Advertisement

ತಜ್ಞರ ಸಮಿತಿಗೆ ವಿವರಣೆ ನಿರಾಕರಿಸಿದ ವೀರಶೈವಮಹಾಸಭಾ

09:21 AM Feb 03, 2018 | |

ಬೆಂಗಳೂರು: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ರಚಿಸಿರುವ ತಜ್ಞರ ಸಮಿತಿ ಮುಂದೆ ವಾದ ಮಂಡಿಸಲು ವೀರಶೈವ ಮಹಾಸಭೆ ನಿರಾಕರಿಸಿದೆ. ಅಲ್ಪ ಸಂಖ್ಯಾತ ಆಯೋಗದ ಮೂಲಕ ರಾಜ್ಯ ಸರ್ಕಾರ ನ್ಯಾ. ನಾಗಮೋಹನ್‌ ದಾಸ್‌ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿ ಶುಕ್ರವಾರ ಪ್ರತ್ಯೇಕ ಧರ್ಮ ಮಾನ್ಯತೆ ವಿಚಾರದಲ್ಲಿ ಸಲ್ಲಿಕೆಯಾಗಿರುವ ಮನವಿಗಳ ಬಗ್ಗೆ ಮೌಖೀಕ ವಿವರಣೆ ನೀಡುವಂತೆ ವೀರಶೈವ ಮಹಾಸಭೆಗೆ ಆಹ್ವಾನ ನೀಡಿದ್ದರು.

Advertisement

ಆದರೆ, ವೀರಶೈವ ಮಹಾಸಭೆಯ ಕಾರ್ಯದರ್ಶಿ ರೇಣುಕ ಪ್ರಸನ್ನ ಈ ಕುರಿತು ಸಮಿತಿಗೆ ಪತ್ರ ಬರೆದು, ವೀರಶೈವ ಮಹಾಸಭೆ ಯಾವುದೇ ದಾಖಲೆಗಳನ್ನು ಅಲ್ಪ ಸಂಖ್ಯಾತ ಆಯೋಗಕ್ಕಾಗಲಿ ಅಥವಾ ಆಯೋಗ ರಚಿಸಿರುವ ಸಮಿತಿಗಾಗಲಿ ನೀಡಲ್ಲ ಎಂದು ಹೇಳಿದ್ದಾರೆ. ಜತೆಗೆ ಪತ್ರದ ಮೂಲಕ ತಜ್ಞರ ಸಮಿತಿಯ ಅಸ್ತಿತ್ವವನ್ನೇ ಪ್ರಶ್ನಿಸಿರುವ ಅವರು, ಧರ್ಮದ ಮಾನ್ಯತೆ ಇಲ್ಲದಿರುವ ಧರ್ಮಗಳಿಗೆ ಅಲ್ಪ ಸಂಖ್ಯಾತರು ಅಥವಾ ಬಹು ಸಂಖ್ಯಾತರು ಎಂದು ತೀರ್ಮಾನಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಸಮಿತಿಯಲ್ಲಿರುವ ಸದಸ್ಯರ ಜ್ಞಾನದ ಬಗ್ಗೆ ಜಿಜ್ಞಾಸೆ ಇದೆ. ವೀರಶೈವ ಧರ್ಮದ ಹೆಸರಿನಲ್ಲಿ ರಾಜ್ಯದಲ್ಲಿ ಒಂದೂವರೆ ಕೋಟಿ
ವೀರಶೈವ ಲಿಂಗಾಯತ ಜನಸಂಖ್ಯೆ ಇದೆ. ಅಂತಹ ಸಮಾಜವನ್ನು ಒಡೆಯಲು ಹೊರಟಿರುವುದು ಸರ್ಕಾರ ಹಾಗೂ ಸರ್ಕಾರ ರಚಿಸಿರುವ ಸಮಿತಿಗೆ ಗೌರವ ತರುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ತಜ್ಞರ ಸಮಿತಿ ಮುಂದೆ ಶುಕ್ರವಾರ ವೀರಶೈವ ಲಿಂಗಾಯತ ಎರಡೂ ಒಂದೇ ಎಂದು ಸುಮಾರು 15 ಅರ್ಜಿಗಳು ಸಲ್ಲಿಕೆಯಾಗಿವೆ. ಸಮಿತಿ ಸದಸ್ಯರು ಶನಿವಾರವೂ ಸಾರ್ವಜನಿಕರಿಂದ ಮೌಖೀಕ ವಿವರಣೆ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next