ಉಡುಪಿ: ಉಭಯ ಜಿಲ್ಲೆಯಲ್ಲಿ ಮಳೆ ಕಡಿಮೆಯಾದರೂ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕದೇ ಇರುವುದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಉದಯವಾಣಿ ಪ್ರಕಟಿಸಿದ ವಿಸ್ತೃತ ವರದಿಗೆ ಸ್ಪಂದಿಸಿರುವ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಲಗೆ ಹಾಕುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಸರಕಾರದ ಅನುಮೋದನೆ ಬರುವ ವರೆಗೂ ಕಾಯುತ್ತಾ ಕುಳಿತರೆ ನದಿಯ ಸಿಹಿ ನೀರು ಸಮುದ್ರ ಸೇರುವ ಜತೆಗೆ ಸಮುದ್ರದ ಉಪ್ಪು ನೀರು ನದಿ ನೀರಿನೊಂದಿಗೆ ಸೇರಿ ಕೃಷಿ ಭೂಮಿಗೂ ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ ಎಂಬುದನ್ನು ಅರಿತು, ಅನುದಾನ ಬರುವ ಮೊದಲೇ ಅಧಿಕಾರಿಗಳು ಜಿಲ್ಲೆಯ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಲು ಮುಂದಾಗಿದ್ದಾರೆ.
ಪ್ರತಿ ವರ್ಷ ಅಕ್ಟೋಬರ್ ತಿಂಗಳೊಳಗೆ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಲು ಸರಕಾರ ಆರ್ಥಿಕ ಅನುಮೋದನೆ ನೀಡುತ್ತದೆ ಮತ್ತು ಅಕ್ಟೋಬರ್ ತಿಂಗಳಲ್ಲಿ ಹಲಗೆ ಹಾಕುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈ ಬಾರಿ ಮಳೆ ಕಡಿಮೆಯಾದರೂ ಸರಕಾರದಿಂದ ಆರ್ಥಿಕ ಅನುಮೋದನೆ ಸಿಕ್ಕಿರಲಿಲ್ಲ. ಈಗ ನದಿಗಳ ಒಳ ಹರಿವು ಕಡಿಮೆಯಾಗುತ್ತಿರುವುದನ್ನು ಗಮನಿಸಿ ಇಲಾಖೆಯಿಂದ ಹಲಗೆ ಅಳವಡಿಸಲು ಕ್ರಮ ಆಗುತ್ತಿದೆ.
ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ಗಳ ಅನುದಾನಗಳಲ್ಲಿ ಉಭಯ ಜಿಲ್ಲೆಯಲ್ಲಿ 4 ಸಾವಿರಕ್ಕೂ ಅಧಿಕ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಜತೆಗೆ 7 ಮೀಟರ್ಗಿಂತ ಕಡಿಮೆ ಇರುವ ಕಾಲುಸಂಕಗಳನ್ನು ನರೇಗಾ ಯೋಜನೆಯಡಿಯಲ್ಲೂ ನಿರ್ಮಿಸಲಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ ಉಡುಪಿಯಲ್ಲಿ 660 ಹಾಗೂ ದ.ಕ. ಜಿಲ್ಲೆಯಲ್ಲಿ 600ಕ್ಕೂ ಅಧಿಕ ಕಿಂಡಿ ಅಣೆಕಟ್ಟುಗಳು ಇವೆ.
ಶೀಘ್ರದಲ್ಲೇ ಸರಕಾರದ ಅನುಮೋದನೆ ಬರುವ ಸಾಧ್ಯತೆ ಯಿದೆ. ನದಿಗಳ ಒಳ ಹರಿವು ಗಮನಿಸಿ ಆದ್ಯತೆ ಮೇರೆಗೆ ಅಲ್ಲಲ್ಲಿ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸುವ ಪ್ರಕ್ರಿಯೆ ಆರಂಭಿಸಿದ್ದೇವೆ.
-ಅರುಣ್, ಕಾರ್ಯಪಾಲ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ