Advertisement

ಕ್ರೈಸ್ತ ಬಾಂಧವರಿಂದ ಸಂಭ್ರಮದ ತೆನೆಹಬ್ಬ ಆಚರಣೆ

10:42 AM Sep 09, 2018 | Team Udayavani |

ವಾಮಂಜೂರು: ಇಲ್ಲಿನ ಶ್ರಮಿಕ ಸಂತ ಜೋಸೆಫ್‌ ಚರ್ಚ್‌ನಲ್ಲಿ ಚರ್ಚ್‌ನ ಧರ್ಮಗುರು ವಂ| ಸಿಪ್ರಿಯನ್‌ ಪಿಂಟೋ ಅವರ ನೇತೃತ್ವದಲ್ಲಿ ತೆನೆಹಬ್ಬ ಆಚರಿಸಲಾಯಿತು. ವಾಮಂಜೂರು ಚರ್ಚಿನ ಕ್ರೈಸ್ತ ಬಾಂಧವರು ‘ಮೊಂತಿ ಫೆಸ್ತ್’ ಮರಿಯಮ್ಮ ಮಾತೆಯ ಹುಟ್ಟು ಹಬ್ಬವನ್ನು ಶನಿವಾರ ಭಕ್ತಿಶ್ರದ್ಧೆಯಿಂದ ಆಚರಿಸಿದರು. ಬೆಳಗ್ಗೆ ವಾಮಂಜೂರು ಪೇಟೆಯಲ್ಲಿ ಭಕ್ತರು ಪ್ರಥಮ ತೆನೆ, ಫಲಪುಷ್ಪಗಳನ್ನು ಸಂಗ್ರಹಿಸಿ ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡರು. ಚರ್ಚಿನ ಪ್ರಧಾನ ಗುರುಗಳು ವಂ| ಸಿಪ್ರಿಯಾನ್‌ ಪಿಂಟೊ ಪ್ರಾರ್ಥನಾ ವಿಧಿಯನ್ನು ನಡೆಸಿ ‘ತೆನೆ’ ಆಶೀರ್ವದಿಸಿದರು. ಮಕ್ಕಳು ಮರಿಯಮ್ಮ ಮಾತೆಗೆ ಹೂಗಳನ್ನು ಅರ್ಪಿಸಿದರು. ಬಳಿಕ ಧರ್ಮಗುರುಗಳು, ವೇದಿಕೆ ಸೇವಕರು, ಧರ್ಮಭಗಿನಿಯರು ಮತ್ತು ಭಕ್ತರು ವಾದ್ಯ ಮೇಳದೊಂದಿಗೆ ಸ್ತೋತ್ರ ಗೀತೆಗಳನ್ನು ಹಾಡಿ ಚರ್ಚಿಗೆ ಮೆರವಣಿಗೆಯಲ್ಲಿ ಆಗಮಿಸಿದರು.

Advertisement

ಚರ್ಚಿನಲ್ಲಿ ವಂ| ಅನಿಲ್‌ ಲೋಬೋ ಅವರು ಪವಿತ್ರ ದಿವ್ಯಬಲಿಪೂಜೆಯನ್ನು ನೆರವೇರಿಸಿದರು ಮತ್ತು ಮಾತೆ ಮರಿಯಮ್ಮನವರ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಲು ಭಕ್ತರಿಗೆ ಕರೆ ನೀಡಿ ಮಾತೆ ಮರಿಯಮ್ಮನವರು ಸದಾ ನಮ್ಮನ್ನು ಹರಸಲಿ ಎಂದು ಪ್ರಾರ್ಥಿಸಿದರು. ಹಿರಿಯ ಗುರುಗಳು ವಂ| ಜೋನ್‌ ಫೆರ್ನಾಂಡಿಸ್‌ ಮತ್ತು ಚರ್ಚಿನ ಪ್ರಧಾನ ಗುರುಗಳು ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.

ದಿವ್ಯಪೂಜೆಯ ಬಳಿಕ 26 ವಾರ್ಡ್‌ನ ಗುರಿಕಾರರಿಗೆ ಧರ್ಮಗುರುಗಳು ಆಶೀರ್ವದಿತ ತೆನೆಗಳನ್ನು ನೀಡಿದರು. ಗುರಿಕಾರರು ನೆರೆದ ಭಕ್ತರಿಗೆ ಹೊಸ ತೆನೆಯನ್ನು ವಿತರಿಸಿದರು. ದಿವ್ಯಪೂಜೆಯ ಬಳಿಕ ಭಕ್ತರಿಗೆ ಲಘು ಉಪಾಹಾರ ಮತ್ತು ಕಬ್ಬು ವಿತರಿಸಲಾಯಿತು.

ವಾಮಂಜೂರು ವಾಳೆಯ ಗುರಿಕಾರ ಮತ್ತು ಸದಸ್ಯರು ಹಬ್ಬದ ಮೇಲುಸ್ತುವಾರಿಯನ್ನು ನೋಡಿಕೊಂಡರು. ಕೆಥೋಲಿಕ್‌ ಸಭಾ ವಾಮಂಜೂರು ಘಟಕದ ಅಧ್ಯಕ್ಷರು ಮತ್ತು ಸದಸ್ಯರು ಹೊಸ ತೆನೆಗಳನ್ನು ಸಂಗ್ರಹಿಸಿದರು. ಹಬ್ಬದ ಪ್ರಯುಕ್ತ ಬಡ ಕುಟುಂಬಗಳಿಗೆ ದವಸಧಾನ್ಯಗಳನ್ನು ನೀಡಿದರು. ಚರ್ಚ್‌ ಪಾಲನಾ ಸಮಿತಿಯ ಉಪಾಧ್ಯಕ್ಷ ಸುನಿಲ್‌ ಪಿಂಟೋ ಮತ್ತು ಕಾರ್ಯದರ್ಶಿ ರೋಹನ್‌ ಪಿರೇರ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next