ಉಡುಪಿ: ಈ ಹಿಂದೆ ಪಾಕಿಸ್ತಾನ ಜೈ ಅಂದವರ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದೆ. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಸಾಬೀತಾದರೆ ಕ್ರಮ ಎಂದು ಸರಕಾರ ಹೇಳಿತ್ತು. ಆದರೆ ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಡಿ. 20ರ ಶುಕ್ರವಾರ ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಅಶ್ಲೀಲ ಶಬ್ದ ಬಳಸಿಲ್ಲ ಎಂದು ಸಿ.ಟಿ .ರವಿ ಅನೇಕ ಬಾರಿ ಸ್ಪಷ್ಟಪಡಿಸಿದ್ದಾರೆ. ಸಭಾಪತಿಗಳ ಸುಪರ್ದಿಯಲ್ಲಿರುವ ಎಲ್ಲಾ ಕಡತಗಳನ್ನು ತರಿಸಿ ನಡೆದಿರುವ ವಿದ್ಯಮಾನ, ಆಡಿರುವ ಮಾತು ಪರಿಶೀಲನೆಯಾಗಬೇಕು. ಆರೋಪ ಸಾಬೀತಾದ ಅನಂತರ ಕ್ರಮ ತೆಗೆದುಕೊಂಡರೆ ಅರ್ಥ ಇದೆ ಎಂದರು.
ಸುವರ್ಣ ಸೌಧದಲ್ಲಿ ಸಿ.ಟಿ. ರವಿಯನ್ನು ಅಟ್ಟಾಡಿಸಿ ಗೂಂಡಾಗಿರಿ ತೋರಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರ ವಿಪಕ್ಷವನ್ನು ಹೀಗೆ ನಡೆಸಿಕೊಳ್ಳುವುದು ಸರಿಯಾ? ಎಂದು ಪ್ರಶ್ನಿಸಿದರು.
ಭಯೋತ್ಪಾದಕರ ರೀತಿಯಲ್ಲಿ ಸಿ.ಟಿ.ರವಿಯನ್ನ ಪೊಲೀಸರು ಹೊತ್ತೊಯ್ದಿದ್ದಾರೆ. ಠಾಣೆಯಿಂದ ಠಾಣೆಗೆ ಸುತ್ತಾಡಿಸಿದ್ದಾರೆ. ಅವರ ತಲೆಗೂ ಗಾಯಗಳಾಗಿವೆ. ಈ ಎಲ್ಲ ವಿದ್ಯಮಾನಗಳ ಬಗ್ಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸ್ಪಷ್ಟನೆ ನೀಡಬೇಕು ಎಂದರು.
ಶಾಸಕನನ್ನು ಬಂಧಿಸಲು ಸಭಾಪತಿ ಅವರ ಅನುಮತಿ ಬೇಕು. ಈ ಬೆಳವಣಿಗೆ ರಾಜ್ಯ ಸರಕಾರಕ್ಕೆ ಗೌರವ, ಶೋಭೆ ತರುವುದಿಲ್ಲ ಎಂದರು.
ಸದನ ಇರುವುದು ಜನಸಾಮಾನ್ಯರ ಬಗ್ಗೆ ಚರ್ಚೆ ಮಾಡಲು. ಯಾವುದೇ ವೈಯಕ್ತಿಕ ಟೀಕೆ- ಟಿಪ್ಪಣಿಗಳು ಅಲ್ಲಿ ಇರಬಾರದು. ಏನಾಗಿದೆ ಎಂದು ಪರಿಶೀಲಿಸದೆ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿರುವುದು ಸರಿಯಲ್ಲ. ಯಾರ ಮನಸ್ಸಿಗೂ ನೋವಾಗದಂತೆ ಸತ್ಯದರ್ಶನವಾಗಬೇಕು ಎಂದರು.