Advertisement

ಹಳ್ಳಿಗರಿಗೂ ಲಸಿಕೆ ಕೊಡಿ : ದಾಸ್ತಾನು ಕೊರತೆಯಿಂದ ಶೇ. 50ರಷ್ಟು ಲಸಿಕೆ ಕೇಂದ್ರ ಸ್ಥಗಿತ

03:36 AM Jul 13, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿ ದಾಸ್ತಾನು ಕೊರತೆಯಿಂದ ಶೇ. 50ರಷ್ಟು ಕೊರೊನಾ ಲಸಿಕೆ ಕೇಂದ್ರಗಳು ಸ್ಥಗಿತ ಗೊಂಡಿವೆ. ಬೇಡಿಕೆಯ ಶೇ. 20ರಷ್ಟು ಲಸಿಕೆಯೂ ಪೂರೈಕೆಯಾಗುತ್ತಿಲ್ಲ. ಲಸಿಕೆ ಬೇಕೆಂದರೆ ಆಸ್ಪತ್ರೆಗಳ ಮುಂದೆ ನಗರದ ಜನತೆ ಬೆಳಗ್ಗೆ 4ಕ್ಕೇ ಸರತಿಯಲ್ಲಿ ನಿಲ್ಲಬೇಕು. ಹಳ್ಳಿಯವರು ವಾರಗಟ್ಟಲೆ ಕಾಯಬೇಕು!

Advertisement

ರಾಜ್ಯದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಸರಕಾರಿ ವಲಯದಲ್ಲಿ 8,500 ಸಾವಿರ ಲಸಿಕೆ ಕೇಂದ್ರಗಳನ್ನು ಗುರುತಿಸಲಾಗಿದೆ. ಜೂ. 21ರಂದು ನಡೆದ ಲಸಿಕೆ ಮೇಳದಂದು 7,958 ಕೇಂದ್ರಗಳಲ್ಲಿ 24 ತಾಸುಗಳಲ್ಲಿ 11.6 ಲಕ್ಷ ಮಂದಿಗೆ ಲಸಿಕೆ ನೀಡಲಾಗಿತ್ತು. ಸದ್ಯ ಲಸಿಕೆ ಕೊರತೆಯಿಂದಾಗಿ ಒಂದು ವಾರದಿಂದ ಸರಾಸರಿ 4 ಸಾವಿರ ಕೇಂದ್ರಗಳು ಮಾತ್ರ ನಿತ್ಯ ಕಾರ್ಯ ನಿರ್ವಹಿಸುತ್ತಿವೆ. ಶೇ. 50ಕ್ಕಿಂತಲೂ ಅಧಿಕ ಕೇಂದ್ರಗಳು ಸ್ಥಗಿತಗೊಂಡಿವೆ. ಸ್ಥಗಿತಗೊಂಡಿರುವ ಕೇಂದ್ರಗಳ ಪೈಕಿ ಬಹುಪಾಲು ಗ್ರಾಮೀಣ ಭಾಗದವು.
ಲಸಿಕೆ ಕೇಂದ್ರಗಳಲ್ಲಿ ಬೇಡಿಕೆಯ ಶೇ. 20ರಷ್ಟು ಡೋಸ್‌ ಮಾತ್ರ ಪೂರೈಸಲಾಗುತ್ತಿದೆ. ಇದರಿಂದ ನಗರದ ಆಯ್ದ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಮಿತ ಪ್ರಮಾಣದಲ್ಲಿ ಲಸಿಕೆ ನೀಡಲಾಗುತ್ತಿದೆ.

ಬೇಡಿಕೆ ಹೆಚ್ಚು; ವಿತರಣೆ ಕುಸಿತ
ಸದ್ಯ ರಾಜ್ಯದಲ್ಲಿ 4.97 ಕೋಟಿ ಮಂದಿಗೆ ಲಸಿಕೆ ನೀಡಬೇಕಿದ್ದು, ಈ ಪೈಕಿ 2.1 ಕೋಟಿ ಮಂದಿ ಮಾತ್ರ ಲಸಿಕೆಯ ಮೊದಲ ಡೋಸ್‌ ಪಡೆದಿದ್ದಾರೆ. 2.8 ಕೋಟಿ ಜನ ಲಸಿಕೆಗಾಗಿ ಎದುರು ನೋಡುತ್ತಿದ್ದಾರೆ. ಮೊದಲ ಡೋಸ್‌ ಪಡೆದವರ ಪೈಕಿ 48 ಲಕ್ಷ ಮಂದಿಗೆ ಮಾತ್ರ 2ನೇ ಡೋಸ್‌ ಪೂರ್ಣಗೊಂಡಿದ್ದು, ಈ ತಿಂಗಳಲ್ಲಿ 1 ಕೋಟಿಗೂ ಅಧಿಕ ಮಂದಿ 2ನೇ ಡೋಸ್‌ ಪಡೆಯಬೇಕಿದೆ. ಆದರೆ ಲಸಿಕೆ ವಿತರಣೆ ಪ್ರಮಾಣ ಜೂನ್‌ ಕೊನೆಯ 10 ದಿನಗಳಿಗೆ ಹೋಲಿಸಿದರೆ ಜುಲೈ ಮೊದಲ 10 ದಿನಗಳಲ್ಲಿ ಶೇ. 30ರಷ್ಟು ಕುಸಿದಿದೆ.

ರಾಜಧಾನಿಗೆ ಆದ್ಯತೆ
ಬೆಂಗಳೂರಿನಲ್ಲಿ ಶೇ. 75ರಷ್ಟು ಜನರಿಗೆ ಮೊದಲ ಡೋಸ್‌ ನೀಡಲಾಗಿದೆ. ಬೆಳಗಾವಿ, ದಾವಣಗೆರೆ, ಹಾವೇರಿ, ಕಲ ಬುರಗಿ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಶೇ. 30ಕ್ಕಿಂತ ಕಡಿಮೆ ಮಂದಿಗೆ ಲಸಿಕೆ ನೀಡಲಾಗಿದೆ. ಉಡುಪಿ ಶೇ. 53 ಬಿಟ್ಟರೆ ಬಾಕಿ 11 ಜಿಲ್ಲೆಗಳಲ್ಲಿ ಶೇ. 40ಕ್ಕಿಂತ, 10 ಜಿಲ್ಲೆಗಳಲ್ಲಿ ಶೇ. 50ಕ್ಕಿಂತ ಕಡಿಮೆ ಇದೆ. ಆದರೂ ನಿತ್ಯ ಶೇ. 35ರಷ್ಟು ಲಸಿಕೆಯನ್ನು ರಾಜಧಾನಿಗೆ ಮೀಸಲಿಡಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಲಸಿಕೆ ಪರದಾಟ ಹೆಚ್ಚಿದೆ.

ಶೇ. 50 ಮಕ್ಕಳು, ಸಿಬಂದಿ ಬಾಕಿ
ಕಾಲೇಜು ಆರಂಭಿಸುವ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಸಿಬಂದಿಗೆ ಶೀಘ್ರ ಲಸಿಕೆ ನೀಡುವಂತೆ ಸರಕಾರ ಸೂಚಿಸಿ ಒಂದು ತಿಂಗಳಾಗುತ್ತಿದೆ. ಕಾಲೇಜಿಗೆ ಸಂಬಂಧಿಸಿದ ಒಟ್ಟು 25 ಲಕ್ಷ ಮಂದಿಯ ಪೈಕಿ ಈವರೆಗೆ 12 ಲಕ್ಷ ಮಂದಿಗೆ ಮಾತ್ರ ಲಸಿಕೆ ನೀಡಿದ್ದು, 13 ಲಕ್ಷ ಮಂದಿ ಬಾಕಿ ಉಳಿದಿದ್ದಾರೆ.

Advertisement

10 ಕೋಟಿ ಡೋಸ್‌ ಬೇಕು
ರಾಜ್ಯಕ್ಕೆ ಹೆಚ್ಚು ಲಸಿಕೆ ಪೂರೈಕೆ ಮಾಡುವಂತೆ ಕೇಂದ್ರ ಸರಕಾರಕ್ಕೆ 10ಕ್ಕೂ ಹೆಚ್ಚು ಬಾರಿ ಪತ್ರ ಬರೆಯಲಾಗಿದೆ. ಒಟ್ಟು 4.97 ಕೋಟಿ ಫ‌ಲಾನುಭವಿಗಳಿದ್ದು, ಒಬ್ಬರಿಗೆ 2 ಡೋಸ್‌ಗಳಂತೆ 9.6 ಕೋಟಿ ಡೋಸ್‌ ಬೇಕಿದೆ. ಆದರೆ ಬಂದಿರುವುದು 2.6 ಕೋಟಿ ಮಾತ್ರ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

3.5 ಲಕ್ಷ ಡೋಸ್‌ ದಾಸ್ತಾನು
ರವಿವಾರದ ಅಂತ್ಯಕ್ಕೆ 3.8 ಲಕ್ಷ ಡೋಸ್‌ ದಾಸ್ತಾನು ಇದ್ದು, ಸೋಮವಾರ 3.2 ಲಕ್ಷ ಡೋಸ್‌ ಬಂದಿದೆ. ಸೋಮವಾರ 2.5 ಲಕ್ಷ ಮಂದಿಗೆ ಲಸಿಕೆ ನೀಡಿದ್ದು, 3.5 ಲಕ್ಷ ಡೋಸ್‌ ದಾಸ್ತಾನು ಇದೆ. ಮುಂದೆ ಎಷ್ಟು ಲಸಿಕೆ ರಾಜ್ಯಕ್ಕೆ ಬರುತ್ತದೆ ಎಂಬ ಮಾಹಿತಿ ಇಲ್ಲ.

ರಾಜ್ಯಕ್ಕೆ ಅಗತ್ಯವಿರುವಷ್ಟು ಲಸಿಕೆ ಯನ್ನು ಪೂರೈಸು ವಂತೆ ಕಳೆದ ವಾರವೇ ದಿಲ್ಲಿಗೆ ಭೇಟಿ ನೀಡಿ ಕೇಂದ್ರ ಸರಕಾರಕ್ಕೆ ಮನವಿ ಮಾಡ ಲಾಗಿದೆ. ಈ ತಿಂಗಳ ಅಂತ್ಯಕ್ಕೆ ಪೂರೈಕೆ ಯಾಗುವ ನಿರೀಕ್ಷೆ ಇದೆ.
– ಡಾ| ಕೆ. ಸುಧಾಕರ್‌, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next