ಹರಿಹರ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ದೊರೆಯುವರೆಗೆ ನಾನು ಪೀಠ ಏರುವುದಿಲ್ಲ, ತುಲಾಭಾರ ಮಾಡಿಸಿ ಕೊಳ್ಳುವುದಿಲ್ಲ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಘೋಷಿಸಿದ ಪ್ರಸಂಗ ರವಿವಾರ ಪೀಠದಲ್ಲಿ ಜರಗಿದ ತಮ್ಮ ಐದನೇ ಪೀಠಾರೋಹಣ ಸಮಾರಂಭದಲ್ಲಿ ನಡೆಯಿತು.
2ಎ ಹಾಗೂ ಒಬಿಸಿ ಮೀಸಲಾತಿ ಯಿಂದ ನಮ್ಮ ಸಮುದಾಯಗಳ ಬಡ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಪಡೆಯಲು ಅನುಕೂಲವಾಗುತ್ತದೆ. ಕೃಷಿಕರೇ ಹೆಚ್ಚು ಸಂಖ್ಯೆಯಲ್ಲಿರುವ ಈ ಸಮುದಾಯದ ಅಭಿವೃದ್ಧಿಗೆ ಸಹಾಯವಾಗುತ್ತದೆ. ಸಮಾಜದ ದಶಕಗಳ ಮೀಸಲಾತಿ ಬೇಡಿಕೆ ಇನ್ನೂ ಈಡೇರದ ಕಾರಣ ಪೀಠಾರೋಹಣಕ್ಕೆ ಮನಸ್ಸು ಒಪ್ಪುತ್ತಿಲ್ಲ ಎಂದು ಶ್ರೀಗಳು ಹೇಳಿದರು.
ನಮ್ಮ ಪೀಠದ ಭಕ್ತರೂ ಆದ ವಾಲ್ಮೀಕಿ ಸಮುದಾಯದ ಕೂಡ್ಲಿಗಿಯ ಬಂಗಾರ ಹನುಮಂತ 18 ಕೆ.ಜಿ. ಬೆಳ್ಳಿಯ ಪೀಠ ತಂದಿದ್ದಾರೆ. ಆದರೆ 2ಎ, ಒಬಿಸಿ ಮೀಸಲಾತಿ ದೊರೆಯುವವರೆಗೆ ಆ ಪೀಠವನ್ನೇರುವುದಿಲ್ಲ ಎಂದು ಘೋಷಿಸಿದ ಶ್ರೀಗಳು, ತುಲಾಭಾರ ಮಾಡಿಸಿಕೊಳ್ಳಲು ನಿರಾಕರಿಸಿದರು.
ಅನಂತರ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ, ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಮಹಾಸಭಾ ಬೆಂಬಲ ನೀಡಿದೆ. ಸರಕಾರ ಈ ವಿಷಯದಲ್ಲಿ ಸುಮ್ಮನೆ ಕುಳಿತಿಲ್ಲ, ಸೂಕ್ತ ನಿರ್ಣಯ ಕೈಗೊಳ್ಳುತ್ತದೆ, ಅಲ್ಲಿಯವರೆಗೆ ಯಾರೂ ಸಂಯಮ ಕಳೆದುಕೊಳ್ಳಬಾರದೆಂದು ಮನವಿ ಮಾಡಿದರು.
ಜಾತಿಗೊಂದು ಮಠ, ಮಠಾಧೀಶರು ಆಗಿದ್ದರಿಂದ ವಾತಾವರಣ ಗೊಂದಲಮಯವಾಗಿದೆ. ಯತ್ನಾಳ್ ಒಂದು ಮಾತನಾಡಿದರೆ, ಇನ್ನೊಬ್ಬರು ಇನ್ನೊಂದು ಮಾತನಾಡುತ್ತಾರೆ. ಇಂತಹ ಗೊಂದಲಗಳಿಂದ ಯಾವ ಉಪಯೋಗವೂ ಇಲ್ಲ. ಬಸವಣ್ಣನವರ ತತ್ವ ಆಧರಿಸಿ ಎಲ್ಲರೂ ಒಂದಾಗಬೇಕು. ಪೀಠಾರೋಹಣ ಮಾಡದಿದ್ದರೆ ಭಕ್ತರಿಗೆ ನೋವಾಗುತ್ತದೆ, ಬೇಡಿಕೆಗಳು ಈಡೇರುತ್ತವೆ. ತಾವು ಪೀಠಾರೋಹಣ ಮಾಡಿರಿ ಎಂದು ಶ್ರೀಗಳಿಗೆ ವಿನಂತಿಸಿದ ಬಳಿಕ ವಚನಾನಂದ ಶ್ರೀಗಳ ಪೀಠಾರೋಹಣ, ತುಲಾಭಾರ ನೆರವೇರಿದವು.