Advertisement
ವಾರಾಹಿ ಯೋಜನೆಯ ಪ್ರಥಮ ಹಂತದ ಕಾಮಗಾರಿ ಸಂದರ್ಭದಲ್ಲೇ ಚೋರಾಡಿಯಿಂದ, ನೈಲಾಡಿ, ಗಾವಳಿ, ಎತ್ತಿನಟ್ಟಿ ಮದಗ, ಕೊಳ್ಕೆಬೈಲು ಸಂಪರ್ಕಿಸುವ 8.5 ಕಿ.ಮೀ. ಉದ್ದದ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ನೈಲಾಡಿ ಹಾಗೂ ಕೊಳ್ಕೆಬೈಲಿನಲ್ಲಿ ತಾಂತ್ರಿಕ ಕಾರಣದಿಂದಾಗಿ ಸುಮಾರು ಆರೇಳು- ವರ್ಷಗಳ ಕಾಲ ಕೆಲಸ ಸ್ಥಗಿತಗೊಳಿಸಲಾಗಿತ್ತು. ಇದೀಗ ನೈಲಾಡಿಯಲ್ಲಿ ಬಾಕಿ ಉಳಿದ ಕಾಮಗಾರಿಯನ್ನು ಪೂರ್ತಿಗೊಳಿಸಿ, ಕಾಲುವೆ ದುರಸ್ತಿಗೊಳಿಸಿ ಶಿರಿಯಾರ ಮದಗಕ್ಕೆ ನೀರು ಹರಿಸಲಾಗಿದೆ. ಆದರೆ ಕೊಳ್ಕೆಬೈಲಿನ ಕಾಮಗಾರಿ ಬಾಕಿ ಉಳಿದಿದೆ.
ಶಿರಿಯಾರ ಗ್ರಾ.ಪಂ. ಭೌಗೋಳಿಕವಾಗಿ 3,407.33 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, 4,839 ಜನಸಂಖ್ಯೆ ಇದೆ. ಶಿರಿಯಾರ, ಕೊಳ್ಕೆಬೆ„ಲು, ಜಂಬೂರು ಇಲ್ಲಿ ಪ್ರಮುಖ ಕೃಷಿ ಪ್ರದೇಶಗಳಿದ್ದು, ಶೇ. 75ರಷ್ಟು ಕೃಷಿಕರಿದ್ದಾರೆ. ಈ ಭಾಗದಲ್ಲಿ 227.26 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಭತ್ತ, ತೆಂಗು, ಅಡಿಕೆ ಬೆಳೆಯಲಾಗುತ್ತದೆ. ಪ್ರಸ್ತುತ ನೀರಾವರಿ ಸಮಸ್ಯೆಯಿಂದಾಗಿ ಇಲ್ಲಿನ ಬಹುತೇಕ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಎತ್ತಿನಟ್ಟಿ ಮದಗ ಸುಮಾರು 8-10 ಎಕ್ರೆ ವಿಸ್ತೀರ್ಣವನ್ನು ಹೊಂದಿದ್ದು, ಮಾರ್ಚ್- ಎಪ್ರಿಲ್‌ನಲ್ಲಿ ಈ ಮದಗ ತುಂಬಿದ್ದರೆ ಸ್ಥಳೀಯ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗುವುದರ ಜತೆಗೆ ಕೃಷಿ, ತೋಟಗಾರಿಕೆಗೆ ಅನುಕೂಲ ಹಾಗೂ ಕುಡಿಯುವ ನೀರಿನ ಸಮಸ್ಯೆ ದೂರವಾಗಲಿದೆ. ಪ್ರಸ್ತುತ ಗ್ರಾ.ಪಂ. ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಬಾವಿಯೊಂದು ಮದಗದ ಪಕ್ಕದಲ್ಲೇ ಇದೆ. ಹತ್ತಿರದಲ್ಲೇ ಇನ್ನೊಂದು ಹೆಚ್ಚುವರಿ ಬಾವಿ ಕೂಡ ಜಲಜೀವನ್ ಯೋಜನೆಯಡಿ ನಿರ್ಮಾಣಗೊಳ್ಳುತ್ತಿದೆ. ಇದನ್ನೂ ಓದಿ : ಸಾರ್ವಜನಿಕರಿಗೆ ಕೈಗೆಟುಕದ ಮಟ್ಟು ಸೇತುವೆ : ಕಾಮಗಾರಿ ಬಹುತೇಕ ಮುಗಿದರೂ ರಸ್ತೆ ಸಂಪರ್ಕ ರಹಿತ
Related Articles
Advertisement
ಸ್ಥಗಿತ ಕಾಮಗಾರಿ ಪೂರ್ತಿ ಅಗತ್ಯಮದಗದಿಂದ ಸುಮಾರು 1 ಕಿ.ಮೀ. ಮುಂದುವರಿದು ಕೊಳ್ಕೆಬೈಲು ಪ್ರದೇಶಕ್ಕೆ ಕಾಲುವೆ ಸಂಪರ್ಕಿಸುತ್ತದೆ. ಈ ಭಾಗದಲ್ಲಿ ಸುಮಾರು 8 ವರ್ಷದ ಹಿಂದೆ ಕಾಲುವೆ ನಿಮಾರ್ಣವಾಗಿದೆ. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ಮಧ್ಯ ಭಾಗದಲ್ಲಿ ನೂರು ಮೀಟರ್‌ನಷ್ಟು ಕಾಮಗಾರಿ ನಡೆಸದಂತೆ ಸ್ಥಳೀಯರೋರ್ವರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಇದೀಗ ಶಿರಿಯಾರ ಮದಗಕ್ಕೆ ತಲುಪಿರುವ ವಾರಾಹಿ ನೀರು ಕೊಳ್ಕೆಬೈಲು ಪ್ರದೇಶ ತಲುಪಬೇಕಾದರೆ ಬಾಕಿ ಉಳಿದ ಕಾಮಗಾರಿ ಅಗತ್ಯವಾಗಿ ನಡೆಯಬೇಕಿದೆ. ಈ ಭಾಗದಲ್ಲೇ ಅತೀ ಹೆಚ್ಚಿನ ಪ್ರಮಾಣದ ಕೃಷಿ ಭೂಮಿ, ತೆಂಗು, ಅಡಿಕೆ ತೋಟಗಳು ನೀರಿಲ್ಲದೆ ನಾಶವಾಗುತ್ತಿದ್ದು ವಾರಾಹಿ ನೀರು ಸಿಕ್ಕರೆ ಸಾಕಷ್ಟು ಅನುಕೂಲವಾಗಲಿದೆ. ಪೂರಕ ಕ್ರಮ
ಸತತ ಪ್ರಯತ್ನದಿಂದ ಶಿರಿಯಾರ ಎತ್ತಿನಟ್ಟಿ ಮದಗಕ್ಕೆ ವಾರಾಹಿ ನೀರು ತಲುಪಿದೆ. ನೈಲಾಡಿ ಭಾಗದಲ್ಲಿ ಸ್ಥಗಿತಗೊಂಡ ಕಾಮಗಾರಿ ಪೂರ್ಣಗೊಳಿಸಲು ಒಂದು ವರ್ಷದಿಂದ ಶ್ರಮಿಸಲಾಗಿದೆ. ಪ್ರಸ್ತುತ ಶಿರಿಯಾರದಿಂದ-ಕೊಳ್ಕೆಬೈಲು ತಲುಪುವಲ್ಲಿ ನ್ಯಾಯಾಲಯದ ವ್ಯಾಜ್ಯದಿಂದಾಗಿ ಸ್ವಲ್ಪ ಕಾಮಗಾರಿ ಬಾಕಿ ಇದ್ದು ಇದನ್ನುಬಗೆಹರಿಸುವ ಬಗ್ಗೆ ಪೂರಕ ಕ್ರಮಗಳನ್ನು ಕೈಗೊಳ್ಳಲಿದ್ದೇವೆ.
– ಪ್ರವೀಣ್ ಕುಮಾರ್, ಸಹಾಯಕ ಎಂಜಿನಿಯರ್, ವಾರಾಹಿ ಯೋಜನೆ ಕೃಷಿಗೆ ಜೀವಜಲ
ವಾರಾಹಿ ನೀರನ್ನೇ ನಂಬಿ ನೂರಾರು ಎಕ್ರೆ ತೋಟ ಈ ಭಾಗದಲ್ಲಿ ನಿರ್ಮಾಣವಾಗಿದ್ದು ಅದೆಲ್ಲವೂ ನೀರಿಲ್ಲದೆ ಸೊರಗುತ್ತಿದೆ. ಸುಗ್ಗಿ ಮುಂತಾದ ಬೇಸಾಯ ನೀರಿಲ್ಲದೆ ಸ್ಥಗಿತವಾಗಿದೆ. ಆದ್ದರಿಂದ ಬಾಕಿ ಉಳಿದ ಕಾಮಗಾರಿ ಪೂರ್ತಿಗೊಳಿಸಿ ಈ ಭಾಗಕ್ಕೆ ನೀರು ಹರಿಸಿದಲ್ಲಿ ಕೃಷಿಕರಿಗೆ ಜೀವಜಲವಾಗಿ ಪರಿಣಮಿಸಲಿದೆ.
– ನಾಗರಾಜ್ ಆಚಾರ್ಯ ಕೊಳ್ಕೆಬೈಲು, ಸ್ಥಳೀಯ ಕೃಷಿಕರು – ರಾಜೇಶ್ ಗಾಣಿಗ ಅಚ್ಲಾಡಿ