Advertisement

Alarm Clock: ಟಿಕ್‌ ಟಿಕ್‌ ಅಲಾರಾಂ ಗಡಿಯಾರ ಎಲ್ಲಿಗೆ ಹೋಯಿತು ?

01:04 PM Sep 08, 2024 | Team Udayavani |

“ಗಂಟೆಯ ನೆಂಟನೇ…ಓ ಗಡಿಯಾರ… ‘ಎಂಬ ಸಾಲುಗಳನ್ನು ಕೇಳಿದಾಗಲೆಲ್ಲ ಗೋಡೆಯ ಮೇಲೆ ಹೊರಳುವ ನಮ್ಮ ಕಣ್ಣುಗಳು ನಮ್ಮ ಜತೆಯೇ ಇರುವ ಪುಟ್ಟ ಅಲಾರಾಂ ಗಡಿಯಾರದ ಕಡೆ ನೋಡುವುದು ಸ್ವಲ್ಪ ಕಡಿಮೆ. ನಮ್ಮ ನಿತ್ಯ ಜೀವನದಲ್ಲಿ ಸಮಯವೆಷ್ಟು ಎಂದು ತೋರಿಸುವ ಗಡಿಯಾರಗಳಿಗೆ ಕೊಡುವ ಪ್ರಾಶಸ್ತ್ಯ ಸಮಯದ ಜಾಗೃತಿ ಮೂಡಿಸುವ ಅಲಾರಾಂ ಗಡಿಯಾರಗಳಿಗೆ ಈಗ ಇಲ್ಲ.

Advertisement

ಅಲಾರಾಂ ಗಡಿಯಾರಗಳೂ ಕೂಡ ಮನೆಯ ಮೂಲೆಯಲ್ಲೋ, ಟಿವಿ ಮೇಲಿನ ಗೊಂಬೆಗಳ ಜಾಗದಲ್ಲೋ, ಗುಜರಿ ಚೀಲದ ಮಧ್ಯದಲ್ಲೋ ಅವಿತು ಕುಳಿತು ಬಿಟ್ಟಿದೆ. ಈಗ ಅದರ ಅವಶ್ಯಕತೆ ಯಾರಿಗೂ ಇಲ್ಲ.ಇಂದಿನ ದಿನಮಾನದಲ್ಲಿ ಎಚ್ಚರಿಸುವಿಕೆಗೆ ಅಲಾರಾಂ ಗಡಿಯಾರವನ್ನು ನೆನೆಯುವವರು ಬಹಳವೆಂದರೆ ಬಹಳ ಕಡಿಮೆ.

ಕಾಲಮಾನಕ್ಕೆ ಹುದುಗಿ ಹೋದ ಪ್ರಾಚೀನ ವಸ್ತುಗಳ ಸಾಲಿಗೆ ಇದು ಸೇರದಿದ್ದರೂ ಬರುವ ಪೀಳಿಗೆಯಿಂದ ದೂರ ಸರಿಯುತ್ತಿರುವ ವಸ್ತುಗಳ ಗುಂಪಿನಲ್ಲಿ ನಾವಿದನ್ನು ಗುರುತಿಸಬಹುದು.

ಪ್ರತಿ ಮನೆಯ ಅಲಾರಾಂ ಗಡಿಯಾರಗಳಲ್ಲಿ ಒಂದು ಕಥೆ ಇರುತ್ತದೆ.ಯಾರದೋ ಪ್ರೀತಿಯ ಕಾಣಿಕೆಯ ನೆನಪಿರುತ್ತದೆ.ಯಾವುದೋ ಪರೀಕ್ಷೆ, ಸಂದರ್ಶನದ ಮಜಲಿರುತ್ತದೆ.ಕಾಲೇಜಿಗೊ, ಕಚೇರಿಗೊ ಗಂಡ ಮಕ್ಕಳನ್ನು ತಯಾರಿ ಮಾಡಿ ಕಳುಹಿಸುವ ಗೃಹಿಣಿಯೊಬ್ಬಳ ದಿನನಿತ್ಯದ ಪ್ರೀತಿ ಇರುತ್ತದೆ.ಅಷ್ಟೇ ಏಕೆ ನಿದ್ದೆಗೆ ಭಂಗ ಬಂದಿತ್ತಲ್ಲ ಎಂಬ ಅಸಮಾಧಾನಕ್ಕೆ ಅದರ ತಲೆ ಮೇಲೆ ಕುಟ್ಟಿ ಹಲುಬಿದ ವಾರಸುದಾರರ ಬೈಗುಳಗಳೂ ಸೇರಿ ಹೋಗಿರುತ್ತದೆ.

ಆದರೆ ಈಗ ಸಾಕಷ್ಟು ಮನೆಯಲ್ಲಿ ಅಲಾರಾಂ ಗಡಿಯಾರಗಳ ಸದ್ದು ನಿಂತು ಹೋಗಿದೆ.ಒಂದು ಕಾಲದ ಸಮೀಕ್ಷೆಯ ಪ್ರಕಾರ ಅಲಾರಾಂ ಗಡಿಯಾರಗಳು ಐ ಫೋನ್‌, ಟಿವಿಗಳನ್ನು ದಿನನಿತ್ಯ ಬಳಕೆಯ ವಸ್ತುಗಳ ಪಟ್ಟಿಯಲ್ಲಿ ಹಿಂದಿಕ್ಕಿತ್ತಂತೆ.ಈಗಲೂ ಹುಡುಕಿದರೆ ಶುಭೋದಯಕ್ಕೆ ಈ ಗಡಿಯಾರವನ್ನೇ ನಂಬಿಕೊಂಡ ಜನರನ್ನು ನಾವು ಹುಡುಕಬಹುದು.

Advertisement

ಹುಡುಕಿ ಹೊರಟರೆ ಈ ಪುಟ್ಟ ಗಡಿಯಾರಗಳಿಗೂ ಕೂಡ ಒಂದು ಇತಿಹಾಸವಿದೆ.ಕೆಲವು ಶತಮಾನಗಳ ಹಿಂದೆ ಗ್ರೀಕ್‌ ಪ್ರಜೆಗಳ ಬಳಿ ದೊಡ್ಡ ಶಬ್ದ ಮಾಡುವ ಜಲತರಂಗ ವಾದ್ಯದ ಯಂತ್ರವಿದ್ದಿತ್ತಂತೆ.ಆದರೆ ಅದರ ಶಬ್ದಕ್ಕೆ ನಿದ್ದೆಯ ಸಮಯದಲ್ಲಿ ಬೆಚ್ಚಿ ಬೀಳುವ ಸಾಧ್ಯತೆ ಇದ್ದಿದ್ದರಿಂದ ಅದರ ಧ್ವನಿ ಚಿಕ್ಕದರಿಂದ ಕ್ರಮೇಣ ಏರು ಗತಿಗೆ ಬರುವ ಹಾಗೆ ಸಿದ್ದಪಡಿಸಿ ಬಳಸಲು ಶುರು ಮಾಡಿದರು.ಕಾಲ ಕಳೆದ ಹಾಗೆ ತಂತ್ರಜ್ಞಾನ, ಆಧುನಿಕ ಸ್ಪರ್ಷಕ್ಕೆ ಬದಲಾದ ಅಲಾರಾಂ ಗಡಿಯಾರಗಳು ತನ್ನದೇ ಆದ ವಿಭಿನ್ನ ಶೈಲಿಯಲ್ಲಿ, ವಿನ್ಯಾಸದಲ್ಲಿ ಜನರನ್ನು ತನ್ನತ್ತ ಆಕರ್ಷಿಸತೊಡಗಿದವು.

ಮೇಜಿನ ಮೇಲೆ ಇಡುವಂತಹ ಈ ಚಿಕ್ಕ ಸಾಧನ ನಾವು ಗುರುತಿಸುವ ಸಮಯಕ್ಕೆ ಸದ್ದು ಮಾಡಿ ನಮ್ಮನ್ನು ಎಚ್ಚರಿಸುತ್ತದೆ.ಸಾಮಾನ್ಯವಾಗಿ ಅಲಾರಾಂ ಗಡಿಯಾರಗಳು ಒಂದು ಅಥವಾ ಎರಡು ರೀತಿಯ ಸದ್ದು ಮಾಡಿದರೂ ಡಿಜಿಟಲ್‌ ಮತ್ತು ಇಲೆಕ್ಟ್ರಾನಿಕ್‌ ಗಡಿಯಾರಗಳಲ್ಲಿ ಇದು ಹಲವು ರೀತಿಯ ಧ್ವನಿಯನ್ನು ಸೇರಿಸುತ್ತದೆ.ಮೆಕ್ಯಾನಿಕಲ್‌ ಗಡಿಯಾರಗಳಲ್ಲಿ ಒಂದು ಮುಖ್ಯ ಸ್ಪ್ರಿಂಗ್‌, ಒಂದು ಸಣ್ಣ ತಮಟೆ, ಮತ್ತು ಒಂದು ಗೈರ್‌ ಬಾಕ್ಸ್ ಇರುತ್ತದೆ.ಇಲೆಕ್ಟ್ರಾನಿಕ್‌ ಗಡಿಯಾರಗಳಲ್ಲಿ  ಮ್ಯಾಗ್ನೆನೆಟಿಕ್‌ ಸರ್ಕ್‌ಯುಟ್‌  ಮತ್ತು ಅರ್ಮೆಚುರ್‌ ಅಲಾರಾಂ ಧ್ವನಿ ಬರುವಂತೆ ಕಾರ್ಯ ನಿರ್ವಹಿಸುತ್ತದೆ.

ಆದರೆ ಈಗ ಅಲಾರಾಂ ಗಡಿಯಾರಗಳ ಸ್ಥಾನವನ್ನು ಮೊಬೈಲ್‌ಗ‌ಳು ಅಲಂಕರಿಸಿವೆ.ಈಗ ಯಾರೂ ಅಲಾರಾಂ ಗಡಿಯಾರಗಳನ್ನು ಅವಲಂಬಿಸಿ ಬದುಕುವುದಿಲ್ಲ.‌ ಮೊಬೈಲ್‌ಗ‌ಳಲ್ಲಿ ಸಮಯ ನಿಗದಿಪಡಿಸಿ ಮಲಗಿದರೆ ಬೇಕಾದ ರೀತಿಯ ಹಾಡು ಹಾಡಿ ಬೆಳಿಗ್ಗೆ ಎಚ್ಚರಿಸಿ ಬಿಡುತ್ತದೆ. ಒಂದೇ ಸದ್ದಿಗೆ ಎಚ್ಚರವಾಗಲು  ಕಷ್ಟಪಡುವ ಜನರು ಐದೈದು ನಿಮಿಷಕ್ಕೆ ಅಲಾರಾಂ ಭಾರಿಸುವಂತೆ ಸೆಟ್‌ ಮಾಡಿ ಮಲಗಿ ಬಿಡುತ್ತಾರೆ.

ಇದಕ್ಕೆಲ್ಲ ಈಗಿನ ಮೊಬೈಲ್‌ ಗಳು ಅವಕಾಶ ಮಾಡಿ ಕೊಟ್ಟಿದೆ. ಈಗ ಸಾಮಾನ್ಯ ಗಡಿಯಾರಗಳ, ಕ್ಯಾಲೆಂಡರ್‌ಗಳ ಸ್ಥಾನವನ್ನು ಕೂಡ ಸಾಕಷ್ಟರ  ಮಟ್ಟಿಗೆ ಈ ಮೊಬೈಲ್‌ ಆಕ್ರಮಿಸಿ ಬಿಟ್ಟಿದೆ.ವಾಚ್‌ಗಳಲ್ಲೂ ಕೂಡ ಸ್ಮಾರ್ಟ್‌ ವಾಚ್‌ಗಳ ಬಳಕೆ ಹೆಚ್ಚಾಗಿದ್ದು ಎಲ್ಲೋ ನಮ್ಮ ನಡುವೆ ‘ಟಿಕ್‌ ಟಿಕ್‌ ‘ಎಂದು ಶಬ್ದ ಉಸುರುವ ಗಡಿಯಾರವೆಂಬ ಗೆಳೆಯರೂ ನಮಗೆ ಅರಿವಿಲ್ಲದಂತೆ ನಮ್ಮಿಂದ ಬಹು ಸಾಗುತಿದ್ದಾರೆ.ಬದಲಾದ ಕಾಲ ನಮ್ಮನ್ನು ಹೊಸತಕ್ಕೆ ಹೊಂದಿಕೊಳ್ಳುವಂತೆ ಎಚ್ಚರಿಸುತ್ತಿದೆ.ಆದರೆ ಕಾಲಕ್ಕೆ ತಕ್ಕಂತೆ ನಮ್ಮನ್ನು ಎಚ್ಚರಿಸುತಿದ್ದ ಅಲಾರಾಂ ಗಡಿಯಾರಗಳು ಶಾಶ್ವತವಾಗಿ ನಿಂತು ಹೋಗುವ ಯೋಜನೆ ಹಾಕಿಕೊಳ್ಳುತ್ತಿದೆ.

- ಶಿಲ್ಪಾ ಪೂಜಾರಿ

ಎಂ.ಎಂ. ಮಹಾವಿದ್ಯಾಲಯ, ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next