Advertisement

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

01:12 AM Nov 05, 2024 | Team Udayavani |

ಮಂಗಳೂರು/ಉಡುಪಿ/ ಪುತ್ತೂರು: ಕರ್ನಾಟಕ ಜಾನಪದ ಅಕಾಡೆಮಿಯ 2023ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿಯನ್ನು ಪ್ರಕಟಿಸಿದೆ.

Advertisement

ಉಡುಜಿ ಜಿಲ್ಲೆಯ ಅಪ್ಪಿ ಪಾಣಾರ, ದಕ್ಷಿಣ ಕನ್ನಡ ಜಿಲ್ಲೆಯ ನಾಟಿವೈದ್ಯೆ ಲೀಲಾವತಿ ಅವರು ಗೌರವ ಪ್ರಶಸ್ತಿ ಘೋಷಿಸಲಾಗಿದೆ. 2023ನೇ ಸಾಲಿನ ತಜ್ಞ ಪ್ರಶಸ್ತಿಯನ್ನು ಡಾ| ಕೆ. ಚಿನ್ನಪ್ಪ ಗೌಡ ಅವರಿಗೆ ಘೋಷಿಸಲಾಗಿದೆ.

ಡಾ| ಚಿನ್ನಪ್ಪ ಗೌಡರಿಗೆ ಡಾ| ಜಿ.ಶಂ.ಪ ತಜ್ಞ ಪ್ರಶಸ್ತಿ
ಜನಪದ ಆರಾಧನೆಯ “ಮಧ್ಯಂತರ ಜಗತ್ತು’ ಮತ್ತು ಅದರ “ಸಂಕೀರ್ಣ ಪಠ್ಯ’, ಜಾನಪದದ ಅರ್ಥ ಮತ್ತು ಕಾರ್ಯಗಳ ವಿವೇಚನೆ, ಜಾನಪದ ಪ್ರಕಾರವೊಂದರ ಪ್ರದರ್ಶನ ಸಂದರ್ಭದ ಆಚೆಗಿರುವ ವಿವರಗಳ ಪರಿಕಲ್ಪನೆಗಳನ್ನು ವಿವರಿಸಿ ಜಾನಪದ ಅಧ್ಯಯನದಲ್ಲಿ ವಿಶೇಷವಾಗಿ ತೊಡಗಿಸಿಕೊಂಡವರು ಡಾ| ಕೆ.ಚಿನ್ನಪ್ಪ ಗೌಡ.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಚಿನ್ನಪ್ಪ ಗೌಡ ಅವರು ಭೂತಾರಾಧನೆಯ ಅತ್ಯಂತ ಪ್ರಾಚೀನವೂ ವಿಶಿಷ್ಟವೂ ಆದ “ಜಾಲಾಟ’ದ ವೈಶಿಷ್ಟéಗಳನ್ನು ಮೊದಲು ವಿವರಿಸಿದವರು. ಸಿರಿ ಮಹಾಕಾವ್ಯದ ನಿರ್ಮಾಣ ಮತ್ತು ಮರುಕಟ್ಟುವಿಕೆ, ಕಲಿಕೆ ಮತ್ತು ಪ್ರಸಾರದ ವಿವಿಧ ನೆಲೆಗಳ ಬಗ್ಗೆ ತೌಲನಿಕ ಅಧ್ಯಯನವನ್ನು ನಡೆಸಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ 17 ಪುಸ್ತಕಗಳು ಮತ್ತು 75ಕ್ಕಿಂತ ಹೆಚ್ಚು ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾರೆ. ಕನ್ನಡ, ತುಳು ಸಾಹಿತ್ಯ, ಸಂಶೋಧನೆ, ಯಕ್ಷಗಾನ ಸೇರಿದಂತೆ 75 ಕೃತಿಗಳನ್ನು ಸಂಪಾದಿಸಿದ್ದಾರೆ.

ತುಳು ಭಾಷೆಯಲ್ಲಿರುವ ಅರುವತ್ತು ಜನಪದ ಕತೆಗಳನ್ನು ಮತ್ತು ಕೆಲಸದ ಹಾಗೂ ಕುಣಿತದ ಐವತ್ತು ಹಾಡುಗಳನ್ನು ಇಂಗ್ಲೀಷ್‌ಗೆ ಅನುವಾದಿಸಿ ಕೊಡುವುದರ ಮೂಲಕ ಜಾಗತಿಕ ಜಾನಪದ ಅಧ್ಯಯನಕಾರರಿಗೆ ತುಳುವಿನ ಎರಡು ಮಹತ್ವದ ಜನಪದ ಪ್ರಕಾರಗಳನ್ನು ಪರಿಚಯಿಸಿದ್ದಾರೆ. “ಕರಾವಳಿ ಕಥನಗಳು’ ಸಂಶೋಧನ ಲೇಖನಗಳ ಸಂಪುಟವಾಗಿದೆ. ಇದರಲ್ಲಿ ತುಳು ಜಾನಪದ, ತುಳು ಸಾಹಿತ್ಯ, ಯಕ್ಷಗಾನ, ಅನುವಾದ ಈ ವಿಷಯಗಳಿಗೆ ಸಂಬಂಧಿಸಿದ ಎಂಟು ಸವಿಸ್ತಾರವಾದ ಲೇಖನಗಳಿವೆ. ಸಾಂಸ್ಕೃತಿಕ ಅಧ್ಯಯನದ ಇತ್ತೀಚಿನ ಪ್ರವೃತ್ತಿಗಳನ್ನು ಅಳವಡಿಸಿಕೊಂಡು ಇವರು ತುಳು ಜಾನಪದ ಅಧ್ಯಯನವನ್ನು ನಡೆಸಿದ್ದಾರೆ.

Advertisement

ಅಪ್ಪಿ ಪಾಣಾರ
ದೈವಾರಾಧನೆ/ಭೂತಾರಾಧನೆಯ ಅನೇಕ ಪಾಡªನ ಕಾವ್ಯಗಳನ್ನು ನಿರರ್ಗಳವಾಗಿ ಹಾಡುವ ಮೌಖಿಕ ಸಂಪತ್ತು ಹೊಂದಿರುವ ಹಿರಿಯ ಜನಪದ ಕಲಾವಿದೆ ಅಪ್ಪಿ ಮೂಡುಬೆಳ್ಳೆ (ಅಪ್ಪಿ ಪಾಣಾರ). ವಾಂಶಿಕವಾಗಿ ಬಂದ ಕುಲಕಸುಬು-ಭೂತಾರಾಧನೆ. ತನ್ನ 8ನೇ ವಯಸ್ಸಿನಲ್ಲಿ ಮಾದಿರ ಕುಣಿತದ ಮೂಲಕ ಹಾಗೂ ಪಾಡªನಗಳನ್ನು ಗ್ರಹಿಸಿ ಹಾಡುವ ಕಲಾಕಾರ್ತಿಯಾಗಿ ಗಂಡನ ಜತೆಯಲ್ಲಿ ತೆಂಬರೆ (ಚರ್ಮವಾದ್ಯ) ಹಿಡಿದು ನಿರರ್ಗಳವಾಗಿ ಪಾಡªನಗಳನ್ನು ಹಾಡಿದ ಇವರು ಪ್ರಸ್ತುತ ಕುಟುಂಬದ ಹಿರಿಯರ ಜತೆಯಲ್ಲಿ ದೈವಾರಾಧನೆಯ ಕೈಂಕರ್ಯ ನಡೆಸುತ್ತಿದ್ದಾರೆ. ಪಂಜುರ್ಲಿ ಸಂಧಿಯನ್ನು ಇಡೀ ರಾತ್ರಿ ಹಾಡಬಲ್ಲರು. ಕುಬೆಕೋಟಿ ಪಾಡªನ, ಮೈಸಂದಾಯ, ಸಿರಿ ಕಾವ್ಯದ ಅಬ್ಬಗ-ದಾರಗ ಅವಳಿ ಸಹೋದರಿಯರ ಪಾಡªನ, ಗಿಡಿರಾವುತ ದೈವದ ಸಂಧಿ, ಜುಮಾದಿ ಪಾಡªನ ಸಹಿತ ಅನೇಕ ಪಾಡªನಗಳನ್ನು ಇಡೀ ರಾತ್ರಿ ಹಾಡಬಲ್ಲರು. ಒಟ್ಟಾರೆಯಾಗಿ ಜನಪದ ಕಲೆಯ ನಿಧಿ ಇವರು.

ಲೀಲಾವತಿ ಬೈದ್ಯೆತಿ
ಕೋಟಿ-ಚೆನ್ನಯ, ದೇಯಿಬೈದೇತಿ ಮೂಲಸ್ಥಾನ ಗೆಜ್ಜೆಗಿರಿ ನಂದನಬಿತ್ತಿಲು ನಿವಾಸಿಯಾಗಿರುವ ನಾಟಿವೈದ್ಯೆ ಲೀಲಾವತಿ ಬೈದೇತಿ (77) ಅವರು ಸಾವಿರಾರು ಮಂದಿಯ ಬದುಕಿನಲ್ಲಿ ಅಶಾ ಕಿರಣ ಮೂಡಿಸಿದವರು. ಮುಖ್ಯವಾಗಿ ಸರ್ಪಸುತ್ತು, ಕೆಂಪು, ದೃಷ್ಟಿ, ಬೆಸುರುಪು, ಸೊರಿಯಾಸಿಸ್‌-ಚರ್ಮ ರೋಗಗಳಿಗೆ ಚಿಕಿತ್ಸೆ ನೀಡುವಲ್ಲಿ ನಿಷ್ಠಾತರು. ಮಕ್ಕಳ ಚಿಕಿತ್ಸೆ, ಸಂಧಿವಾತ, ನೋವಿನ ತೈಲ ಅಲ್ಲದೆ ಇವರು ತಯಾರಿಸಿ ಕೊಡುವ ದೇಸೀ ಔಷಧಗಳಿಗೆ ಮತ್ತು ಕೇಶಕಾಂತಿ ತೈಲ, ದೇಯಿ-ಬೈದ್ಯೆತಿ ತೈಲಕ್ಕೆ ಹಲವಾರು ರಾಜ್ಯದಿಂದ ಬೇಡಿಕೆಗಳಿವೆ. ದೇಯಿಬೈದ್ಯೆದಿ ಬಳಸುತ್ತಿದ್ದ ಮದ್ದಿನಗಿಂಡಿಯಲ್ಲಿ ಔಷಧ ನೀಡುವ ಇವರು ಇಂದಿಗೂ ಸರ್ಪರೋಗಗಳಿಗೆ ಮದ್ದನ್ನು ಮಾಡುವ ಇವರ ಕೈಗುಣದ ಬಗ್ಗೆ ಜನರಿಗೆ ಅಪಾರ ಭಕ್ತಿ, ಶ್ರದ್ಧೆ ಮತ್ತು ವಿಶ್ವಾಸ.

Advertisement

Udayavani is now on Telegram. Click here to join our channel and stay updated with the latest news.

Next