ಬಂಟ್ವಾಳ: ಬಂಟ್ವಾಳ ಸಮೀಪದ ಮಣಿಹಳ್ಳದಲ್ಲಿ ಬಿ.ಸಿ.ರೋಡ್ -ಪುಂಜಾಲಕಟ್ಟೆ ಹೆದ್ದಾರಿಯಿಂದ ವಾಮದಪದವು ರಸ್ತೆಗೆ ತಿರುಗುವ(ಕ್ರಾಸ್) ಸಮೀಪ ದಲ್ಲೇ ಮೋರಿಯೂ ಸೇರಿದಂತೆ ಅದರ ತಡೆಗೋಡೆ ಕುಸಿದು ನಿತ್ಯ ಅಪಘಾತಗಳು ನಡೆಯುತ್ತಿದ್ದು, ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದರೂ ಸ್ಪಂದನೆ ಸಿಕ್ಕಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪ್ರಸ್ತುತ ಕುಸಿದಿರುವ ಪ್ರದೇಶದಲ್ಲಿ ಅಪಾಯ ಸಂಭವಿಸದಂತೆ ಹಗ್ಗವೊಂದನ್ನು ಕಟ್ಟಲಾಗಿದ್ದು, ಹೀಗಾಗಿ ಬಂಟ್ವಾಳ ಭಾಗದಿಂದ ವಾಮದಪದವು ಭಾಗಕ್ಕೆ ಸಾಗುವ ವಾಹನಗಳು ಬಲ ಬದಿಗೆ ಚಲಿಸಿ ಅಪಘಾತಕ್ಕೆ ಕಾರಣವಾಗುತ್ತಿದೆ. ಈಗಾಗಲೇ ಸಾಕಷ್ಟು ಅಪಘಾತಗಳು ನಡೆದರೂ, ಅಧಿಕಾರಿ ವರ್ಗ ಕ್ಯಾರೇ ಅನ್ನುತ್ತಿಲ್ಲ ಎನ್ನಲಾಗುತ್ತಿದೆ.
ಒಂದು ವೇಳೆ ವಾಹನಗಳು ತಮ್ಮ ದಿಕ್ಕಿನಲ್ಲೇ ಸಾಗಿ ಸ್ವಲ್ಪ ಎಚ್ಚರ ತಪ್ಪಿದರೂ ವಾಹನ ಪಾತಾಳಕ್ಕೆ ಬಿದ್ದು ಜೀವಹಾನಿಯ ಅಪಾಯವೂ ಇದೆ. ಮೋರಿ ಕುಸಿದಿರುವ ಪ್ರದೇಶ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿದ್ದು, ರಸ್ತೆಯು ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುತ್ತಿದೆ.
ಸ್ಥಳೀಯರ ಮಾಹಿತಿ ಪ್ರಕಾರ ಸಮಸ್ಯೆಯನ್ನು ಈಗಾಗಲೇ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತಂದಿದ್ದು, ಆದರೆ ಅವರಿಂದ ಸ್ಪಂದನೆ ಸಿಕ್ಕಿಲ್ಲ. ಜತೆಗೆ ಪುರಸಭೆ ಸದಸ್ಯರು ಎಂಜಿನಿಯರ್ ಅವರ ಗಮನಕ್ಕೆ ತಂದಿದ್ದು, ಅದು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುತ್ತಿದ್ದು, ನಮ್ಮಲ್ಲಿ ದುರಸ್ತಿ ಪಡಿಸಲು ಅವಕಾಶವಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ.
ಈ ಸ್ಥಳದಲ್ಲಿ ಮೋರಿಯ ಒಂದು ಬದಿಯ ತಡೆಗೋಡೆ ಸಂಪೂರ್ಣ ಕುಸಿದಿದ್ದು, ಪೊದೆಗಳಿಂದ ಹೊಂಡ ಇರುವುದು ತತ್‌ಕ್ಷಣ ಗಮನಕ್ಕೆ ಬರುವುದಿಲ್ಲ. ಮತ್ತೂಂದು ಬದಿಯಲ್ಲೂ ತಡೆಗೋಡೆ ಊದಿಕೊಂಡಿದ್ದು, ಈಗಾಲೋ-ಆಗಲೋ ಕುಸಿಯುವ ಸ್ಥಿತಿ ಇದೆ.
ಅಧಿಕಾರಿಗಳ ಬಳಿ ಹೇಳಿದರೆ ಅನುದಾನವಿಲ್ಲ ಎಂಬ ಉತ್ತರ ನೀಡುತ್ತಾರೆ ಎನ್ನುವುದು ಸ್ಥಳೀಯರ ಆರೋಪ. ಹಂಪ್ಸ್ ಕೂಡ ತೆರವು ಹಿಂದೆ ಇದೇ ಸ್ಥಳದಲ್ಲಿ ಹಂಪ್ಸ್ ವೊಂದಿದ್ದು, ವಾಹನಗಳು ನಿಧಾನವಾಗಿ ಚಲಿಸುತ್ತಿದ್ದವು. ಇದರಿಂದ ಹೆಚ್ಚಿನ ತೊಂದರೆ ಇರಲಿಲ್ಲ. ಆದರೆ ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿಯ ಸಂದರ್ಭ ಹಂಪ್ಸ್ ತೆಗೆದು ಡಾಮರು ಹಾಕಲಾಗಿದೆ.
ಪ್ರಸ್ತುತ ಹೆದ್ದಾರಿಯು ಮೇಲಿದ್ದು, ವಾಮದಪದವು ರಸ್ತೆಗೆ ಕೆಳಕ್ಕೆ ಇಳಿಯಬೇಕಾಗಿರುವುದರಿಂದ ವಾಹನಗಳು ಮಣಿಹಳ್ಳದಲ್ಲಿರುವ ಪ್ರಾರಂಭದಲ್ಲೇ ಇಳಿಜಾರಿನಲ್ಲಿ ಏಕಾಏಕಿ ನುಗ್ಗಿ ಹೆಚ್ಚಿನ ಅಪಘಾತಗಳಿಗೆ ಕಾರಣವಾಗುತ್ತಿದೆ.