Advertisement

UV Fusion: ಪಾತ್ರದ ಪರಿಧಿಯೊಳಗೆ

10:31 AM Dec 11, 2023 | Team Udayavani |

ಪುಸ್ತಕವೋ, ನಾಟಕವೋ, ಸಿನೆಮಾ ಧಾರಾವಾಹಿಯೋ ಅದರಲ್ಲಿ ಬರುವ ಒಂದಲ್ಲೊಂದು ಪಾತ್ರದಲ್ಲಿ ನಾವು ಹೊಂದಿಕೊಂಡು ಬಿಡುತ್ತೇವೆ. ಇದು ನನ್ನ ಕಥೆ ಮಾತ್ರವಲ್ಲ, ಮನೆ ಮನೆಯ ದಿನನಿತ್ಯದ ಹಾಡು.

Advertisement

ಅದಾವುದೊ ಟಿವಿ ಸೀರಿಯಲ್‌ನ ಯಾವುದೋ ಪಾತ್ರವನ್ನು ನೋಡಿ ಮನೆಯಲ್ಲಿ ಕುಳಿತ ಅಜ್ಜಿ ಅಳುವ ಪರಿ ವಿಚಿತ್ರವೇ? ಆ ಪಾತ್ರವನ್ನೇ ತಾನೆಂದುಕೊಂಡು ತನ್ನದೋ ಅಥವಾ ತನ್ನದ್ದಲ್ಲದ್ದೊ ಸನ್ನಿವೇಶಕ್ಕೆ ಇಲ್ಲಿ ಕಣ್ಣೀರ ಅಭಿಷೇಕ. ಪುಸ್ತಕದ ಯಾವುದೋ ಪಾತ್ರದಲ್ಲಿ ಅವಳ ವಿರಹವನ್ನು ನೋಡಿ ಚಿಂತೆಗೊಳಪಡುವವರೂ ಇದ್ದಾರೆ. ನಾಯಕ, ನಾಯಕಿಯ ಪಾತ್ರವೇ ಆಗಬೇಕೆಂದಿಲ್ಲ ಭಾವೊದ್ವೇಗಕ್ಕೆ. ರಾಮಾಯಣದಲ್ಲಿ ರಾಮ, ಸೀತೆಯರಿಗಿಂತ ಉರ್ಮಿಳೆ ಹತ್ತಿರವಾಗುವುದು ಅದೇ ಕಾರಣಕ್ಕೆ. ಮಹಾಭಾರತದಲ್ಲಿ ವಿಧುರನಂತಹವರು ಹೇಗೋ ನಮ್ಮನ್ನು ಸೆಳೆದು ಬಿಡುತ್ತಾರೆ. ಎಲ್ಲ ಪಾತ್ರಗಳು ಹಾಗೆ ಹಿಡಿದಿಡುವುದೂ ಇಲ್ಲ ತನ್ನ ಪರಿಧಿಯೊಳಗೆ ಸೇರಿಸಿಕೊಳ್ಳುವುದೂ ಇಲ್ಲ. ತಲೆಯಲ್ಲಿ ಗುಂಯ್‌ ಎನ್ನುವುದೂ ಇಲ್ಲ. ಹಾಗೆ ಕೆಲವು ಪಾತ್ರಗಳ ಮೋಡಿ ಸಾಮಾನ್ಯದ್ದಲ್ಲ.

ಒಂದು ಪಾತ್ರ ನಕ್ಕಿತು ಎಂತಾದರೆ ಅದರ ಗುರುತ್ವಾಕರ್ಷಣೆಗೆ ಸಿಲುಕಿದವರು ನಗುವರು. ಅದೇ ಅವರು ಅತ್ತರೆ ಇವರದ್ದೂ ಕೂಡ ಅದೆ ಪರಿಸ್ಥಿತಿ. ಟಿವಿಯೊಳಗೋ ಪುಸ್ತಕದೊಳಗೋ ತಲ್ಲೀನವಾಗಿ ಬೋರ್ಗರಿದೆಯೂ, ಬತ್ತದೆಯೂ ಸದಾ ಹರಿಯುತ್ತಲೇ ಇರುತ್ತದೆ. ಅಂತಹ ಅನುಭವವೇ ಬೇರೆ. ವಸುದೇಂದ್ರರ ತೇಜೋ ತುಂಗಭದ್ರ ಪುಸ್ತಕ ಓದಿ ಗೇಬಿ, ಬೆಲ್ಲಾರಿಗೆ (ಪಾತ್ರ) ಅದೆಷ್ಟೋ ಜನ ಅತ್ತಿದ್ದಾರೆ.

ರವಿಬೆಳಗೇರೆಯವರ ಹೇಳಿ ಹೋಗು ಕಾರಣ ಪುಸ್ತಕದ ಹಿಮವಂತ ಮತ್ತು ಉರ್ಮಿಳೆಗಾಗಿ ಪರಿತಪಿಸಿದವರಿದ್ದಾರೆ. ಇಲ್ಲಿ ಉರ್ಮಿಳೆ ಪಾತ್ರ ಎಷ್ಟು ಕಾಡುವುದೆಂದರೆ ಕನಸಿನಲ್ಲೀಯೂ ಬರುವ ಪಾತ್ರ ಅದು (ನಾಯಕಿ ಆಗಿರಲಿಲ್ಲ). ಶಿವರಾಜಕುಮಾರ ಸಿನೆಮಾ ನೊಡಿ ಅದೆಷ್ಟು ಜನ ಅಣ್ಣ ತಂಗಿಯ ಬಾಂಧವ್ಯಕ್ಕೆ ಪ್ರೇರಣೆ ಪಡೆದಿದ್ದಾರೆ. ವಿಷ್ಣುವರ್ಧನ್‌ ಸಿನೆಮಾ ನೋಡಿ ಒಗ್ಗಟ್ಟಿನ ಪ್ರೇರಣೆ ಪಡೆದವರಿದ್ದಾರೆ.

ಇತ್ತಿಚೆಗೆ ಸಪ್ತ ಸಾಗರದಾಚೆ ಎಲ್ಲೋ ಸಿನೆಮಾ ನೋಡಿ ತನ್ನನ್ನು ತಾನು ಮನು-ಪ್ರಿಯಾ ಎಂದು ಗುರುತಿಸಿಕೊಂಡು ಕಾಲ ಕಳೆದವರಿದ್ದಾರೆ. ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತವನ್ನು ತಮ್ಮ ಕಲ್ಪನೆಯಲ್ಲಿ ತೇಲಿದವರಿದ್ದಾರೆ, ಒಂದು ಪಾತ್ರದ ಪ್ರೀತಿ, ಕರುಣೆ, ದುಃಖ, ಕಷ್ಟಗಳಿಗೆ ಮರುಗಲಷ್ಟೇ ಅಲ್ಲ, ಒಂದು ಪಾತ್ರವನ್ನು ಜೋರಾಗಿ ಬೈದು ಆ ಪಾತ್ರದ ಕಾಣದ ಸೆಳೆತಕ್ಕೆ ಸಣ್ಣಗೆ ಸಿಲುಕಿಕೊಂಡಿದ್ದಾರೆ. ಇಂತಹ ಅದೆಷ್ಟೋ ಉದಾಹರಣೆಗಳು ಮನೆ ಮನೆಗಳಲ್ಲಿ ಸಿಗುತ್ತದೆ.

Advertisement

ಒಂದಲ್ಲಾ ಒಂದು ರೀತಿಯಲ್ಲಿ ಪ್ರತಿಯೊಬ್ಬನೂ ಕೆಲವು ಪಾತ್ರದ ಪರಿಧಿಯೊಳಗೆ ಬಂಧಿಯೆ. ಇದು ಬರವಣಿಗೆಯಲ್ಲಿ ಸಿಲುಕಿದ್ದೊ ಅಥವಾ ಭಾವದಲ್ಲಿ ಸಿಲುಕಿದ್ದೊ ಎಂದರೆ ಬರವಣಿಗೆಯ ಭಾವದಲ್ಲಿ ಪಾತ್ರಗಳ ಪರಿಧಿಯಲ್ಲಿ ತಾಪತ್ರಯವಿಲ್ಲದೆ ಸಿಲುಕಿ ಒದ್ದಾಡಿಬಿಡುತ್ತೆವೆ. ಪ್ರತೀ ದಿನವೂ ಒಂದೊಂದು ಪಾತ್ರದಲ್ಲಿ ಇದ್ದು ನಗುತ್ತೇವೆ, ಅಳುತ್ತೇವೆ, ಕೋಪಿಸಿಕೊಳ್ಳುತ್ತೇವೆ. ನಮ್ಮನ್ನು ನಾವು ಬಿಡಿಸಿಕೊಳ್ಳಲಾಗದೆ ಸ್ವತ್ಛಂದವಾಗಿ ಪಾತ್ರದಲ್ಲಿ ವಿಹರಿಸುತ್ತಾ ಉಳಿದು ಬಿಡುತ್ತೇವೆ. ಅದೇನೇ ಇದ್ದಿರಬಹುದು ಪಾತ್ರದ ಪರಿಧಿಯೊಳಗೆ ನಾನು ಬಂಧಿ, ನೀನು ಬಂಧಿ, ಭಾವದಲ್ಲಿ ನಾವೆಲ್ಲರೂ ಬಂಧಿಯೇ.

-ದಿವ್ಯಶ್ರೀ ಹೆಗಡೆ

ಎಸ್‌.ಡಿ.ಎಂ. ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next