Advertisement

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!

11:50 PM Nov 08, 2024 | Team Udayavani |

ಮಂಗಳೂರು: ತುಳು ನಾಡಿನ ಜಾನಪದ ಕ್ರೀಡೆ ಕಂಬಳದ ಅಭಿಮಾನ ಕರಾವಳಿಯಲ್ಲಿ ಇತ್ತೀಚಿನ ಕಾಲಘಟ್ಟದಲ್ಲಿ ಮತ್ತೆ ಹೆಚ್ಚಾಗುತ್ತಿದೆ. ಪುಟಾಣಿಗಳಿಂದ ತೊಡಗಿ ಹಿರಿಯರ ವರೆಗೆ ಎಲ್ಲರಲ್ಲೂ ಕಂಬಳದ ಆಸಕ್ತಿ ಕಾಣಿಸುತ್ತಿದೆ; ಇದಕ್ಕೆ ಬಲ ನೀಡುವಂತೆ ಇತ್ತೀಚಿನ ದಿನಗಳಲ್ಲಿ ಕಂಬಲದ ಕೋಣಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆ ಕಂಡಿದೆ!

Advertisement

ಅದರಲ್ಲಿಯೂ ಸೀನಿಯರ್‌ (6 ವರ್ಷ ಮೀರಿದ) ಹಾಗೂ ಜೂನಿಯರ್‌(ಮೂರರಿಂದ 6 ವರ್ಷ) ಹೊರತುಪಡಿಸಿ ಸಬ್‌ ಜೂನಿಯರ್‌ (3 ವರ್ಷದ ಒಳಗಿನ) ಸಣ್ಣ ಕೋಣಗಳನ್ನು ಸಾಕುವವರ ಸಂಖ್ಯೆ ಇತ್ತೀಚೆಗೆ ಏರಿಕೆ ಕಂಡಿದೆ ಎಂಬುದು ಗಮನೀಯ ಅಂಶ.

ಸಣ್ಣ ಪ್ರಾಯದ ಕೋಣಗಳಿಗೆ ಕಂಬಳ ಕರೆಯ ಓಟ ಸರಿಯಾ? ತಪ್ಪಾ? ಎಂಬ ವಿಮರ್ಶೆ ಚಾಲ್ತಿಯಲ್ಲಿದ್ದರೂ ಕೋಣಗಳ ಬಗೆಗೆನ ಅಪ್ಯಾಯಮಾನವಾದ ಪ್ರೀತಿಹಾಗೂ ಕಂಬಳದ ಕುರಿತ ಆಸಕ್ತಿ ತುಳುನಾಡಿನ ಬಹುತೇಕ ಮನೆಯಲ್ಲಿ ಜಾಗೃತವಾ ಗುತ್ತಿರುವ ಕಾರಣದಿಂದ ಕೋಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುವಂತಾಗಿದೆ.

40 ವರ್ಷಗಳ ಹಿಂದೆಯೂ ಕೋಣಗಳ ಸಂಖ್ಯೆ ಅಧಿಕವಿತ್ತು. ಒಂದು ಊರಿನಲ್ಲೇ 50 ಜತೆ ಕೋಣಗಳು ಇದ್ದವು. ಅಂದರೆ 2 ಜಿಲ್ಲೆಯಲ್ಲಿ ಸಾವಿರಾರು ಕೋಣಗಳಿದ್ದವು. ಆದರೆ ಗದ್ದೆ ಉಳುಮೆಗೆ ಯಂತ್ರದ ಆಗಮನ ಆಗುತ್ತಿದ್ದಂತೆ ಕೋಣಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಯಿತು. ಈಗ ಮತ್ತೆ ಕಂಬಳ ಅಭಿಮಾನ ಇಮ್ಮಡಿಯಾದ ಕಾರಣ ಕೋಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಾಣಲಾಗುತ್ತಿದೆ. ಸಾವಿರಾರು ಕಂಬಳ ಕೋಣಗಳು ಈಗ ಕರೆಗೆ ಇಳಿಯಲು ಪರಿಪಕ್ವವಾಗಿವೆ. ಇತ್ತೀಚೆಗಿನ ಸಬ್‌ಜೂನಿಯರ್‌ ವಿಭಾಗದ ಕಂಬಳದಲ್ಲಿ 278 ಜತೆ ಕೋಣ ಭಾಗವಹಿಸಿದ್ದು ವಿಶೇಷ.

ಕಂಬಳದ ತಜ್ಞ ವಿಜಯ್‌ ಕುಮಾರ್‌ ಕಂಗಿನಮನೆ ಹೇಳುವ ಪ್ರಕಾರ “ಪರು’ (ಹಲ್ಲು) ಹೋಗದ 3 ವರ್ಷದ ಒಳಗಿನ ಕೋಣಗಳನ್ನು ಕಂಬಳ ಕರೆಗೆ ಆರಂಭದಲ್ಲಿ ಸಿದ್ದಪಡಿಸುವ ಕ್ರಮಕ್ಕೆ ಸಬ್‌ ಜೂನಿಯರ್‌ ವಿಭಾಗದ ಸ್ಪರ್ಧೆ ಆರಂಭವಾಯಿತು. ಸಬ್‌ ಜೂನಿಯರ್‌ ಪರಿಣತಿ ಆದ ಬಳಿಕ ಜೂನಿಯರ್‌ ಸ್ಪರ್ಧೆಗೆ ಆ ಕೋಣಗಳು ಸುಲಭವಾಗಿ ಸಿದ್ದಗೊಳ್ಳುತ್ತವೆ. ಕೋಣಗಳಿಗೆ 3 ವರ್ಷ ಪ್ರಾಯಕ್ಕೆ ಎದುರಿನ ಹಲ್ಲು ಹೋಗಿ ಬೇರೆ ಹಲ್ಲು ಬರುತ್ತದೆ. ಒಂದೂ ಹಲ್ಲು ಹೋಗದೆ ಇರುವ ಕೋಣಗಳು ಸಬ್‌ ಜೂನಿಯರ್‌ ವಿಭಾಗಕ್ಕೆ ಸೇರಿರುತ್ತವೆ. ಬಳಿಕ 6 ವರ್ಷದವರೆಗೆ ಜೂನಿಯರ್‌ ಹಾಗೂ ಆ ಬಳಿಕದ್ದು ಸೀನಿಯರ್‌ ವಿಭಾಗಕ್ಕೆ ಅರ್ಹತೆ ಪಡೆಯುತ್ತದೆ. ಬಳಿಕ 10-12 ವರ್ಷ ಆ ಕೋಣಗಳು ಕಂಬಳದಲ್ಲಿ ಓಡುತ್ತವೆ. ಸಾಮಾನ್ಯವಾಗಿ 32-34 ವರ್ಷದವರೆಗೆ ಆಯಸ್ಸು ಇರುತ್ತದೆ ಎನ್ನುತ್ತಾರೆ.

Advertisement

ಸಣ್ಣ ಕುಟುಂಬಗಳಲ್ಲೂ ಕೋಣಗಳ ಪ್ರೀತಿ ಜಾಸ್ತಿ!
ಕಂಬಳದ ಅಭಿಮಾನ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಯುವಕರಿಗಂತೂ ಇದು ಸಂಭ್ರಮ ಹಾಗೂ ಮನೆಮಂದಿಗೆ ಅತ್ಯಂತ ಪ್ರತಿಷ್ಠಿತ ಕೂಟ. ಕೋಣಗಳ ಪ್ರೀತಿ ಒಂದೆಡೆಯಾದರೆ ಮನೆತನ-ಪ್ರತಿಷ್ಠೆಯ ಲೆಕ್ಕಾಚಾರ ಮತ್ತೂಂದೆಡೆ. ಹೀಗಾಗಿಯೇ ಕೋಣ ಸಾಕುವವರ ಸಂಖ್ಯೆಯೂ ಹೆಚ್ಚಾಗಿದೆ. ಹಿಂದಿನಿಂದಲೂ ಕೋಣ ಸಾಕುವವರು ಒಂದೆಡೆಯಾದರೆ, ಪ್ರಸಕ್ತ ನಾಲ್ಕೈದು ಮಂದಿ ಗೆಳೆಯರು ಸೇರಿ ಕೋಣ ಸಾಕುವವರೂ ಇದ್ದಾರೆ. ಸಣ್ಣ ಕುಟುಂಬವಿದ್ದವರೂ ಹಣಬಲವಿಲ್ಲದಿದ್ದರೂ ಪ್ರೀತಿಯಿಂದ ಕೋಣ ಸಾಕುವ ಹಲವು ಕುಟುಂಬಗಳಿವೆ.

ಕೋಣ ಪಳಗಿಸಲು ಸಬ್‌ ಜೂನಿಯರ್‌ ಸ್ಪರ್ಧೆ
ಪ್ರಸಕ್ತ ಹಲವು ಕುಟುಂಬದವರು ಕಂಬಳದ ಅಭಿಮಾನದಿಂದ ಸಣ್ಣ ಕೋಣಗಳನ್ನು ಸಾಕುತ್ತಿದ್ದಾರೆ. ಆದರೆ ಎಲ್ಲರಿಗೂ ಎಲ್ಲ ಕಂಬಳದಲ್ಲಿ ಭಾಗವಹಿಸುವ ಅವಕಾಶ-ಸಾಧ್ಯತೆ ಇರುವುದಿಲ್ಲ. ಹೀಗಾಗಿ ಅಂಥವರು ಸಬ್‌ ಜೂನಿಯರ್‌ ವಿಭಾಗದಲ್ಲಿ ಭಾಗವಹಿಸುವ ಆಸಕ್ತಿ ವಹಿಸುತ್ತಾರೆ. ಕೃಷಿ ಚಟುವಟಿಕೆ ಈಗಷ್ಟೇ ಮುಗಿಸಿ ಈ ಸೀಸನ್‌ನಲ್ಲೇ 3-4 ತಿಂಗಳ ಒಳಗೆ ಸಬ್‌ ಜೂನಿಯರ್‌ ಸ್ಪರ್ಧೆಯಲ್ಲಿ ಭಾಗವಹಿಸುವ ಸಾಮರ್ಥ್ಯವನ್ನು ಅವು ಹೊಂದಿರುತ್ತವೆ.

ಸಬ್‌ ಜೂನಿಯರ್‌ ವಿಭಾಗದಲ್ಲಿ ಕಂಬಳ ಈ ಹಿಂದೆಯೂ ನಡೆದಿತ್ತು. ಆದರೆ ಈ ವರ್ಷ ಅದರ ಸಂಖ್ಯೆ ಏರಿಕೆ ಆಗಿದೆ. ಸಬ್‌ ಜೂನಿಯರ್‌ ಮೂಲಕ ಹೊಸ ಓಟಗಾರರ ಪ್ರೌಢಿಮೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶವೂ ಹೌದು ಎಂಬ ಮಾತಿದೆ.

ಸಬ್‌ ಜೂನಿಯರ್‌ಗೆ ಪ್ರತ್ಯೇಕ ಕಂಬಳ
ಕರಾವಳಿಯಲ್ಲಿ ಕೋಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಸೀನಿಯರ್‌ ಕಂಬಳ ದಲ್ಲಿ ಸಣ್ಣ ಪ್ರಾಯದ ಕೋಣಗಳ ಓಟಕ್ಕೆ
ಅವಕಾಶ ನೀಡಲು ಸಮಯ ಸಾಕಾಗು ವುದಿಲ್ಲ. ಕೋಣಗಳ ಮಾಲಕರ ಒತ್ತಾಸೆಯ ಮೇರೆಗೆ ಇತ್ತೀಚಿನ ದಿನದಲ್ಲಿ ಸಣ್ಣ ಪ್ರಾಯದ ಕೋಣಗಳಿಗಾಗಿ ಸಬ್‌ ಜೂನಿಯರ್‌ ವಿಭಾಗದ ಸ್ಪರ್ಧೆ ವಿವಿಧ ಕಡೆಗಳಲ್ಲಿ ನಡೆದಿದೆ. ಈ ಬಾರಿಯ ಕಂಬಳ ಸೀಸನ್‌ನ ಕೊನೆಯಲ್ಲಿ ಕಂಬಳ ಸಮಿತಿ ವತಿಯಿಂದ ಸಬ್‌ ಜೂನಿಯರ್‌ ವಿಭಾಗಕ್ಕೆ ಪ್ರತ್ಯೇಕ ಕಂಬಳ ಆಯೋಜಿ ಸಲು ಚಿಂತನೆ ನಡೆಸಲಾಗಿದೆ.
-ಐಕಳಬಾವ ದೇವೀಪ್ರಸಾದ್‌ ಶೆಟ್ಟಿ,
ಅಧ್ಯಕ್ಷರು, ಜಿಲ್ಲಾ ಕಂಬಳ ಸಮಿತಿ

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next