ಧಾರವಾಡ: ಇಂದಿನ ದಿನಮಾನಗಳಲ್ಲಿ ವಾಲ್ಮೀಕಿ ಸಮಾಜದವರು ತಮ್ಮಲ್ಲಿರುವ ಕೀಳರಿಮೆ ತೊಡೆದು ಬೆಳೆಯಬೇಕು ಎಂದು ತುಮಕೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ| ಎಸ್.ನಟರಾಜ ಬೂದಾಳು ಹೇಳಿದರು.
ನಗರದ ಕವಿವಿಯ ಸೆನೆಟ್ ಸಭಾಭವನದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿನ ಎಲ್ಲ ವರ್ಗದ ಜನರಿಗೆ ವಾಲ್ಮೀಕಿ ಸಂದೇಶಗಳು ಮುಟ್ಟಬೇಕು. ಎಲ್ಲರೂ ಅವರ ತತ್ವಾದರ್ಶಗಳನ್ನು ದಿನನಿತ್ಯ ಅನುಸರಿಸಬೇಕು ಎಂದರು.
ವಾಲ್ಮೀಕಿ ರಾಮಾಯಣ ಕಾವ್ಯವನ್ನು ಓದುವ ಮೂಲಕ ಅನುಸಂಧಾನ ಮಾಡಿಕೊಳ್ಳಬೇಕು. ಅದರಲ್ಲಿನ ಎಲ್ಲ ರೀತಿಯ ಸಂಕಷ್ಟಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು. ವಾಲ್ಮೀಕಿ ಸಮಾಜ ಅಕ್ಷರ ಜ್ಞಾನದಿಂದ ಮೇಲೆ ಬರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ| ಪ್ರಮೋದ ಗಾಯಿ ಮಾತನಾಡಿ, ವಾಲ್ಮೀಕಿ ಜಯಂತಿಯಂತಹ ಆಚರಣೆಗಳಿಂದ ವಿದ್ಯಾರ್ಥಿಗಳಲ್ಲಿ ಅವರ ತತ್ವಾದರ್ಶಗಳನ್ನು ಬೆಳೆಸಲು ಸಾಧ್ಯ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಇಂತಹ ಆಚರಣೆಗಳು ಸಹಾಯಕವಾಗಿವೆ ಎಂದರು.
ಡಾ| ಎಸ್.ಎಸ್. ಅಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿವಿಯ ಕುಲಸಚಿವ ಪ್ರೊ| ಮಲ್ಲಿಕಾರ್ಜುನ ಪಾಟೀಲ, ಮೌಲ್ಯಮಾಪನ ಕುಲಸಚಿವ ಪ್ರೊ| ಎನ್.ವೈ. ಮಟ್ಟಿಹಾಳ, ಡಾ| ಆರ್.ಎಲ್. ಹೈದ್ರಾಬಾದ್ ಸೇರಿದಂತೆ ಹಲವರು ಇದ್ದರು. ಡಾ| ಎನ್.ಎಂ. ಸಾಲಿ ನಿರೂಪಿಸಿದರು.