Advertisement
ಒಂದು ದಿನ ನನ್ನ ಗೆಳೆಯರು ಪೊಸಡಿಗುಂಪೆಗೆ ಹೋಗಿಬರುವ ವಿಚಾರದ ಕುರಿತು ನನ್ನಲ್ಲಿ ಚರ್ಚಿಸಿದರು. ಹೇಗೂ ಅದು ನಮ್ಮ ಊರಿನಿಂದ ಸ್ವಲ್ಪ ದೂರದಲ್ಲಿಯೇ ಇರುವುದರಿಂದ ಒಮ್ಮೆ ಹೋಗಿ ಬರೋಣ ಎಂದು ಯೋಚಿಸಿದೆ. ಅವರ ದೆಸೆಯಿಂದ ಮೊದಲ ಬಾರಿಗೆ ಪೊಸಡಿ ಗುಂಪೆಗೆ ನನ್ನ ಪಯಣ ಸಾಗಿತು. ನಮ್ಮೂರಿನಲ್ಲಿ ಪೊಸಡಿಗುಂಪೆ ಎಂದು ಹೇಳುವವರ ಸಂಖ್ಯೆ ತೀರಾ ವಿರಳ. ಪೊಸಡಿಗುಂಪೆ ಇಂದಿಗೂ ಅನೇಕರ ಬಾಯಲ್ಲಿ ಗುಂಪೆಯಾಗಿಯೇ ಉಳಿದಿದೆ.
Related Articles
Advertisement
ಸೌಂದರ್ಯದ ಗಣಿಯೇ ಆಗಿರುವ ಗುಂಪೆ ಎಲ್ಲಿಯೋ ಅದರ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆಯೋ ? ಎಂಬ ಗಾಢ ಪ್ರಶ್ನೆ ನನ್ನಲ್ಲಿ ಉದಿಸಿತು. ಇದಕ್ಕೆ ಕಾರಣ ಇಷ್ಟೇ ಪ್ರಕೃತಿಯೊಂದಿಗೆ ವಿಕೃತಿಯನ್ನು ತೋರಿಸುವ ಮಾನವನ ನೀಚ ಗುಣ . ಮನುಷ್ಯ ಎಷ್ಟೇ ಬೆಳೆದರೂ ಎಷ್ಟೇ ವಿದ್ಯಾವಂತನಾದರೂ ಕೆಲವೊಂದು ವಿಚಾರದಲ್ಲಿ ಶತ ದಡ್ಡನಂತೆ ವರ್ತಿಸುತ್ತಾನಲ್ಲ ಇದು ಪ್ರಸ್ತುತ ಜಗತ್ತಿನ ದುರಂತ ಎಂದು ಕರೆದರೆ ಅತಿಶಯೋಕ್ತಿ ಆಗಲಾರದು. ತಾನು ಇರುವ ಪರಿಸರವನ್ನೆಲ್ಲಾ ತ್ಯಾಜ್ಯಗಳಿಂದ ತುಂಬಿ ತುಳುಕುವಂತೆ ಮಾಡಿದ ಮಾನವ ಎತ್ತರೆತ್ತರದ ಬೆಟ್ಟವನ್ನೂ ಕೂಡ ಬಿಡದೆ ಅಲ್ಲಿನ ಸೌಂದರ್ಯವನ್ನು ಕೆಡಿಸುವ ನೀಚ ಕೃತ್ಯಕ್ಕೆ ಕೈಹಾಕುತ್ತಿದ್ದಾನೆ.
ಗುಂಪೆಯನ್ನು ಏರುತ್ತಾ ಹೋದಂತೆ ರಾಶಿಗಟ್ಟಲೆ ಬಿದ್ದಿದ್ದ ನೀರಿನ ಮತ್ತು ತಂಪು ಪಾನೀಯಗಳ ಪ್ಲಾಸ್ಟಿಕ್ ಬಾಟಲ್ ಗಳು, ತಿಂಡಿ ತಿಂದು ಬಿಸಾಕಿದ ಖಾಲಿ ಪೊಟ್ಟಣಗಳನ್ನು ಕಂಡು ಇದು ಮಾನವನ ಬೌದ್ಧಿಕ ದಿವಾಳಿತನವಲ್ಲದೇ ಮತ್ತೇನು ಎಂದೆನಿಸತೊಡಗಿತು. ಇನ್ನು ಮಧ್ಯ ಪ್ರಿಯರ ಕಥೆಯನ್ನಂತೂ ಕೇಳಲೇ ಬೇಡಿ ಬೇಕಾದಷ್ಟು ಬಾರುಗಳಲ್ಲಿ ದರ್ಬಾರನ್ನು ಮಾಡಲು ಅವರಿಗೆ ಅವಕಾಶವನ್ನು ಕೊಟ್ಟರೂ ಅವರು ಪ್ರಕೃತಿ ಮಾತೆಯ ಮಡಿಲಲ್ಲಿ ಕುಳಿತು ಮಧ್ಯಪಾನವನ್ನು ಮಾಡಿ ಆ ಬಾಟಲ್ ಗಳನ್ನು ಅಲ್ಲೇ ಪುಡಿಪುಡಿ ಮಾಡಿ ಹೋಗುವ ವಿಕೃತ ಮನಸ್ಸಿನ ಅವಿವೇಕಿಗಳು. ಕುಡಿದು ನಶಾ ಮತ್ತರಾಗುವ ಅವರಿಗೆ ಇತರ ಪ್ರವಾಸಿಗಳ ನೋವು ಹೇಗೆ ಅರ್ಥವಾಗಬೇಕು.
ಪ್ರಕೃತಿಮಾತೆ ನಾವು ಕೇಳದಯೇ ಇಂತಹ ಅನೇಕ ವಿಸ್ಮಯಗಳನ್ನು ನಮಗಾಗಿ ಸೃಷ್ಟಿಸಿರುವಾಗ ಅದನ್ನು ರಕ್ಷಿಸುವುದು ನಮ್ಮ ನಿಮ್ಮ ಕರ್ತವ್ಯವಲ್ಲವೇ? ಇದು ಕೇವಲ ಗುಂಪೆಯ ಪರಿಸ್ಥಿತಿಯಲ್ಲ. ಅನೇಕ ಪ್ರೇಕ್ಷಣೀಯ ಸ್ಥಳಗಳು ಇಂದಿಗೂ ನನ್ನನ್ನು ರಕ್ಷಿಸಿ ರಕ್ಷಿಸಿ ಎಂದು ಗೋಗರೆಯುತ್ತಿವೆ .
ಸರಕಾರವಾಗಲಿ ಅಥವಾ ಸಂಬಂಧಪಟ್ಟ ಇಲಾಖೆಯಾಗಲಿ ಗುಂಪೆಯ ಈ ಸ್ಥಿತಿಯನ್ನು ಈಗಲೇ ಅರ್ಥೈಸಿಕೊಂಡು ಕಾರ್ಯಪ್ರವೃತ್ತರಾಗದೇ ಇದ್ದರೆ ಗುಂಪೆ ಹಾಳು ಕೊಂಪೆಯಾಗುವ ದಿನ ದೂರದಲ್ಲಿಲ್ಲ ಎಂದೆನಿಸುತ್ತದೆ. ಇದು ಸದಾವಕಾಶ ಈಗಲೇ ಎಚ್ಚೆತ್ತರೆ ಮುಂದಾಗಬಹುದಾದ ಅಪಾಯವನ್ನು ತಡೆಯಬಹುದು ಇಲ್ಲದೇ ಹೋದರೆ ಹಿಂದೆ ಈ ಗುಂಪೆ ತುಂಬಾ ಸುಂದರವಾಗಿತ್ತು ಎಂದು ಹೇಳುವ ಕಾಲಘಟ್ಟ ಬಂದರೂ ಬರಬಹುದು.
ಗುಂಪೆ ಗುಂಪೆಯಾಗಿಯೇ ಉಳಿಯಲಿ ಯಾವತ್ತಿಗೂ ಹಾಳು ಕೊಂಪೆಯಾಗದಿರಲಿ. ಗುಂಪೆಯ ರಕ್ಷಣೆ ಅಲ್ಲಿನ ಪರಿಸರದಲ್ಲಿರುವ ನಮ್ಮೆಲ್ಲರ ಹೊಣೆ. ಪ್ರೀತಿಯ ಗುಂಪೆ ಪ್ರಿಯರೇ, ತಿಂಡಿ, ತಿನಿಸು, ನೀರು ಯಾವುದನ್ನು ಬೇಕಾದರೂ ಮೇಲಿನ ತಪ್ಪಲಿಗೆ ಕೊಂಡೊಯ್ಯಿರಿ ಆಕ್ಷೇಪವಿಲ್ಲ, ಆದರೆ ಅದನ್ನು ಅಲ್ಲೇ ಎಸೆಯದಿರೋಣ. ಸಮಯ ಸಿಕ್ಕಾಗ ನಿಮ್ಮ ಚಾರಣವು ಪೊಸಡಿಗುಂಪೆಯತ್ತ ಇರಲಿ …….. ಸ್ವಚ್ಛ ಗುಂಪೆ ನೆನಪಿನಲ್ಲಿರಲಿ ! ವಿಕಾಸ್ ರಾಜ್ ವಿ.ವಿ. ಕಾಲೇಜು ಮಂಗಳೂರು