ದಿನದಿಂದ ದಿನಕ್ಕೆ ಜಗತ್ತು ತಂತ್ರಜ್ಞಾನಗಳ ಆವಿಷ್ಕಾರದಲ್ಲಿ ಪ್ರಗತಿ ಹೊಂದುತ್ತಿದೆ. ಮನುಷ್ಯನ ಶ್ರಮ ಕಡಿತಗೊಳಿಸುವಲ್ಲಿ ಇಂತಹ ಸಂಶೋಧನೆಗಳು ಅಗತ್ಯವಾಗಿವೆ. ಇದರಿಂದ ಮಾನವನ ಸಮಯ, ಶ್ರಮ, ವೆಚ್ಚ ಮುಂತಾದ ಎಲ್ಲವನ್ನೂ ಉಳಿಸಬಹುದು. ಆದರೆ ತಂತ್ರಜ್ಞಾನ ನಮ್ಮ ಜೀವನದ ಅನಿವಾರ್ಯತೆ ಆಗಬಾರದು.
ಅರ್ಧ ಶತಮಾನದ ಹಿಂದಿನಿಂದ ಈ ತಂತ್ರಜ್ಞಾನ, ಡಿಜಿಟಲ್ ಎಂಬ ವೈಜ್ಞಾನಿಕ ಕ್ಷೇತ್ರವು ವೇಗವಾಗಿ ಬೆಳವಣಿಗೆ ಹೊಂದಿತು. ಅದಕ್ಕೂ ಪೂರ್ವದಲ್ಲಿ ಮಾನವನು ಕೆಲಸಗಳಿಗೆ, ಮನೋರಂಜನೆಗೆ ತನ್ನ ಕ್ರಿಯಾತ್ಮಕತೆಯನ್ನೇ ಬಳಸುತ್ತಿದ್ದ. ಇದರಿಂದ ದೈಹಿಕ ಹಾಗು ಮಾನಸಿಕ ಶಕ್ತಿ, ಸಾಮರ್ಥ್ಯ ಅಧಿಕವಾಗುತ್ತಿತ್ತು. ತಂತ್ರಜ್ಞಾನ, ಡಿಜಿಟಲ್ ಎಂಬುದು ಮಾನವನನ್ನು ನಿರಾಸಕ್ತಿಗೆ ಗುರಿ ಮಾಡುತ್ತಿವೆ. ಸೋಮಾರಿಯಾದ ಜೀವಿಯಲ್ಲಿ ನಕಾರಾತ್ಮಕ ಗುಣಲಕ್ಷಣಗಳು ಬೆಳೆಯುತ್ತಿವೆ. ಜೀವನ ಉತ್ಸಾಹವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಇದಕ್ಕೆ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ದೈಹಿಕ ಹಾಗೂ ಸ್ಮರಣ ಶಕ್ತಿಯ ಸಾಮರ್ಥ್ಯ ಹಿರಿಯರಿಗಿಂತ ಕಡಿಮೆಯಾಗುತ್ತಿದೆ. ಅವರಲ್ಲಿರುವ ಜೀವನ ಚೈತನ್ಯ, ಉತ್ಸಾಹ ಇಂದಿನ ಪೀಳಿಗೆಗಳಲ್ಲಿ ಉಳಿದಿಲ್ಲ. ಇದಕ್ಕೆÇÉಾ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣವೇ ನಾವು ತಂತ್ರಜ್ಞಾನವನ್ನು ಬದುಕಿಗೆ ಅಳವಡಿಸಿಕೊಂಡ ರೀತಿ.
ನಮ್ಮನ್ನು ಡಿಜಿಟಲ್ ಎಷ್ಟರ ಮಟ್ಟಿಗೆ ಆವರಿಸಿಕೊಂಡಿದೆ ಎಂದರೆ ನಿದ್ದೆಗೆ ಜಾರುವ ಮುನ್ನ ಹಾಗೂ ನಿದ್ದೆಯಿಂದ ಎದ್ದ ತತ್ ಕ್ಷಣ ದೇವರನ್ನು ಸ್ಮರಿಸುತ್ತೇವೋ ಇಲ್ಲವೋ ಮೊಬೈಲ್ ಫೋನ್ ತಪ್ಪದೇ ಬಳಸುತ್ತೇವೆ. ಅದೇನು ಮಹಾ ಅಪರಾಧವಲ್ಲ ಆದರೆ ಕಣ್ಣಿನ ಆರೋಗ್ಯಕ್ಕೆ ಹಾನಿಯನ್ನು ಖಂಡಿತ ಇದು ಉಂಟುಮಾಡುತ್ತದೆ.
ಇದನ್ನು ಗಮನಿಸಿದಾಗ ಅರಿವಾಗುವುದೇನೆಂದರೆ ಮಾನವನ ದಿನದ ಆರಂಭ ಮತ್ತು ಕೊನೆ ಎರಡು ತಂತ್ರಜ್ಞಾನವೇ ನಿರ್ಧರಿಸುತ್ತಿದೆ ಎಂದರೆ ಇನ್ನೂ ಇಡೀ ದಿನವನ್ನು ಇದು ನಿಯಂತ್ರಿಸದೆ ಹೋದಿತೆ? ಒಂದು ಮೋಬೈಲ್ ನಮ್ಮ ಮೇಲೆ ಇಷ್ಟೊಂದು ಪರಿಣಾಮ ಬೀರುತ್ತದೆ ಎಂದರೆ ನಾವು ನಿತ್ಯ ಬಳಸುವ ಅದೆಷ್ಟೋ ತಾಂತ್ರಿಕ ಉಪಕರಣಗಳು ಮಾನವನನ್ನು ಹೇಗೆ ಆವರಿಸಿವೆ ಎನ್ನುವುದನ್ನು ಚಿಂತಿಸಲೇಬೇಕು.
ಸಂಪೂರ್ಣವಾಗಿ ತಾಂತ್ರಿಕ ಮುಕ್ತಜೀವನ ಪ್ರಸ್ತುತ ದಿನಗಳಲ್ಲಿ ಅಸಾಧ್ಯ. ಆದರೆ ಅದಕ್ಕೆ ಅವಲಂಬಿತವಾಗುವುದಕ್ಕೂ, ಅಗತ್ಯಕ್ಕೆ ಮಾತ್ರ ಉಪಯೋಗಿಸುವುದಕ್ಕೂ ವ್ಯತ್ಯಾಸವಿದೆ. ಹೀಗಾಗಿ ಅನಿವಾರ್ಯತೆಗೆ ತಕ್ಕಂತೆ ಬಳಸುವುದರಿಂದ ಯಾವ ಕಷ್ಟ ನಷ್ಟಗಳು ಉಂಟಾಗುವುದಿಲ್ಲ. ಸಣ್ಣ ಪ್ರಯತ್ನದಿಂದ ಆರಂಭಿಸಿ ಅನಂತರ ಎಲ್ಲವನ್ನೂ ಖಂಡಿತ ಸಾಧ್ಯವಾಗಿಸಬಹುದು.
ಪೂಜಾ ಹಂದ್ರಾಳ
ಶಿರಸಿ