Advertisement

ವಚನ ಹೃದಯ-ಜಾನಪದ ಗ್ರಾಮೀಣ ಬದುಕಿನ ಸಾಹಿತ್ಯ

05:08 PM Apr 14, 2018 | |

ಆಳಂದ: ಬಸವಾದಿ ಶರಣರು ಬರೆದ ವಚನ ಸಾಹಿತ್ಯ ಹೃದಯದಿಂದ ಹೊರಬಂದರೆ, ಜಾನಪದ ಸಾಹಿತ್ಯ ನಿಸರ್ಗವನ್ನೇ ನಂಬಿ ಬಂದ ಹಳ್ಳಿಯ ಜನರ ಬದುಕಿನ ಕುರಿತು ಬಿಂಬಿಸುವ ಸಾಹಿತ್ಯವಾಗಿದೆ. ಈ ಎರಡು ಸಾಹಿತ್ಯ ನಮ್ಮ ಸಂಸ್ಕೃತಿ ಪರಂಪರೆ ಬದುಕಿನ ಮೇಲೆ ಬೆಳಕು ಚೆಲ್ಲಲಿದ್ದು, ಇಂಥ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ಬೆಂಗಳೂರಿನ ಜಾನಪದ ತಜ್ಞ, ಶರಣ ಸಾಹಿತಿ ಡಾ| ಗೋ.ರು. ಚನ್ನಬಸಪ್ಪ ಹೇಳಿದರು.

Advertisement

ತಾಲೂಕಿನ ಖಜೂರಿ ಕೋರಣೇಶ್ವರ ಮಠದ ಆವರಣದಲ್ಲಿ ಶುಕ್ರವಾರ ವಚನ ಸಾಹಿತ್ಯ ಪರಿಷತ್‌, ಕನ್ನಡ ಜಾನಪದ ಪರಿಷತ್‌ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಚನ ಸಾಹಿತ್ಯ ಮತ್ತು ಕನ್ನಡ ಜಾನಪದ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ವಚನ ಸಾಹಿತ್ಯ ಹಾಲು ಕಡಿದ ನವನೀತದಂತಾದರೆ, ಜನಪದ ಸಾಹಿತ್ಯ ಓದು ಬರಹ ಬಾರದ ಹಳ್ಳಿಯ ಜನರ ಜೀವನ ಪದ್ಧತಿಯಾಗಿದೆ. ಅವರು ಶಾಲೆ, ಕಾಲೇಜಿಗೆ ಹೋದವರಲ್ಲ. ನಿಸರ್ಗ ನಂಬಿ ನಡೆದವರು. ಇಂತಹ ಆದರ್ಶ ನಡೆ, ನುಡಿಯನ್ನು ಜಗತ್ತಿಗೆ ತೋರಿಸಬೇಕಾಗಿದೆ ಎಂದರು. ವಚನ ಸಾಹಿತ್ಯ ಸಮ್ಮೇಳನಾಧ್ಯಕ್ಷ ಶಿವಶಾಂತ ರೆಡ್ಡಿ ಮುನ್ನೋಳಿ ಮಾತನಾಡಿ, ಶರಣರ ವಚನಗಳ ಅನುಭಾವ ನಡೆ, ನುಡಿ ಬದುಕಿಗೆ ಆದರ್ಶ ಪ್ರಾಯವಾಗಿದೆ. ಪ್ರತಿಯೊಬ್ಬರು ವಚನಗಳನ್ನು ಅರ್ಥೈಯಿಸಿಕೊಳ್ಳಬೇಕು ಎಂದರು. ಜಾನಪದ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಂಜೀವನ ದೇಶಮುಖ ಅವರ ವಚನಗಾಯನದ ಗಮನ ಸೆಳೆಯಿತು. ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಪೀಠಾಧಿ ಕಾರಿ ಶ್ರೀ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಕಲೆ, ಸಾಹಿತ್ಯ ಕಾರ್ಯಕ್ಕೆ ಶ್ರೀಮಠವು ಸದಾ ಸಿದ್ದವಾಗಿದೆ ಎಂದರು. ಡಾ| ಹಣಮಂತರಾವ್‌ ದೊಡ್ಡಮನಿ ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳ ಕುರಿತು ಉಪನ್ಯಾಸ ನೀಡಿದರು.

ಗುರುಮಠಕಲ್‌ ಮಠದ ಶ್ರೀ ಶಾಂತವೀರ ಸ್ವಾಮೀಜಿ, ಕೇಸರ ಜವಳಗಾ ವೀರಂತೇಶ್ವರ ಸ್ವಾಮೀಜಿ, ಮಾದನಹಿಪ್ಪರಗಾ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ಬೇಲೂರ ಶ್ರೀ, ಸಂಗನಬಸವ ಶ್ರೀ, ಸಾಹಿತಿ ಎ.ಕೆ. ರಾಮೇಶ್ವರ, ಎನ್‌ವಿ ನಿವೃತ್ತ ಪ್ರಾಚಾರ್ಯ ಸ್ವಾಮಿರಾವ್‌ ಕುಲಕರ್ಣಿ, ವಚನ ಸಾಹಿತ್ಯ ಪರಿಷತ್‌ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ಹಾಜರಿದ್ದರು.ಸಂಜಯ ಪಾಟೀಲ, ಗಂಗಾಧರ ಕುಂಬಾರ, ಕುಮಾರ ಬಂಡೆ ನಿರೂಪಿಸಿದರು. ಎಂ.ಬಿ. ನಿಂಗಪ್ಪ ಸ್ವಾಗತಿಸಿದರು. ಅಪ್ಪಸಾಹೇಬ ತೀರ್ಥೇ ವಂದಿಸಿದರು. ನಂತರ ಕಲಾ ತಂಡಗಳಿಂದ ಕೋಲಾಟ, ಗೀ ಗೀ ಪದಗಳು ಜನಪದ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಒಂದು ಜೋಡಿ ವಿವಾಹ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next