡಿ ಮಾತನಾಡಿ ಎಂದು ಬಲವಂತವಾಗಿ ಮಾತನಾಡುವಂತೆ ವೀಕ್ಷಕರ ಕಣ್ಣಿಗೆ ಕಾಣುತ್ತಿತ್ತು.

ನಾಚಿಕೆ ಸ್ವಭಾವ ʼಬಿಗ್‌ ಬಾಸ್‌ʼ ಜರ್ನಿ ಮುಕ್ತಾಯಕ್ಕೆ ಕಾರಣವಾಯಿತೇ?: ಬಿಗ್‌ ಬಾಸ್‌ ಮನೆಯಲ್ಲಿ ಶೈನ್‌ ಆಗಬೇಕಾದರೆ ದೊಡ್ಡ ಧ್ವನಿಯಲ್ಲಿ ಕಿರುಚಾಡಿಕೊಂಡು ಇರಬೇಕಾಗಿಲ್ಲ. ಹೀಗೆ ಏರು ಧ್ವನಿಯಲ್ಲಿ ಮಾತನಾಡಿಕೊಂಡಿ ಡಾಮಿನೇಟ್‌ ಆಟವನ್ನು ತೋರಿಸುವವರು ಹೆಚ್ಚು ದಿನ ಉಳಿಯುತ್ತಾರೆ ಎನ್ನುವುದನ್ನು ಹೇಳುವಂತಿಲ್ಲ. ಆದರೆ ಧ್ವನಿಯನ್ನೇ ಅಡಗಿಸಿಕೊಂಡು ಅಭಿಮಾನಿಗಳ ಅಥವಾ ವೀಕ್ಷಕರ ಮತವನ್ನು ಪಡೆಯುವುದು ಬಿಗ್‌ ಬಾಸ್‌ನಂತಹ ವ್ಯಕ್ತಿತ್ವದ ಆಟದಲ್ಲಿ ತುಸು ಕಷ್ಟ.

ಧರ್ಮ ಅವರ ಬಿಗ್‌ ಬಾಸ್‌ ಜರ್ನಿ ಮುಕ್ತಾಯಕ್ಕೆ ಈ ಅಂಶವೂ ಒಂದು ಕಾರಣವೆಂದು ಹೇಳಬಹುದು. ಟಾಸ್ಕ್‌ ಆಡಲು ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದಾರೆ. ಆದರೆ ಅಲ್ಲಿ ವೈಯಕ್ತಿಕವಾಗಿ ಗೆದ್ದು ತೋರಿಸಿದ್ದೇನೆ ಎನ್ನುವ ಶಕ್ತಿ ಎದ್ದು ಕಾಣಲಿಲ್ಲ. ಬಿಗ್‌ ಬಾಸ್‌ನಲ್ಲಿ ಆಟಕ್ಕೆ ʼಶಕ್ತಿಯೂ ಬೇಕು ಯುಕ್ತಿʼಯೂ ಬೇಕು. ಧರ್ಮ ಅವರು ಈ ಎರಡರಲ್ಲಿ ಒಂದನ್ನು ಬಳಸಿಕೊಂಡಿದ್ದರೂ ಇಂದು ಅವರು ಬಿಗ್‌ ಬಾಸ್‌ ಮನೆಯಲ್ಲಿ ಉಳಿಯುತ್ತಿದ್ದರೇನೋ..

ಹೊರಗೆ ಹೋದರೂ ಮನಗೆದ್ದ ಧರ್ಮ..: ಧರ್ಮ ಕೀರ್ತಿರಾಜ್‌ ಎಂದರೆ ಬಿಗ್‌ ಬಾಸ್‌ ಮನೆ ಮಂದಿಗೆ ನಗುಮುಖವೊಂದು ನೆನಪಿಗೆ ಬರುತ್ತದೆ. ಯಾರು ಏನೇ ಹೇಳಲಿ ಅಥವಾ ವಾದಿಸಲಿ ಅದನ್ನು ಧರ್ಮ ಒಂದು ಸಣ್ಣ ನಗುವಿನಿಂದಲೇ ಪ್ರತಿಕ್ರಿಯಿಸಿ ಉತ್ತರಿಸುತ್ತಿದ್ದರು.

ಮನೆಯಿಂದ ಆಚೆ ಬಂದ ಬಳಿಕ ನಿಷ್ಕಲಷ ಮನಸ್ಸಿನ ಧರ್ಮನನ್ನು ನೆನೆದು ಮನೆಮಂದಿಗೆ ಕಣ್ಣೀರು ಹಾಕಿರುವುದು ಅವರ ವ್ಯಕ್ತಿತ್ವಕ್ಕೆ ಸಿಕ್ಕ ಗೆಲುವು..

-ಸುಹಾನ್‌ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next