Advertisement

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಉತ್ಪನ್ನ ಬೇಡಿಕೆ ಹೆಚ್ಚಿಸಲು ಸಂಶೋಧನೆ ಕೈಗೊಳ್ಳಿ

09:08 PM Sep 22, 2021 | Team Udayavani |

ಬೆಂಗಳೂರು: ದೇಶದ ಕೃಷಿ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಭಾರತೀಯ ಕೃಷಿ ಸಂಶೋಧನಾ ಪರಿಷತ್ತು (ಐಸಿಎಆರ್‌) ಸಂಶೋಧನೆ ಕೈಗೊಳ್ಳಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

75ನೇ ಸ್ವಾತಂತ್ರೋತ್ಸವದ ನೆನಪಿನ ಆಜಾದಿ ಕಾ ಅಮೃತ್‌ ಮಹೋತ್ಸವ ಕಾರ್ಯಕ್ರಮದ ಭಾಗವಾಗಿ ನಗರದ ಅಶೋಕ ಹೋಟೆಲ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾಣಿಜ್ಯ ಉತ್ಸವ – ಕೃಷಿ ಉದ್ಯಮದಾರರ ಸಮಾವೇಶ ಮತ್ತು ಪ್ರದರ್ಶನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದ ಕೃಷಿ ಉತ್ಪನ್ನಗಳು ಗುಣಮಟ್ಟದಲ್ಲಿ ವಿದೇಶಿ ಮಾರುಕಟ್ಟೆಗಳಿಗೆ ಸವಾಲು ಒಡ್ಡುವ ರೀತಿಯಲ್ಲಿ ನಮ್ಮ ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆಗಳು ಹಾಗೂ ವಿಶ್ವವಿದ್ಯಾಲಯಗಳು ಒಗ್ಗೂಡಿ ಕಾರ್ಯಗಳನ್ನು ಕೈಗೊಳ್ಳುವ ಹಾಗೂ ಸಂಶೋಧನೆ ನಡೆಸುವ ಕಾರ್ಯ ಆಗಬೇಕಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ದೇಶದ ಹಣ್ಣು, ತರಕಾರಿ ಹಾಗೂ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಲು ಗುಣಮಟ್ಟದ ಹಾಗೂ ರಾಸಾಯನಿಕ ಮುಕ್ತ ಪದಾರ್ಥಗಳನ್ನು ಬೆಳೆಯಬೇಕಿದೆ.

ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು, ಐಸಿಎಆರ್‌ ಸಂಶೋಧನೆ ನಡೆಸಿ ಯಾವ ಬೆಳೆಗೆ ಎಷ್ಟು ಪ್ರಮಾಣದಲ್ಲಿ ರಾಸಾಯನಿಕ ಬಳಸಬೇಕು, ಸಾವಯವಗೊಬ್ಬರದಿಂದಲೇ ಆರೋಗ್ಯಕರ ಬೆಳೆಗಳನ್ನು ಬೆಳೆಯುವುದು ಹೇಗೆ ಎಂಬಿತ್ಯಾದಿ ವಿಚಾರಗಳ ಕುರಿತು ರೈತರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿ:ದೇಶಕ್ಕಾಗಿ ಮಾತ್ರವಲ್ಲ, ಬಿಜೆಪಿ ಪಕ್ಷಕ್ಕೂ ದಿ. ಮನೋಹರ್ ಪರೀಕರ್‌ ಅವರ ಸೇವೆ ಅನನ್ಯ

Advertisement

ವಿದೇಶಗಳಲ್ಲಿ ಕಡಿಮೆ ಅವಧಿಯಲ್ಲಿ ಗುಣಮಟ್ಟದ, ಆರೋಗ್ಯಕರ ಹಾಗೂ ಆಕರ್ಷಕ ಬಣ್ಣ ಮತ್ತು ಗಾತ್ರ ಇರುವ ತಳಿಗಳ ಸಂಶೋಧನೆಗಳು ನಡೆದಿವೆ. ಈ ರೀತಿಯ ಸಂಶೋಧನೆಗಳು ನಮ್ಮಲೂ ನಡೆಯಬೇಕಿದೆ ಈ ನಿಟ್ಟಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಸಹ ಜಂಟಿಯಾಗಿ ಕಾರ್ಯಯೋಜನೆಗಳನ್ನು ರೂಪಿಸಬೇಕು. ಪ್ರಸ್ತುತ ಸಾವಯವ ಸಿರಿಧಾನ್ಯಗಳಿಗೆ ಹೆಚ್ಚು ಬೇಡಿಕೆಯಿದೆ. ಆದರೆ, ಈ ಸಿರಿಧಾನ್ಯಗಳನ್ನು ಬೆಳೆಯುವ ಪ್ರಮಾಣ ಅತ್ಯಂತ ಕಡಿಮೆಯಿದ್ದು, 2023ರ ಅಂತ್ಯದ ವೇಳೆಗೆ ಇದರ ಪ್ರಮಾಣ ಹೆಚ್ಚಳವಾಗಬೇಕು ಎಂದರು.

ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜಕುಮಾರ್‌ ಕಟಾರಿಯಾ ಮಾತನಾಡಿ, ಭಾರತ ದೇಶದಲ್ಲಿ ಗುಣಮಟ್ಟದ ಬೀಜೋತ್ಪಾದನೆಯಲ್ಲಿ ಕೊರತೆಯಿದೆ. ಇದಕ್ಕಾಗಿ ವಿಶ್ವವಿದ್ಯಾಲಯಗಳು ಹೆಚ್ಚು ಸಂಶೋಧನೆಗಳಲ್ಲಿ ತೊಡಗಬೇಕು ಎಂದು ಹೇಳಿದರು.

ಕೃಷಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜಕುಮಾರ್‌ ಖತ್ರಿ ಮಾತನಾಡಿ, ರಾಜ್ಯದ ಎಲ್ಲ ಕೃಷಿ ಉತ್ಪನ್ನಗಳು ಅಂತಾರಾಷ್ಟ್ರ ಮಟ್ಟದ ಗುಣಮಟ್ಟದ ಪ್ರಮಾಣ ಪತ್ರ ಪಡೆಯಲು ಶ್ರಮಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರದಿಂದ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ನಬಾರ್ಡ್‌ ನಮುಖ್ಯ ಕಾರ್ಯನಿವಾಹಕ ವ್ಯವಸ್ಥಾಪಕ ನೀರಜ್‌ ಕುಮಾರ್‌ ವರ್ಮಾ, ಕೃಷಿ ಮತ್ತು ಸಂಸ್ಕರಿಸಿದ ಆಹಾರೋತ್ಪಾದನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ(ಅಪೇಡಾ)ದ ನಿರ್ದೇಶಕ ಡಾ.ತರುಣ್‌ ಬಜಾಜ್‌, ಭಾರತೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಆನಂದ ರಾಮಕೃಷ್ಣನ್‌ ಉಪಸ್ಥಿತರಿದ್ದರು.

ಉತ್ಸವದಲ್ಲಿ ನಾನಾ ಜಿಲ್ಲೆಗಳಿಂದ ಪ್ರಗತಿ ಪರ, ಸಂಶೋಧನೆಗಳಲ್ಲಿ ತೊಡಗಿರುವ ರೈತರಿಗೆ ವೇದಿಕೆ ಒದಗಿಸಲಾಗಿತ್ತು. ಜತೆಗೆ ಸಾವಯವ ಉತ್ಪನ್ನಗಳ ಮಳಿಗೆಗಳನ್ನು ತೆರೆಯಲಾಗಿತ್ತು.

ರಾಜ್ಯ ಸರ್ಕಾರಗಳು ಕೈಗಾರಿಕೆ ಇಲಾಖೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತಿಗೆ ಪ್ರತ್ಯೇಕ ಕೋಶ ತೆರೆಯಲು ರಾಜ್ಯ ಸರ್ಕಾರ ಸ್ಪಂದಿಸಿದೆ. ಶೀಘ್ರದಲ್ಲಿಯೇ ಕೋಶಕ್ಕೆ ಚಾಲನೆ ದೊರಯಬಹುದು. ಇದರಿಂದ ದೇಶ ಮತ್ತು ಹೊರ ದೇಶಗಳ ಮಾರುಕಟ್ಟೆಗಳಲ್ಲಿ ರಾಜ್ಯದ ಕೃಷಿ ಉತ್ಪನ್ನಗಳು ಸ್ಥಾನ ಪಡೆದುಕೊಳ್ಳಲು ಅವಕಾಶ ಸಿಗಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next