Advertisement

UV Fusion: ಮಾತು ಮೌನವಾಗಿದೆ…

01:00 PM Sep 07, 2024 | Team Udayavani |

ಜೀವನ ಎಂಬುದು ಒಂದು ಸುದೀರ್ಘ‌ವಾದ ಪಾಠ ಶಾಲೆ. ಇಲ್ಲಿ ಅರಿವಿಲ್ಲದಂತೆ ನಾವು ಹುಟ್ಟಿನಿಂದ ಸಾವಿನ ವರೆಗೂ ಅನೇಕ ವಿಷಯ, ಅನುಭವ, ವಿಚಾರಗಳನ್ನು ನಮ್ಮ ಶಿಕ್ಷಕರಿಂದ, ಸ್ನೇಹಿತರಿಂದ ಪೋಷಕರಿಂದ ಕಲಿಯುತ್ತಲೇ ಇರುತ್ತೇವೆ. ನಿಜವಾದ ಜೀವನವನ್ನು ಕಲಿಸುವುದು ಹೊರಗಿನ ಪ್ರಪಂಚ. ನಮ್ಮ ಆಗು ಹೋಗುಗಳ ಅನುಭವಗಳಿಂದ ಹಲವಾರು ವಿಷಯಗಳನ್ನು ತಿಳಿಯುತ್ತಾ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬೆಳೆಯುತ್ತೇವೆ. ಇದರಿಂದಾಗಿ ನಾವು ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ. ಪ್ರತಿಯೊಂದು ಸಣ್ಣ ಪುಟ್ಟ ವಿಷಯಗಳೂ ಒಂದಲ್ಲ ಒಂದು ಜೀವನ ಪಾಠವನ್ನು ತಿಳಿಸಿಕೊಡುತ್ತದೆ.

Advertisement

ನಾವು ಹಾಸ್ಟೆಲ್‌ನಲ್ಲಿದ್ದಾಗ ಅಲ್ಲಿ ಮೊಬೈಲ್‌ ಬಳಕೆಯನ್ನು ನಿಷೇಧಿಸಿದ್ದರು. ಆದರೆ ಸಮಯ ಕಳೆಯಲು ಸದಾ ರೂಮ್‌ ಮೇಟ್ಸ್‌, ಹಾಸ್ಟೆಲ್‌ ಮೇಟ್ಸ್‌ಗಳಿದ್ದರು. ಓದು ಬರಹದ ಮಧ್ಯೆ ಅವರೊಂದಿಗೆ ಕಾಲ ಕಳೆಯುತ್ತಿದ್ದೆವು. ಸಂಜೆಯ ಕಾಫಿ ಅನಂತರದ ಒಂದು ವಾಕ್‌ ಒಂದು ಗುಂಪಿನವರೊಂದಿಗಾದರೆ, ರಾತ್ರಿ ಊಟದ ಅನಂತರದ ಟಾಕ್‌ ಮತ್ತೂಂದು ಗುಂಪಿನವರೊಂದಿಗೆ. ಹೀಗೆ ಹಾಸ್ಟೆಲ್‌ನಲ್ಲಿ ಸಿಕ್ಕ ಗೆಳೆತನದ ಅಧ್ಯಾಯ ಬಹಳ ಮುಖ್ಯವಾದುದು ಎಂದರೆ ತಪ್ಪಾಗಲಿಕ್ಕಿಲ್ಲ.

ಬೇರೆ ಬೇರೆ ಊರಿನ ಗೆಳತಿಯರು, ಊರಿನಿಂದ ಊರಿಗೆ ಬದಲಾಗುವ ಕನ್ನಡ ಭಾಷೆಯ ಸೊಬಗು, ಸಂಸ್ಕೃತಿ ಅಷ್ಟೇ ಯಾಕೆ ರಜೆ ಮುಗಿಸಿ ಊರಿನಿಂದ ಬಂದಾಗ ಅವರವರ ಊರಿನ ಸ್ಪೆಷಲ್‌ ತಿಂಡಿ – ತಿನಸು ಎಲ್ಲವನ್ನೂ ಒಟ್ಟಾಗಿ ಹಂಚಿ ತಿನ್ನುತ್ತಿದ್ದಾಗ ಇಡೀ ಕರ್ನಾಟಕವನ್ನೇ ಸುತ್ತಿದ ಅನುಭವ ಸಿಗುತ್ತಿತ್ತು.

ಎಲ್ಲರೂ ಸ್ವಂತ ಅಕ್ಕ ತಂಗಿಯಾಗಿ ಕಷ್ಟ-ಸುಖ, ಪ್ರೀತಿ-ಪ್ರಣಯ, ಅವರ ಟೀಚರ್‌ಗಳ ಸಿಟ್ಟು ಎಲ್ಲವನ್ನೂ ಹೇಳಿಕೊಳ್ಳುತ್ತಾ ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದೆವು. ರಾತ್ರಿ 8 ಗಂಟೆಯಾಯಿತೆಂದರೆ ಎಲ್ಲರೂ ಸೇರಿ ಒಂದೇ ಟೇಬಲ್‌ನಲ್ಲಿ ಕುಳಿತು ಮಾತಿನೊಂಡಿದೆ ಊಟ ಶುರುವಾಗುತ್ತಿತ್ತು. ರಾತ್ರಿ ಮಲಗುವಾಗಲೂ ಅಷ್ಟೇ, ಚೇಷ್ಟೆ, ತಮಾಷೆ, ಆಟ, ಹಾಡು ಹಾಡುತ್ತಾ ಖುಷಿಯಲ್ಲಿ ನಿದ್ದೆಗೆ ಜಾರುತ್ತಿದ್ದೆವು.

ಮುಂದೆ ಪದವಿ ವಿದ್ಯಾಭ್ಯಾಸಕ್ಕೆಂದು ಆ ಊರಿನಿಂದ ಈ ಊರಿಗೆ ಬಂದೆ. ಅಲ್ಲಿ ಇದ್ದ ಹಾಗೇ ಇಲ್ಲಿನ ಪಿಜಿಯಲ್ಲಿ ನನಗೆ ರೂಮ್‌ ಮೇಟ್ಸ್‌, ಪಿಜಿ ಮೇಟ್ಸ್‌ ಜತೆಗೆ ಮೊಬೈಲ್‌ ಬಳಕೆಗೂ ಅವಕಾಶವಿದೆ. ಎಲ್ಲರ ಬಳಿಯೂ ಮೊಬೈಲ್‌ ಇದೆ. ಆದರೆ ಅಂದು ಇದ್ದ ಅನ್ಯೋನ್ಯತೆ ಇಂದು ಯಾರೊಂದಿಗೂ ಇಲ್ಲ. ಎಲ್ಲರಿಗೂ ಫೋನ್‌ನಲ್ಲೇ ಕೆಲಸ. ಒಬ್ಬರು ಇನ್ನೊಬ್ಬರ ಮುಖನೋಡಿ ಮಾತಾಡುವುದೂ ಕಡಿಮೆ. ಒಟ್ಟಿಗೆ ಕೂತು ಮಾತನಾಡುವ, ಆಟವಾಡುವ, ತಮಾಷೆ ಮಾಡುವ ಒಡನಾಟ ಯಾರೊಂದಿಗೂ ಇಲ್ಲ. ತಾವಾಯಿತು ತಮ್ಮ ಫೋನ್‌ ಆಯ್ತು. ಒಟ್ಟಾರೆ ಒಂದು ರೀತಿಯಲ್ಲಿ ಕೃತಕ ಸಂಬಂಧವನ್ನು ಬೆಳೆಸುತ್ತಿದ್ದೇವೆ.

Advertisement

ನಗು ಕೂಡ ಮನಃಪೂರ್ವಕವಾಗಿಲ್ಲ. ಇದು ನಮ್ಮ ದೇಹಕ್ಕಾಗಲಿ ಮನಸ್ಸಿಗಾಗಲಿ ಒಳ್ಳೆಯದಲ್ಲ. ನಾವು ಮಾತಾಡಿದರೆ ಮಾತ್ರ ಒಬ್ಬರನ್ನೊಬ್ಬರು ಅರಿಯಲು ಸಾಧ್ಯ ಹಾಗೂ ನಮ್ಮ ಮನಸ್ಸನ್ನು ಖುಷಿಯಲ್ಲಿಡಲು ಸಾಧ್ಯ. ನಾವು ಆದಷ್ಟು ಮಾತಾಡುತ್ತಾ, ಆಟವಾಡುತ್ತಾ ಇದ್ದರೆ ನಮ್ಮ ದೇಹಕ್ಕೂ ಒಳ್ಳೆಯದು. ಆದ್ದರಿಂದ ದಯವಿಟ್ಟು ಆದಷ್ಟು ನಿಮ್ಮ ಸುತ್ತಮುತ್ತವಿರುವ ಜನರೊಂದಿಗೆ ಬೆರೆಯಿರಿ. ಆಗ ಮಾತ್ರ ನೀವು ಸಂತೋಷದಿಂದ ಆರೋಗ್ಯವಾಗಿರುಲು ಸಾಧ್ಯ; ಅಂತೆಯೇ ನಿಮ್ಮ ಜತೆ ಇರುವವರನ್ನೂ ಖುಷಿಯಿಂದ ಇರಿಸಲು ಸಾಧ್ಯ. ಧನ್ಯ ದೇಚಮ್ಮ ತೊತ್ತಿಯಂಡ ಸಂತ ಅಲೋಶಿಯಸ್‌ ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next