ಅಜ್ಜಿ ಅಜ್ಜನಿಂದ ಕಥೆ ಹೇಳಿಸಿಕೊಳ್ಳುವ, ಕೇಳಿಸಿಕೊಳ್ಳುತ್ತಿದ್ದ ಕ್ಷಣಗಳು ಈಗಿನ ಜಮಾನದಲ್ಲಿ ಕಡಿಮೆಯಾಗಿದೆ. ನಮ್ಮ ಬಾಲ್ಯದಲ್ಲಿ ಅಜ್ಜ ಅಜ್ಜಿ ಹೇಳುತ್ತಿದ್ದ ಕಥೆ ಕೇಳುವುದೇ ಒಂದು ಕೌತುಕದ ಸಂಗತಿಯಾಗಿತ್ತು. ಈಗಲೂ ನಾನು ಸಣ್ಣವರಿದ್ದಾಗ ಅಜ್ಜಿಯ ಮಡಿಲಲ್ಲಿ ಮಲಗಿ ಕಥೆ ಕೇಳುತ್ತಿದ್ದ ದಿನಗಳು ನೆನಪಿದೆ. ಅಜ್ಜನ ಸಾಹಸಗಾಥೆ ಸೇರಿದಂತೆ ಅಜ್ಜಿಯ ಬತ್ತಳಿಕೆಯಲ್ಲಿದ್ದ ಬತ್ತದಷ್ಟು ಕಥೆಗಳು ಒಂದರ ಹಿಂದೆ ಮತ್ತೂಂದರಂತೆ ಬರುತ್ತಿದ್ದ ಆ ದಿನಗಳು ಎಷ್ಟೊಂದು ಸುಂದರವಾಗಿತ್ತು.
ಪ್ರಸ್ತುತ ಎÇÉೋ ಒಂದು ಕಡೆ ಈ ಮೊಬೈಲ್ ಫೋನ್, ಟಿವಿಗಳು ಮಕ್ಕಳಲ್ಲಿ ಕಥೆಗಳನ್ನು ಕೇಳಿಸಿಕೊಳ್ಳುವ ವ್ಯವಧಾನವನ್ನು ದೂರ ಮಾಡಿದಂತಿದೆ. ನಮ್ಮ ತಾಯಿ, ತಂದೆ, ಚಿಕ್ಕಮ್ಮ, ಚಿಕ್ಕಪ್ಪ, ಅತ್ತೆ, ಮಾವ, ಅಣ್ಣ, ತಂಗಿ ಎಲ್ಲರೂ ಅಜ್ಜಿ ಕಾಲದ ಕಥೆಯನ್ನು ಆಲಿಸಿಯೇ ಬೆಳೆದದ್ದು.
ಅಜ್ಜಿ ಕಥೆ ಹೇಳುತ್ತಾಳೆ ಎಂಬ ಕಾರಣಕ್ಕಾಗಿಯೇ ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಹೋಗೋಣ ಎಂದು ಅಪ್ಪ ಅಮ್ಮನನ್ನು ಕಾಡುತ್ತಿದ್ದ ಕಾಲವೊಂದಿತ್ತು. ಆದರೆ ಪ್ರಸ್ತುತ ಕಥೆಯನ್ನು ಹೇಳುತ್ತಿದ್ದ ಅಜ್ಜಿ ಈಗ ಮನೆಯ ಮೂಲೆಯೊಂದರ ಖಾಯಂ ಅತಿಥಿಯಾಗಿದ್ದಾರೆ. ಎಲ್ಲರೂ ಈಗ ಫೇಸ್ಬುಕ್, ವಾಟ್ಸಪ್ ಪ್ರಪಂಚದಲ್ಲಿ ಮುಳುಗಿ ಹೋಗಿದ್ದಾರೆ. ಇದೆಲ್ಲವನ್ನೂ ನೋಡುತ್ತಾ ಹೋದರೆ ಅಜ್ಜಿಯ ಕೈ ತುತ್ತು ತಿಂದು, ಕಥೆಗಳನ್ನು ಕೇಳುತ್ತಿದ್ದ ನಾವೇ ಪುಣ್ಯವಂತರು ಎನ್ನಬಹುದು.
ಈಗ ಕಥೆ ಕೇಳುವವರ ಸಂಖ್ಯೆಯೂ ಕಡಿಮೆ ಆಗುತ್ತಾ ಬಂದಂತೆ ಕಥೆ ಹೇಳುವವರ ಸಂಖ್ಯೆಯೂ ಕಡಿಮೆಯಾಗಿದೆ. ಆಗ ಅಜ್ಜಿ ಹೇಳುತ್ತಿದ್ದ ಕಥೆಗಳನ್ನು ಕೇಳುತ್ತಾ ಮಕ್ಕಳು ಜ್ಞಾನ ಹೆಚ್ಚಿಸಿಕೊಳ್ಳುತ್ತಿದ್ದರು, ಆದರೆ ಈಗ ಹೀಗಿಲ್ಲ ಏನೇ ಬೇಕೆಂದರೂ ಇಂಟರ್‌ನೆಟ್ ಅನ್ನು ಕೇಳಿದರೆ ಕ್ಷಣಮಾತ್ರದಲ್ಲೇ ಬೇಕಾದ ಉತ್ತರ ಕೈಸೇರುತ್ತದೆ. ಇಂದು ಎಂದೆಂದೂ ಮರಳಿ ಬಾರದ ಅದ್ಭುತ ಕ್ಷಣಗಳನ್ನು ನಾವೆಲ್ಲಾ ಕಳೆದುಕೊಳ್ಳುತ್ತಿದ್ದೇವೆ ಎಂದೇ ಹೇಳಬಹುದು.
–
ರಂಜಿತಾ ಹೆಚ್.ಕೆ.
ಹಾಸನ