Advertisement

ಕಾಪು ಕ್ಷೇತ್ರಕ್ಕೆ ಇನ್ನೂ ಸಿಗದ ವಾರಾಹಿ ಅನುದಾನ ​​​​​​​

12:30 AM Feb 15, 2019 | Team Udayavani |

ಮಣಿಪಾಲ: ಕಾಪು ಕ್ಷೇತ್ರಕ್ಕೆ ಹಿಂದಿನಿಂದಲೂ ವರ್ಷಂಪ್ರತಿ ದೊರೆಯುತ್ತಿದ್ದ ಪ್ರಮುಖ ಅನುದಾನಗಳಲ್ಲಿ ಒಂದಾದ ವಾರಾಹಿ ಅಚ್ಚುಕಟ್ಟು ಪ್ರದೇಶ ಅನುದಾನ 2018-19ನೇ ಸಾಲಿಗೆ ಕೊಡಲು ನೀರಾವರಿ ಸಚಿವರು ಸಮ್ಮತಿಸಿದರೂ ಅಧಿಕಾರಿಗಳ ವಿಳಂಬ ನೀತಿಯಿಂದ ಈವರೆಗೆ ಮಂಜೂರಾಗಿಲ್ಲ. ಜಿಲ್ಲೆಯ ಕಾಪು ಹೊರತುಪಡಿಸಿ ಉಳಿದ ಎಲ್ಲ ವಿಧಾನ ಸಭಾ ಕ್ಷೇತ್ರಗಳಿಗೆ ವಾರಾಹಿ ಅಚ್ಚುಕಟ್ಟು ಪ್ರದೇಶದ ರೂ. 2 ಕೋಟಿ ಅನುದಾನ ಲಭ್ಯವಾಗಿದ್ದು ಕೆಆರ್‌ಐಡಿಎಲ್‌ನಲ್ಲಿ ಕಾಮಗಾರಿ ಸಂಬಂಧ ಪ್ರಕ್ರಿಯೆಗಳು ನಡೆಯುತ್ತಿವೆ. 

Advertisement

ಏನಿದು ವಾರಾಹಿ ಅನುದಾನ?
ವಾರಾಹಿ ಅಚ್ಚುಕಟ್ಟು ಪ್ರದೇಶದಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕರ್ನಾಟಕ ನೀರಾವರಿ ನಿಗಮದ ಮುಲಕ ಮಂಜೂರಾಗುವ ಅನುದಾನ. ಇದರಲ್ಲಿ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯ ಕಾಮಗಾರಿಗಳು ಜಾರಿಯಾಗುತ್ತವೆ. ಶಾಸಕರಿಂದ ಶಿಫಾರಸುಗೊಂಡ ಕಾಮಗಾರಿಗಳನ್ನು ಅನುಷ್ಠಾನಿಸಲಾಗುತ್ತದೆ. 

ಯಾರಿಗೆಲ್ಲ ಅನುದಾನ?
2018-19ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ, ಕುಂದಾಪುರ, ಬೈಂದೂರು, ಉಡುಪಿ ಕ್ಷೇತ್ರಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ತಲಾ 2 ಕೋಟಿ ರೂ. (1.25/.75 ಕೋಟಿ, ಎಸ್‌ಸಿಪಿ/ಟಿಎಸ್‌ಪಿ), ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅವರಿಗೆ 1.5 ಕೋಟಿ ರೂ. ವಾರಾಹಿ ಅನುದಾನ  ಬಂದ ಬಗ್ಗೆ ಮಾಹಿತಿ ಇದ್ದು ಈ ಬಗ್ಗೆ ಈಗಾಗಲೇ ಅನುಷ್ಠಾನ ಕ್ರಮದ ಪ್ರಕ್ರಿಯೆಗಳು ನಡೆಯುತ್ತಿವೆ. 

ಹಿಂದೆ ಎಷ್ಟು ಅನುದಾನ ಬಂದಿತ್ತು?
2017-18ನೇ ಸಾಲಿನಲ್ಲಿ ವಿನಯ ಕುಮಾರ್‌ ಸೊರಕೆ ಅವರು ಕಾಪು ಶಾಸಕರಾಗಿದ್ದ ಅವಧಿಯಲ್ಲಿ  ಎಸ್‌ಸಿಪಿ ಯೋಜನೆಯಡಿಯಲ್ಲಿ 3 ಕೋಟಿ ಹಾಗೂ ಟಿಎಸ್‌ಪಿ ಯೋಜನೆಯಡಿ 1 ಕೋಟಿ, ಒಟ್ಟು 4 ಕೋಟಿ ರೂ. ಅನುದಾನ ಹಂಚಿಕೆಯಾಗಿತ್ತು. ಉಸ್ತುವಾರಿ ಸಚಿವರಾಗಿದ್ದಾಗಲೂ ಅನುದಾನ ಹಂಚಿಕೆಯಾಗಿತ್ತು.  

ಏನು ಕಾಮಗಾರಿ ಮಾಡಬಹುದು?
ಈ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನವಸತಿ ಪ್ರದೇಶದ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು ಮಾಡಬಹುದಾಗಿದೆ. ಲಾಲಾಜಿ ಮೆಂಡನ್‌ ಅವರು ಸಚಿವರಿಗೆ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿಗೆ 25 ಹಾಗೂ 50 ಲಕ್ಷ ರೂ.ನಂತೆ ಒಟ್ಟು 2 ಕೋಟಿ ರೂ.ನ ಎರಡು ಪ್ರಸ್ತಾವನೆ (4 ಕೋಟಿ ರೂ.) ಸಲ್ಲಿಸಿದ್ದರು.  

Advertisement

ತಾಂತ್ರಿಕ ಸಮಸ್ಯೆ?
ವಾರಾಹಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಕಾಪು ಬರದೇ ಇರುವುದು ತಾಂತ್ರಿಕ ಸಮಸ್ಯೆಯಾಗಿದೆ. ಆದರೆ ಕಾಪು ಕ್ಷೇತ್ರ ಜಿಲ್ಲೆಯ ಅವಿಭಾಜ್ಯ ಹಾಗೂ ಪ.ಜಾ./ಪ.ಪಂ.ನ ಅರ್ಹ ಫ‌ಲಾನುಭವಿಗಳಿರುವ ಪ್ರದೇಶ ಹೀಗಾಗಿ ತಾಂತ್ರಿಕವಾಗಿ ಒಳಪಡದಿದ್ದರೂ ಸಮಾನ ನ್ಯಾಯದ ದೃಷ್ಟಿಯಿಂದ ಅನುದಾನವನ್ನು ನೀಡಲಾಗುತ್ತಿತ್ತು. ಇನ್ನೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವವರು ಈ ಕ್ಷೇತ್ರದಲ್ಲಿ ತಮ್ಮ ಅನುದಾನವನ್ನು ಬಳಸಬಹುದಾಗಿದ್ದರೆ, ಕಾಪು ಕ್ಷೇತ್ರವನ್ನು ತಾಂತ್ರಿಕ ಕಾರಣವೊಡ್ಡಿ ಪ್ರತ್ಯೇಕ ಮಾಡುವುದು ಸರಿಯಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಈ ನಿಟ್ಟಿನಲ್ಲಿ ಸರಕಾರದ ನಿರ್ಣಯ ಅಗತ್ಯವಿದೆ.   

ಅಡಚಣೆ ಉಂಟು ಮಾಡುತ್ತಿದ್ದಾರೆ
ಖುದ್ದಾಗಿ ಸಚಿವ ಡಿ.ಕೆ. ಶಿವಕುಮಾರ್‌ಗೆ ಪ್ರಸ್ತಾವನೆ ಸಲ್ಲಿಸಿದ್ದು ಅವರು ಸಮ್ಮತಿಸಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಈ ಬಾರಿ ಹೊಸ ಅಡಚಣೆ ಉಂಟು ಮಾಡುತ್ತಿದ್ದು, ಕ್ಷೇತ್ರ ವಾರಾಹಿ ಅಚ್ಚುಕಟ್ಟು ಪ್ರದೇಶದಲ್ಲಿ ಬರುವುದಿಲ್ಲ ಎನ್ನುತ್ತಾರೆ. ಕಳೆದ ವರ್ಷಗಳಲ್ಲಿ ಇಲ್ಲದ ನಿಯಮ ಈಗ ಯಾಕೆ ? ಸಚಿವರ ಮೂಲಕ ಸಮಸ್ಯೆ ಶೀಘ್ರ ಬಗೆಹರಿಯುವ ನಿರೀಕ್ಷೆ ಇದೆ 
 – ಲಾಲಾಜಿ ಆರ್‌. ಮೆಂಡನ್‌,  
ಕಾಪು ಶಾಸಕ 

ಡಿಕೆಶಿ ಸಮ್ಮತಿ
ನಿಗದಿತವಾಗಿ ಬರುತ್ತಿದ್ದ ಅನುದಾನ 2018-19ನೇ ಸಾಲಿಗೆ ಬಾರದೇ ಇದ್ದ ಹಿನ್ನೆಲೆಯಲ್ಲಿ ಶಾಸಕ ಲಾಲಾಜಿ ಆರ್‌. ಮೆಂಡನ್‌ ಅವರು ನೀರಾವರಿ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು 2018 ನವೆಂಬರ್‌ನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಅವರು 2 ಕೋಟಿ ಮಂಜೂರಿಗೆ ಸೂಚಿಸಿದ್ದಾರೆ. ಆದರೆ ಅಧಿಕಾರಿಗಳು ಅನುದಾನ ಬಿಡುಗಡೆಗೆ ಮೀನಮೇಷ ಎಣಿಸುತ್ತಿದ್ದಾರೆ.

– ಅಶ್ವಿ‌ನ್‌ ಲಾರೆನ್ಸ್‌ ಮೂಡುಬೆಳ್ಳೆ

Advertisement

Udayavani is now on Telegram. Click here to join our channel and stay updated with the latest news.

Next