ಪ್ರತಿಯೊಬ್ಬರೂ ತಮ್ಮ ಜೀವನದ ಕೆಲವು ಸಮಯವನ್ನು ಮೌನದಿಂದ ಕಳೆದಿರುತ್ತಾರೆ. ತಿಳಿದೋ ಅಥವಾ ತಿಳಿಯದೆ ಮಾಡುವ ಕೆಲವೊಂದು ತಪ್ಪುಗಳು, ಆಲೋಚನೆಗಳು ನಮ್ಮನ್ನು ಮೌನಿಯನ್ನಾಗಿಸಿ ಬಿಡುತ್ತದೆ. ಈ ಮೌನ ಆಂತರಿಕ ಗೊಂದಲ, ಆತ್ಮಾವಲೋಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
ನಮ್ಮ ದೈನಂದಿನ ಜೀವನವು ಹಲವಾರು ನಿರೀಕ್ಷಿತ, ಅನಿರೀಕ್ಷಿತ ವಿಷಯಗಳಿಂದ ಕೂಡಿದೆ. ಮನಸ್ಸಿನ ತುಂಬಾ ಸಾವಿರಾರು ಉತ್ತರ ಸಿಗದ ಪ್ರಶ್ನೆಗಳು ನಮ್ಮ ನೆಮ್ಮದಿ ಕೆಡಿಸಿ ಮೌನಿಯಾಗಿ ಇರುವಂತೆ ಮಾಡಿರುತ್ತದೆ. ಆದರೆ ಆ ಮೌನದಲ್ಲೂ ಕೂಡ ನಮಗೂ ಅರ್ಥವಾಗದಷ್ಟು ಉಳಿದಿರುವ ಆಳವಾದ ಸತ್ಯಗಳು ಅಡಗಿರುತ್ತವೆ. ಅಂತಹ ಹಲವಾರು ರಹಸ್ಯಗಳಿಗೆ ಮೌನವೇ ಮಾತಾಗಿರುತ್ತದೆ, ಕೋಣೆಯ ಗೋಡೆ, ಕಿಟಕಿ ಕಿವಿಯಾಗಿ, ಕಣ್ಣ ರೆಪ್ಪೆ ಸಾಕ್ಷಿಯಾಗಿರುತ್ತದೆ. ನಾವು ಮಾತ್ರ ನಾವಾಗಿರುವಂತೆ ಭಾವಿಸುತ್ತದೆ. ಮೌನವನ್ನು ಅರ್ಥಮಾಡಿಕೊಂಡಷ್ಟು ಇಷ್ಟವಾಗುತ್ತಾ ಹೋಗುತ್ತದೆ.
ನಮ್ಮೊಳಗಿನ ಮೌನವನ್ನು ಅರಿಯಲು ಪ್ರಾರಂಭಿಸಿದಾಗ, ಆರಂಭದಲ್ಲಿ ಭಾರವಾಗಿ ಕಂಡರೂ ನಿಧಾನವಾಗಿ ಅದರಲ್ಲಿ ಅಸ್ತಿತ್ವದ ಅರ್ಥವನ್ನು ಹುಡುಕಲು ಶುರುಮಾಡಬಹುದು. ನಮ್ಮ ಭಾವನೆಗಳು, ಆಸೆಗಳು, ಭಯ, ಖುಷಿ, ದುಃಖ ಎಲ್ಲವೂ ಆ ಮೌನದಲ್ಲಿ ಕಾಣಿಸಿಕೊಂಡು ಹೋಗುತ್ತವೆ. ಆಧ್ಯಾತ್ಮಿಕ ಒಲವು ಕೂಡ ಮೌನದ ಮಾತಾಗಿದೆ. ಮೌನದಿಂದ ಆಧ್ಯಾತ್ಮಿಕತೆಯನ್ನು ಕೂಡ ಅನುಭವಿಸಬಹುದು.
ಒಂದೊಂದು ಬಾರಿ ಅದೆಷ್ಟು ಪ್ರಯತ್ನಿಸಿದರೂ ಸಿಗದ ನೆಮ್ಮದಿ, ನಿರಾಳತೆ, ತೃಪ್ತಿ ಮೌನದಿಂದ ಸಿಗುವುದಂತು ಖಂಡಿತ. ನಮ್ಮೊಳಗಿನ ಮೌನದ ಆಧ್ಯಾತ್ಮಿಕ ಯಾತ್ರೆ ಜೀವನದ ನಿಜವಾದ ಅರ್ಥವನ್ನು ಅರಿತುಕೊಳ್ಳಲು ಸಹಾಯ ಮಾಡುವುದರ ಜತೆಗೆ, ನಮ್ಮ ಹೃದಯದಾಳದ ಮಾತನ್ನು ಕಣ್ಣೀರಿನ ರೂಪದಲ್ಲಿ, ಹಾಸ್ಯದ ರೂಪದಲ್ಲಿ ಅಥವಾ ವಿಭಿನ್ನ ಭಾವನೆಯ ರೂಪದಲ್ಲಿ ವ್ಯಕ್ತವಾಗದೇ ಉಳಿದ ಭಾವನೆಗಳನ್ನು ಮೌನದ ಮೂಲಕ ಹೊರ ಬರುವಂತೆ ಮಾಡುತ್ತದೆ. ಈ ಮೌನವು ನಮಗೆ ಆತ್ಮೀಯತೆ, ಅನುಭೂತಿ ಮತ್ತು ಸಹಜತೆಯನ್ನು ನೀಡುತ್ತದೆ. ಮೌನವು ನಮ್ಮ ಅಂತರಾಳದ ಸಮಸ್ಯೆಗಳನ್ನು ಪರಿಹರಿಸಲು, ನಿಜವಾದ ಪರಿಹಾರವನ್ನು ಹುಡುಕಲು ಪ್ರೇರೇಪಿಸುತ್ತದೆ. ಮೌನಕ್ಕೆ ಸಂಗೀತವು ನಿತ್ಯ ಸಹಕಾರಿ. ಹೊಸದಾಗಿ ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದರ ಜತೆಗೆ ಸಹನೆ, ತಾಳ್ಮೆ ಹೆಚ್ಚಿಸುತ್ತದೆ.
ಅತಿಯಾದರೆ ಅಮೃತವೂ ವಿಷವಂತೆ ಹಾಗೆ ನಮ್ಮ ಬದುಕು ಕೂಡ ನಮ್ಮದಲ್ಲದ ವಸ್ತುವನ್ನಾಗಲಿ, ವ್ಯಕ್ತಿಯನ್ನಾಗಲಿ ಅವುಗಳ ಮೇಲೆ ಮೋಹ ಸಲ್ಲದು. ಅತಿಯಾಸೆಯೇ ನಮ್ಮನ್ನು ಮೌನದ ಕೂಪಕ್ಕೆ ತಳ್ಳುವಂತೆ ಮಾಡುತ್ತದೆ. ಎಲ್ಲರೂ ಇದರಿಂದ ಹೊರ ಬರಲಾರರು, ಬಂದವರು ತಮ್ಮ ಹೊಸ ಬದುಕಿನ ಯಾನವನ್ನು ಆರಂಭಿಸುವುದಂತು ಖಂಡಿತ. ವಿಜಿತ ಅಮೀನ್ ಬಂಟ್ವಾಳ