Advertisement

Bantwala: ಮೆಲ್ಕಾರ್‌ಎಲೆವೇಟೆಡ್‌ ರಸ್ತೆ; ಸಂಚಾರ ಆರಂಭ

02:37 PM Dec 05, 2024 | Team Udayavani |

ಬಂಟ್ವಾಳ: ಹಲವು ತೊಂದರೆಗಳನ್ನು ಸೃಷ್ಟಿಸಿ ಸಾಕಷ್ಟು ಟೀಕೆ- ಟ್ರೋಲ್‌ ಗೆ ಒಳಗಾಗಿದ್ದ ಬಿ.ಸಿ.ರೋಡು- ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಇದೀಗ ವೇಗವನ್ನು ಪಡೆದುಕೊಂಡು ಒಂದೊಂದೇ ವಿಭಾಗಗಳು ಸಂಚಾರಕ್ಕೆ ತೆರೆದುಕೊಳ್ಳುತ್ತಿದೆ. ಇದೀಗ ಮೆಲ್ಕಾರ್‌ಎಲೆವೇಟೆಡ್‌ ರಸ್ತೆ (ಅಂಡರ್‌ಪಾಸ್‌ ಮೇಲಿನ ರಸ್ತೆ) ಸಂಚಾರಕ್ಕೆ ತೆರೆದುಕೊಂಡು ವಾಹನ ಓಡಾಟ ಆರಂಭವಾಗಿದೆ.

Advertisement

ಕಳೆದ ಹತ್ತಿಪ್ಪತ್ತು ದಿನಗಳಿಂದ ಮಳೆ ಕಡಿಮೆಯಾದ ಬಳಿಕ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಕೆಲವು ದಿನಗಳ ಹಿಂದೆ ಪಾಣೆಮಂಗಳೂರು ಹೊಸ ಸೇತುವೆ ಸಂಚಾರಕ್ಕೆ ಮುಕ್ತಗೊಂಡಿತ್ತು. ಕಲ್ಲಡ್ಕದಲ್ಲಿ ಒಂದು ಭಾಗದ ಸರ್ವೀಸ್‌ ರಸ್ತೆಯ ಕಾಂಕ್ರೀಟ್‌ ಕಾಮಗಾರಿ ಪೂರ್ಣಗೊಂಡಿದೆ. ಪಾಣೆಮಂಗಳೂರಿನ ಎಲೆವೇಟೆಡ್‌ ರಸ್ತೆಯಲ್ಲಿ ಈಗಾಗಲೇ ಎರಡೂ ಬದಿಯಿಂದಲೂ ವಾಹನಗಳು ಸಂಚರಿಸುತ್ತಿದೆ. ಪ್ರಸ್ತುತ ಮೆಲ್ಕಾರ್‌ಎಲೆವೇಟೆಡ್‌ ರಸ್ತೆಯಲ್ಲಿ ಪೂರ್ಣಗೊಂಡಿರುವ ಒಂದು ಬದಿಯ ರಸ್ತೆಯಲ್ಲಿ ಎರಡೂ ದಿಕ್ಕಿಗೆ ವಾಹನಗಳು ಸಂಚರಿಸುತ್ತಿವೆ.

ಪಾಣೆಮಂಗಳೂರು ಹಾಗೂ ಮೆಲ್ಕಾರಿನಲ್ಲಿ ಸರ್ವೀಸ್‌ ರಸ್ತೆಗಳಿದ್ದು, ಎರಡೂ ಕಡೆಯ ಜಂಕ್ಷನ್‌ನಲ್ಲಿ ವಾಹನಗಳು ಕ್ರಾಸಿಂಗ್‌ ಗೆ ಅಂಡರ್‌ಪಾಸ್‌ ನಿರ್ಮಿಸಿ ಮೇಲಿಂದ ಎಲೆವೇಟೆಡ್‌ ರಸ್ತೆ ನಿರ್ಮಾಣಗೊಂಡಿದೆ. ಇದು ಎರಡು ಕೂಡ ಅಕ್ಕಪಕ್ಕದಲ್ಲೇ ಇದ್ದು, ಸದ್ಯಕ್ಕೆ ಮಧ್ಯದಲ್ಲಿ ರಸ್ತೆಗೆ ಇಳಿಯಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಸರ್ವೀಸ್‌ ರಸ್ತೆಗೆ ಇಳಿಯುವ ಅವಕಾಶ ಹೀಗೆಯೇ ಇರುತ್ತದೆಯೇ ಅಥವಾ ಅದನ್ನು ಮುಚ್ಚುತ್ತಾರೆಯೇ ಎಂಬುದು ಈಗ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಮೆಲ್ಕಾರ್‌ ಹಾಗೂ ಪಾಣೆಮಂಗಳೂರಿನಲ್ಲಿ ಸರ್ವೀಸ್‌ ರಸ್ತೆಯ ಕಾಂಕ್ರೀಟ್‌ ಕಾಮಗಾರಿ ಆಗದೇ ಇದ್ದು, ಪ್ರಸ್ತುತ ಎಲೆವೇಟೆಡ್‌ ರಸ್ತೆ ತೆರೆದುಕೊಂಡಿರುವುದರಿಂದ ಸರ್ವೀಸ್‌ ರಸ್ತೆಯ ಹೊಂಡಕ್ಕೆ ಬಿದ್ದು ಸಾಗಬೇಕಿರುವುದು ತಪ್ಪಲಿದೆ. ಜತೆಗೆ ಮುಂದೆ ಸರ್ವೀಸ್‌ ರಸ್ತೆಯಲ್ಲಿ ವಾಹನಗಳ ಒತ್ತಡ ಕಡಿಮೆಯಾಗುವುದರಿಂದ ಒಂದು ಬದಿಯಲ್ಲಿ ಸರ್ವೀಸ್‌ ರಸ್ತೆಯನ್ನು ಮುಚ್ಚಿ ಕಾಂಕ್ರೀಟ್‌ ಕಾಮಗಾರಿಯನ್ನು ವೇಗವಾಗಿ ಮುಗಿಸಲು ಅನುಕೂಲವಾಗಲಿದೆ.

ಉದಯವಾಣಿ ಸುದಿನ ಚೆಲ್ಲಿದ ಬೆಳಕು
ಬಿ.ಸಿ.ರೋಡು- ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಿಂದ ಜನತೆಗೆ ಆಗಿರುವ ತೊಂದರೆಗಳ ಕುರಿತು ಉದಯವಾಣಿ ಸುದಿನದಲ್ಲಿ ಅ. 19ರಿಂದ 30ರ ವರೆಗೆ ರಾ.ಹೆದ್ದಾರಿ ಕಾಮಗಾರಿ; ಯಾವಾಗ ಮುಗಿಸ್ತೀರಿ ಅಭಿಯಾನವನ್ನು ನಡೆಸಲಾಗಿತ್ತು. ಯಾವ ಭಾಗದಲ್ಲಿ ಏನೇನು ತೊಂದರೆಗಳಾಗಿವೆ ಎಂಬುದನ್ನು ವಿವರವಾಗಿ ತಿಳಿಸಲಾಗಿತ್ತು. ಈ ಅಭಿಯಾನಕ್ಕೆ ಓದುಗರು, ಸಾರ್ವಜನಿಕರ ವಲಯದಿಂದ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ವರದಿಗೆ ಸ್ಪಂದನೆ ನೀಡಿ ದ.ಕ.ಸಂಸದರು, ಬಂಟ್ವಾಳ, ಪುತ್ತೂರು, ಸುಳ್ಯ ಶಾಸಕರು ಹಾಗೂ ಕೆ.ಎನ್‌.ಆರ್‌.ಕನ್‌ಸ್ಟ್ರಕ್ಷನವರು ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಭರವಸೆಯನ್ನು ನೀಡಿದ್ದರು. ಡಿಸೆಂಬರ್‌ ಆರಂಭದಲ್ಲಿ ಮೆಲ್ಕಾರ್‌ ಎಲೆವೇಟೆಡ್‌ ರಸ್ತೆ ಸಂಚಾರಕ್ಕೆ ಮುಕ್ತಗೊಳ್ಳುವ ಕುರಿತು ಗುತ್ತಿಗೆ ಸಂಸ್ಥೆಯವರು ತಿಳಿಸಿದ್ದು, ಅದರಂತೆ ಡಿಸೆಂಬರ್‌ ಮೊದಲ ವಾರದಲ್ಲೇ ಎಲೆವೇಟೆಡ್‌ ರಸ್ತೆಯಲ್ಲಿ ಸಂಚಾರ ಆರಂಭಗೊಂಡಿದೆ.

Advertisement

ಕಾಮಗಾರಿ ವೇಗಕ್ಕೆ ಮತ್ತೆ ಮಳೆ ಅಡ್ಡಿ
ಕಳೆದ ಮಳೆಗಾಲವಿಡೀ ಹೆದ್ದಾರಿಯಲ್ಲಿ ಮಳೆ ನೀರು, ಕೆಸರು ತುಂಬಿ ಜನತೆ ಸಾಕಷ್ಟು ತೊಂದರೆ ಅನುಭವಿಸಿದ್ದು, ಮಳೆಯಿಂದ ಗುತ್ತಿಗೆ ಸಂಸ್ಥೆಗೆ ಕಾಮಗಾರಿ ಮುಂದುವರಿಸುವುದು ಕೂಡ ಸಾಧ್ಯವಾಗಿರಲಿಲ್ಲ. ಆದರೆ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಕಳೆದ ಹತ್ತಿಪ್ಪತ್ತು ದಿನಗಳಿಂದ ಕಾಮಗಾರಿ ವೇಗವನ್ನು ಪಡೆದು ಹಂತ ಹಂತವಾಗಿ ಕಾಮಗಾರಿಯನ್ನು ಮುಗಿಸಿಕೊಂಡು ಬರಲಾಗುತ್ತಿತ್ತು. ಆದರೆ ಕಳೆದೆರಡು ದಿನಗಳಿಂದ ಮತ್ತೆ ವ್ಯಾಪಕ ಮಳೆಯಾಗುತ್ತಿದ್ದು, ಕಾಮಗಾರಿಯ ವೇಗಕ್ಕೆ ಮತ್ತೆ ಅಡ್ಡಿಯಾಗಿದೆ. ಕಲ್ಲಡ್ಕ, ಮೆಲ್ಕಾರು, ಪಾಣೆಮಂಗಳೂರು ಭಾಗದಲ್ಲಿ ಮತ್ತೆ ಕೆಸರಿನ ರಸ್ತೆಯಲ್ಲಿ ಸಾಗುವ ಸ್ಥಿತಿ ಉಂಟಾಗಿದೆ. ಮಳೆ ಬಂದಿರುವುದರಿಂದ ಧೂಳಿನ ಸಮಸ್ಯೆ ದೂರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next